5 ವರ್ಷದ ಮಗು ಸಾವು! ಆಟವಾಡುತ್ತಿದ್ದ ಮಕ್ಕಳ ಮೇಲೆ ಬಿದ್ದ ಕಾಂಪೌಂಡ್ ಗೇಟ್
ಮನೆಯ ಮುಂದೆ ಆಟವಾಡುತ್ತಿದ್ದ ಮಕ್ಕಳ ಮೇಲೆ ಏಕಾಏಕಿ ಕಾಂಪೌಂಡ್ ಗೇಟ್ ಕುಸಿದು ಬಿದ್ದ ಪರಿಣಾಮ ಐದು ವರ್ಷದ ಮಗು ಸ್ಥಳದಲ್ಲೇ ಸಾವನ್ನಪ್ಪಿ, ಮೂವರು ಮಕ್ಕಳು ಗಾಯಗೊಂಡಿದ್ದಾರೆ.

ಬೆಂಗಳೂರು ಉತ್ತರ ತಾಲೂಕಿನ ಚಿಕ್ಕಬಾಣಾವರದ ದ್ವಾರಕಾನಗರದಲ್ಲಿ ನಡೆದ ದುರಂತ ಒಂದು ಕುಟುಂಬವನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ. ಮನೆಯ ಮುಂದೆ ಆಟವಾಡುತ್ತಿದ್ದ ಮಕ್ಕಳ ಮೇಲೆ ಭಾರೀ ಕಾಂಪೌಂಡ್ ಗೇಟ್ ಕುಸಿದು ಬಿದ್ದ ಪರಿಣಾಮ ಐದು ವರ್ಷದ ಬಾಲಕಿ ಮೃತಪಟ್ಟಿದ್ದಾಳೆ.
ಮೃತ ಬಾಲಕಿಯನ್ನು ಗೌಸಿಯಾ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಆಕೆಯ ಅಣ್ಣ ಇಮಾಮ್ ಹಾಗೂ ತಂಗಿ ಶಕಿಲಾ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೊಬ್ಬ ಮಗು ಸುಮಯ್ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಘಟನೆ ನಡೆದ ವೇಳೆ ಮಕ್ಕಳು ಮನೆಯ ಸಮೀಪ ಆಟವಾಡುತ್ತಿದ್ದರು. ಈ ಸಮಯದಲ್ಲಿ ಏಕಾಏಕಿ ಕಾಂಪೌಂಡ್ ಗೇಟ್ ಕುಸಿದು ಮಕ್ಕಳ ಮೇಲೆಯೇ ಬಿದ್ದಿದೆ. ಗೇಟ್ನ ಭಾರದಿಂದ ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಗೌಸಿಯಾ ತಂದೆ-ತಾಯಿ ಇಮಾಮ್ ಮತ್ತು ರಮೀಜಾ ದಂಪತಿ ಕಳೆದ ಐದು ತಿಂಗಳ ಹಿಂದಷ್ಟೇ ಆ ಬಾಡಿಗೆ ಮನೆಗೆ ವಾಸಕ್ಕೆ ಬಂದಿದ್ದರು. ಬಸ್ ನಿಲ್ದಾಣದ ಬಳಿ ಹಣ್ಣು ವ್ಯಾಪಾರ ಮಾಡಿ ಜೀವನ ಸಾಗಿಸುತ್ತಿದ್ದ ಕುಟುಂಬಕ್ಕೆ ಈ ಘಟನೆ ಆಘಾತ ತಂದಿದೆ.
ಸ್ಥಳೀಯರು ತಕ್ಷಣ ಮಕ್ಕಳನ್ನು ಆಸ್ಪತ್ರೆಗೆ ಕರೆದೊಯ್ದರೂ, ಗೌಸಿಯಾ ಬದುಕುಳಿಯಲಿಲ್ಲ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಚಿಕ್ಕಬಾಣಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.



