Bengaluru AQI: ಬೆಂಗಳೂರು ಗಾಳಿ ಕಳಪೆ ಮಟ್ಟಕ್ಕೆ! ವಾಯು ಗುಣಮಟ್ಟ ಏಕಾಏಕಿ ಕುಸಿತ
Bengaluru AQI: ಬೆಂಗಳೂರು ಸೇರಿದಂತೆ ರಾಜ್ಯದ ಹಲವು ನಗರಗಳಲ್ಲಿ ವಾಯು ಗುಣಮಟ್ಟ ಹದಗೆಟ್ಟಿದ್ದು AQI 150 ಮೀರಿದೆ. ತಜ್ಞರು ಶ್ವಾಸಕೋಶ ಸಮಸ್ಯೆಗಳ ಭೀತಿ ವ್ಯಕ್ತಪಡಿಸಿ ಜನರು ಎಚ್ಚರಿಕೆಯಿಂದ ಇರಬೇಕೆಂದು ಸೂಚನೆ ನೀಡಿದ್ದಾರೆ.

ಬೆಂಗಳೂರು (Bengaluru AQI): ಕರ್ನಾಟಕ ರಾಜ್ಯದ ಹಲವು ಭಾಗಗಳಲ್ಲಿ ಬಿಸಿಲಿನ ತೀವ್ರತೆ ಹೆಚ್ಚುತ್ತಿರುವ ಹಿನ್ನೆಲೆ, ಬೆಂಗಳೂರು ಸೇರಿದಂತೆ ಅನೇಕ ನಗರಗಳಲ್ಲಿ ವಾಯು ಗುಣಮಟ್ಟ (Karnataka Air Quality) ಕೂಡ ಕುಸಿತ ಕಂಡಿದೆ. ಹವಾಮಾನ ಬದಲಾವಣೆ ಹಾಗೂ ಶುಷ್ಕ ವಾತಾವರಣದ ಪರಿಣಾಮ ಗಾಳಿಯ ಗುಣಮಟ್ಟ ದಿನದಿಂದ ದಿನಕ್ಕೆ ಹದಗೆಡುತ್ತಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಇತ್ತೀಚಿನ ಅಂಕಿಅಂಶಗಳ ಪ್ರಕಾರ ಬೆಂಗಳೂರಿನ ಏರ್ ಕ್ವಾಲಿಟಿ ಇಂಡೆಕ್ಸ್ (AQI) 174ಕ್ಕೆ ಏರಿಕೆಯಾಗಿದೆ.
ತಜ್ಞರ ಪ್ರಕಾರ ಈ ಮಟ್ಟದ ವಾಯು ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಬಹುದು. ವಿಶೇಷವಾಗಿ ಶ್ವಾಸಕೋಶ ಸಮಸ್ಯೆ ಇರುವವರು, ಮಕ್ಕಳು ಮತ್ತು ವೃದ್ಧರು ಹೆಚ್ಚು ಜಾಗ್ರತೆ ವಹಿಸಬೇಕೆಂದು ಸಲಹೆ ನೀಡಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ (WHO) ಮಾನದಂಡಗಳ ಪ್ರಕಾರ ಈ ಮಟ್ಟದ ಗಾಳಿ ದೀರ್ಘಕಾಲದಲ್ಲಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ.
ರಾಜ್ಯದ ಇತರ ನಗರಗಳಲ್ಲೂ AQI ಏರಿಕೆ
ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಹಲವು ಪ್ರಮುಖ ನಗರಗಳಲ್ಲಿ ಕೂಡ ಗಾಳಿಯ ಗುಣಮಟ್ಟ ಕುಸಿತ ಕಂಡಿದೆ. ಶಿವಮೊಗ್ಗದಲ್ಲಿ AQI 176 ದಾಖಲಾಗಿದ್ದು, ಮಂಗಳೂರಿನಲ್ಲಿ 171, ಮೈಸೂರಿನಲ್ಲಿ 162 ಮತ್ತು ಹುಬ್ಬಳ್ಳಿಯಲ್ಲಿ 161 ದಾಖಲಾಗಿದೆ. ಬೆಳಗಾವಿ ಮತ್ತು ಬಳ್ಳಾರಿಯಲ್ಲಿ 156 AQI ಇದ್ದು, ಉಡುಪಿ ಹಾಗೂ ವಿಜಯಪುರದಲ್ಲಿ 164 ಮಟ್ಟದಲ್ಲಿ ಗಾಳಿಯ ಗುಣಮಟ್ಟ ದಾಖಲಾಗಿದೆ.
ಇದೇ ವೇಳೆ ಕಲಬುರ್ಗಿಯಲ್ಲಿ AQI 151 ದಾಖಲಾಗಿದ್ದು, 200ರ ಗಡಿಗೆ ಸಮೀಪಿಸುವ ಆತಂಕ ಎದುರಾಗಿದೆ. ತಜ್ಞರು ಈ ಪರಿಸ್ಥಿತಿಯನ್ನು ಗಮನಿಸಿ ಜನರು ಅನಗತ್ಯವಾಗಿ ಹೊರಗೆ ಹೋಗದಂತೆ ಎಚ್ಚರಿಕೆ ನೀಡುತ್ತಿದ್ದಾರೆ.
ರಾಜ್ಯದ ಪ್ರಮುಖ ನಗರಗಳ ಇಂದಿನ AQI ಮಟ್ಟ
ಬೆಂಗಳೂರು – 174
ಶಿವಮೊಗ್ಗ – 176
ಮಂಗಳೂರು – 171
ಮೈಸೂರು – 162
ಹುಬ್ಬಳ್ಳಿ – 161
ಬೆಳಗಾವಿ – 156
ಬಳ್ಳಾರಿ – 156
ಉಡುಪಿ – 164
ವಿಜಯಪುರ – 164
ಕಲಬುರ್ಗಿ – 151
ಗಾಳಿಯ ಗುಣಮಟ್ಟ ಹೇಗೆ ಅಳೆಯಲಾಗುತ್ತದೆ?
ವಾಯು ಗುಣಮಟ್ಟವನ್ನು ಏರ್ ಕ್ವಾಲಿಟಿ ಇಂಡೆಕ್ಸ್ (AQI) ಮೂಲಕ ಅಳೆಯಲಾಗುತ್ತದೆ. AQI ಅಂಕೆಗಳು ಗಾಳಿಯ ಸ್ವಚ್ಛತೆ ಹಾಗೂ ಮಾಲಿನ್ಯದ ಮಟ್ಟವನ್ನು ಸೂಚಿಸುತ್ತವೆ.
ಉತ್ತಮ: 0 – 50
ಮಧ್ಯಮ: 50 – 100
ಕಳಪೆ: 100 – 150
ಅನಾರೋಗ್ಯಕರ: 150 – 200
ಗಂಭೀರ: 200 – 300
ಅಪಾಯಕಾರಿ: 300 – 500+
ತಜ್ಞರು ಸಲಹೆ ನೀಡಿರುವಂತೆ, ಗಾಳಿಯ ಗುಣಮಟ್ಟ ಕಳಪೆ ಇರುವ ಸಂದರ್ಭಗಳಲ್ಲಿ ಹೊರಾಂಗಣ ಚಟುವಟಿಕೆಗಳನ್ನು ಕಡಿಮೆ ಮಾಡುವುದು, ಮಾಸ್ಕ್ ಧರಿಸುವುದು ಹಾಗೂ ಆರೋಗ್ಯದ ಬಗ್ಗೆ ವಿಶೇಷ ಗಮನ ವಹಿಸುವುದು ಅಗತ್ಯವಾಗಿದೆ.



