Bengaluru: 77ನೇ ಗಣರಾಜ್ಯೋತ್ಸವ ಆಚರಣೆಗೆ ಬೆಂಗಳೂರು ಮಾಣಿಕ್ ಷಾ ಮೈದಾನ ಸಜ್ಜು, ಬಿಗಿ ಬಂದೋಬಸ್ತ್
77th Republic Day 2026: 77ನೇ ಗಣರಾಜ್ಯೋತ್ಸವ ಆಚರಣೆಗೆ ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನ ಸಂಪೂರ್ಣ ಸಜ್ಜಾಗಿದ್ದು, ರಾಜ್ಯಪಾಲರಿಂದ ಧ್ವಜಾರೋಹಣ ನಡೆಯಲಿದ್ದು ಸಾರ್ವಜನಿಕರಿಗೆ ಇ–ಪಾಸ್ ವ್ಯವಸ್ಥೆ ಹಾಗೂ ಸಂಚಾರ ನಿಯಂತ್ರಣ ಜಾರಿಯಲ್ಲಿದೆ ಎಂದು ಜಿಲ್ಲಾಡಳಿತ ತಿಳಿಸಿದೆ
- 77ನೇ ಗಣರಾಜ್ಯೋತ್ಸವಕ್ಕೆ ಮಾಣಿಕ್ ಷಾ ಮೈದಾನ ಸಿದ್ಧ
- ಗಣರಾಜ್ಯೋತ್ಸವ ದಿನ ಬಿಗಿ ಪೊಲೀಸ್ ಬಂದೋಬಸ್ತ್
- ಇ–ಪಾಸ್ ಇದ್ದವರಿಗೆ ಮಾತ್ರ ಪ್ರವೇಶ ಅನುಮತಿ
ಬೆಂಗಳೂರು (Bengaluru): 77ನೇ ಗಣರಾಜ್ಯೋತ್ಸವ ಸಂಭ್ರಮಕ್ಕೆ (Republic Day 2026) ಬೆಂಗಳೂರು ಐತಿಹಾಸಿಕ ಮಾಣಿಕ್ ಷಾ ಪರೇಡ್ ಮೈದಾನ (Manekshaw Parade Ground) ಸಜ್ಜಾಗಿದೆ. ಜನವರಿ 26ರಂದು ಬೆಳಗ್ಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಧ್ವಜಾರೋಹಣ ನೆರವೇರಿಸಲಿದ್ದು, ಇದಕ್ಕಾಗಿ ಅಗತ್ಯವಿರುವ ಎಲ್ಲಾ ವ್ಯವಸ್ಥೆಗಳು ಪೂರ್ಣಗೊಂಡಿವೆ. ಈಗಾಗಲೇ ಪೂರ್ವಭಾವಿ ತಾಲೀಮು ನಡೆಸಲಾಗಿದೆ.
ಭದ್ರತೆಗೆ ವಿಶೇಷ ಒತ್ತು
ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಈ ಬಾರಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಸುಮಾರು 2000ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಮೈದಾನ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ನಿಗಾವಹಿಸಲಾಗಿದೆ. ಭದ್ರತೆಗೆ 100ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳ ಜೊತೆಗೆ ಬ್ಯಾಗೇಜ್ ಸ್ಕ್ಯಾನರ್‌ಗಳನ್ನು ಅಳವಡಿಸಲಾಗಿದೆ.
ಇ–ಪಾಸ್ ವ್ಯವಸ್ಥೆ ಮತ್ತು ಪ್ರವೇಶ ನಿಯಮಗಳು
ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಗಮಿಸುವವರಿಗೆ ಆನ್‌ಲೈನ್ ಹಾಗೂ ಆಫ್‌ಲೈನ್ ಮೂಲಕ ಇ–ಪಾಸ್ ವ್ಯವಸ್ಥೆ ಮಾಡಲಾಗಿದೆ. ಪಾಸ್ ಹೊಂದಿರುವವರಿಗೆ ಮಾತ್ರ ಮೈದಾನದೊಳಗೆ ಪ್ರವೇಶ ನೀಡಲಾಗುವುದು. ಅಧಿಕಾರಿಗಳು ಮತ್ತು ಗಣ್ಯರಿಗೆ ವಿಶೇಷ ಪಾಸ್ ನೀಡಲಾಗಿದ್ದು, ಸಾರ್ವಜನಿಕರು ಮುಂಚಿತವಾಗಿ ಪಾಸ್ ಪಡೆದುಕೊಳ್ಳುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.
ಸಂಚಾರದಲ್ಲಿ ಬದಲಾವಣೆ
ಜನವರಿ 26ರಂದು ಬೆಳಗ್ಗೆ 8.30ರಿಂದ 10.30ರವರೆಗೆ ಮಾಣಿಕ್ ಷಾ ಪರೇಡ್ ಮೈದಾನದ ಸುತ್ತಮುತ್ತ ವಾಹನ ಸಂಚಾರದಲ್ಲಿ ನಿಯಂತ್ರಣ ಜಾರಿಯಲ್ಲಿರಲಿದೆ. ಅನಿಲ್ ಕುಂಬ್ಳೆ ವೃತ್ತದಿಂದ ಶಿವಾಜಿನಗರ ಬಸ್ ನಿಲ್ದಾಣದವರೆಗೆ ನೋ ಪಾರ್ಕಿಂಗ್ ವಲಯ ಘೋಷಿಸಲಾಗಿದೆ. ಸಾರ್ವಜನಿಕರು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಸೂಚಿಸಲಾಗಿದೆ.
ಕಾರ್ಯಕ್ರಮದ ವೇಳಾಪಟ್ಟಿ
ಬೆಳಗ್ಗೆ 9 ಗಂಟೆಗೆ ಧ್ವಜಾರೋಹಣ ನೆರವೇರಲಿದ್ದು, ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಕಾರ್ಯಕ್ರಮ ವೀಕ್ಷಿಸಲು ಆಗಮಿಸುವವರು ಬೆಳಗ್ಗೆ 8 ಗಂಟೆಯೊಳಗೆ ಸ್ಥಳಕ್ಕೆ ತಲುಪುವಂತೆ ಜಿಲ್ಲಾಡಳಿತ ಕೋರಿದೆ.



