ಬೆಂಗಳೂರು: 7 ಮಂದಿಯ ಹತ್ಯೆ ಪ್ರಕರಣ; ಏಳೂ ಹೆಣದ ಹೆಬ್ಬೆಟ್ಟು ಒತ್ತಿಕೊಂಡಿದ್ದ ಹಂತಕ
ಪತ್ನಿಯ ಕುಟುಂಬದ ಕೋಟ್ಯಂತರ ರೂಪಾಯಿ ಆಸ್ತಿ ಪಡೆಯುವ ಆಸೆಯಿಂದ ಭೀಕರ ಕೃತ್ಯ ಎಸಗಿದ ವ್ಯಕ್ತಿ, ಕೊಲೆ ಬಳಿಕ ಮೃತರ ಹೆಬ್ಬೆಟ್ಟು ಗುರುತು ಪಡೆದಿದ್ದಾನೆ. ಮಗಳ ಸಹಕಾರವೂ ತನಿಖೆಯಲ್ಲಿ ಬಹಿರಂಗವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬೆಂಗಳೂರು (Bengaluru): ಒಂದೇ ಕುಟುಂಬದ ಏಳು ಮಂದಿಯ ಹತ್ಯೆ ಪ್ರಕರಣದಲ್ಲಿ ದಿನಕ್ಕೊಂದು ಆಘಾತಕಾರಿ ಸಂಗತಿಗಳು ಹೊರಬರುತ್ತಿವೆ. ಆಸ್ತಿ ವಿಚಾರಕ್ಕಾಗಿ ಇಷ್ಟು ದೊಡ್ಡ ಕೃತ್ಯ ಎಸಗಿದ್ದಾನೆ ಎನ್ನಲಾಗಿರುವ ಆರೋಪಿ ಇಂದುಶೇಖರ್, ಕೊಲೆ ಬಳಿಕವೂ ತನ್ನ ಸಂಚನ್ನು ಮುಂದುವರಿಸಿದ್ದ ಎಂಬ ಮಾಹಿತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಶ್ರೀರಾಮಪುರದಲ್ಲಿರುವ ಪತ್ನಿಯ ಕುಟುಂಬಕ್ಕೆ ಸೇರಿದ ಸುಮಾರು ₹2.5 ಕೋಟಿ ಮೌಲ್ಯದ ಆಸ್ತಿಯ ಮೇಲೆ ಆರೋಪಿಯ ಕಣ್ಣಿತ್ತು ಎನ್ನಲಾಗಿದೆ. ಈ ವಿಚಾರವಾಗಿ ಪತ್ನಿ ಸುನೀತಾ ಮತ್ತು ಆತನ ನಡುವೆ ಹಲವು ವರ್ಷಗಳಿಂದ ಮನಸ್ತಾಪವಿತ್ತು. ಆಸ್ತಿಯನ್ನು ತನ್ನದಾಗಿಸಿಕೊಳ್ಳುವ ಉದ್ದೇಶದಿಂದಲೇ ಕೊಲೆಗೂ ಮುನ್ನ ಸ್ಟಾಂಪ್ ಪೇಪರ್‌ಗಳನ್ನು ಸಿದ್ಧಪಡಿಸಿಕೊಂಡಿದ್ದ ಎಂಬುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.
ಪತ್ನಿ ಸುನೀತಾ, ಅತ್ತೆ ರೂಪಾವತಿ, ಬಾಮೈದರಾದ ಶಿವಕುಮಾರ್ ಮತ್ತು ಶಂಕರ್ ಹಾಗೂ ನಾದಿನಿಯರಾದ ದಿವ್ಯಾ ಮತ್ತು ನಳಿನಿ ಸೇರಿದಂತೆ ಕುಟುಂಬದ ಸದಸ್ಯರನ್ನು ಹತ್ಯೆ ಮಾಡಿದ ಬಳಿಕ, ಅವರ ಹೆಬ್ಬೆಟ್ಟು ಗುರುತುಗಳನ್ನು (Thumb Impression) ಸ್ಟಾಂಪ್ ಪೇಪರ್ ಮೇಲೆ ಒತ್ತಿಸಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇಷ್ಟೇ ಅಲ್ಲ, ಮೃತದೇಹಗಳನ್ನು ಗೋಣಿ ಚೀಲಗಳಲ್ಲಿ ತುಂಬಿ ತನ್ನ ಕಾರಿನಲ್ಲೇ ಸಾಗಿಸಿದ್ದಾನೆ ಎನ್ನಲಾಗಿದೆ. ನಂತರ ದಟ್ಟ ಅರಣ್ಯ ಪ್ರದೇಶದಲ್ಲಿ ಅವುಗಳನ್ನು ಎಸೆದು ಬಂದಿದ್ದಾನೆ. ಕುಟುಂಬದವರು ತೀರ್ಥಯಾತ್ರೆಗೆ ತೆರಳಿದ್ದಾರೆ ಎಂದು ಸಂಬಂಧಿಕರಿಗೆ ತಿಳಿಸುವ ಮೂಲಕ ಘಟನೆ ಹೊರಬರದಂತೆ ನೋಡಿಕೊಳ್ಳಲು ಪ್ರಯತ್ನಿಸಿದ್ದ ಎಂಬ ಆರೋಪವೂ ಕೇಳಿಬಂದಿದೆ.
ಇನ್ನು ವಿಚಾರಣೆ ವೇಳೆ ಪತ್ನಿ ತನ್ನನ್ನು ಆಗಾಗ ನಿಂದಿಸುತ್ತಿದ್ದಳು, ಸಣ್ಣಪುಟ್ಟ ವಿಚಾರಕ್ಕೂ ಜಗಳ ಮಾಡುತ್ತಿದ್ದಳು ಎಂದು ಆರೋಪಿ ಹೇಳಿಕೊಂಡಿದ್ದಾನೆ ಎನ್ನಲಾಗಿದೆ. ತನ್ನ ಸಂಸಾರದ ವಿಚಾರದಲ್ಲಿ ಪತ್ನಿಯ ತಾಯಿ ಮತ್ತು ಸಹೋದರರು ಹೆಚ್ಚು ಹಸ್ತಕ್ಷೇಪ ಮಾಡುತ್ತಿದ್ದರು ಎಂಬ ಕಾರಣವನ್ನೂ ನೀಡಿದ್ದಾನೆ.
ಆದರೆ ತನಿಖಾಧಿಕಾರಿಗಳನ್ನು ಬೆಚ್ಚಿಬೀಳಿಸಿರುವುದು ಆತನ ಮತ್ತೊಂದು ಹೇಳಿಕೆ. ಇಷ್ಟೊಂದು ಜನರನ್ನು ಕೊಂದಿದ್ದಕ್ಕೆ ಯಾವುದೇ ಪಶ್ಚಾತ್ತಾಪವಿಲ್ಲ, ಬದಲಿಗೆ ಈಗ ಸಮಾಧಾನವಾಗಿದೆ ಎಂದು ಆರೋಪಿ ಹೇಳಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಈ ಪ್ರಕರಣದಲ್ಲಿ ಆರೋಪಿಯ ಮಗಳ ಪಾತ್ರದ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತಂದೆ ಪತ್ನಿಯ ಕುಟುಂಬದ ಆಸ್ತಿಯನ್ನು ತನ್ನ ಹೆಸರಿಗೆ ಮಾಡಿಕೊಡುವುದಾಗಿ ಭರವಸೆ ನೀಡಿದ್ದರಿಂದ ಸಹಕರಿಸಿದ್ದಾಗಿ ಆಕೆ ಹೇಳಿದ್ದಾಳೆ ಎನ್ನಲಾಗಿದೆ. ಕೊಲೆ, ಸಾಕ್ಷ್ಯ ನಾಶ ಮತ್ತು ಮೃತದೇಹಗಳ ಸಾಗಣೆಯಲ್ಲಿ ಆಕೆಯೂ ಭಾಗಿಯಾಗಿದ್ದಳೇ ಎಂಬುದರ ಕುರಿತು ತನಿಖೆ ಮುಂದುವರಿದಿದೆ.
ಕರ್ನಾಟಕ ರಾಜ್ಯದ ಮೂಲೆಮೂಲೆಗಳ ಕನ್ನಡ ಸುದ್ದಿಗಳ ಜೊತೆಗೆ ದಿನದ ಪ್ರಮುಖ ಬೆಳವಣಿಗೆಗಳನ್ನು Kannada News Today ಮೂಲಕ ತಿಳಿಯಿರಿ.







