Bengaluru Flyover: ಬೆಂಗಳೂರು ಆರೆಂಜ್ ಲೈನ್ಗಾಗಿ ಮತ್ತೊಂದು ಫ್ಲೈಓವರ್ ತೆರವು! ಟ್ರಾಫಿಕ್ ಸಮಸ್ಯೆ ಹೆಚ್ಚುವ ಆತಂಕ
Bengaluru Flyover: ಬೆಂಗಳೂರು ಆರೆಂಜ್ ಲೈನ್ ಮೆಟ್ರೋ ಕಾಮಗಾರಿ ಹಿನ್ನೆಲೆಯಲ್ಲಿ ಜೆಪಿ ನಗರದ ಡಾಲರ್ಸ್ ಕಾಲೋನಿ ಫ್ಲೈಓವರ್ ತೆರವಿಗೆ BMRCL ಟೆಂಡರ್ ಕರೆದಿದ್ದು, ಮುಂದಿನ ದಿನಗಳಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚುವ ಆತಂಕ ಸ್ಥಳೀಯರಲ್ಲಿ ಮೂಡಿದೆ.

- ಬೆಂಗಳೂರು ಮೆಟ್ರೋಗೆ ಫ್ಲೈಓವರ್ ಡೆಮಾಲಿಷನ್ ಯೋಜನೆ
- ಡಾಲರ್ಸ್ ಕಾಲೋನಿ ಫ್ಲೈಓವರ್ ತೆರವಿಗೆ BMRCL ಟೆಂಡರ್
- ಟ್ರಾಫಿಕ್ ಮೇಲೆ ಆರೆಂಜ್ ಲೈನ್ ಕಾಮಗಾರಿಯ ಪರಿಣಾಮ
ಬೆಂಗಳೂರು (Bengaluru): ಬೆಂಗಳೂರು ನಗರದಲ್ಲಿ ಮೆಟ್ರೋ ವಿಸ್ತರಣೆ ಕಾರ್ಯ ವೇಗ ಪಡೆಯುತ್ತಿದ್ದಂತೆ, ಮತ್ತೊಂದು ಪ್ರಮುಖ ಫ್ಲೈಓವರ್ (Flyover) ತೆರವಿನ ಚರ್ಚೆ ಆರಂಭವಾಗಿದೆ.
ನಮ್ಮ ಮೆಟ್ರೋ ಆರೆಂಜ್ ಲೈನ್ ಯೋಜನೆ (Bengaluru Orange Line Metro) ಅಡಿಯಲ್ಲಿ ಜೆಪಿ ನಗರದ ಡಾಲರ್ಸ್ ಕಾಲೋನಿ ಜಂಕ್ಷನ್ ಫ್ಲೈಓವರ್ ತೆರವುಗೊಳಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಟೆಂಡರ್ ಆಹ್ವಾನಿಸಿದ್ದು, ಈ ನಿರ್ಧಾರ ನಗರ ಸಂಚಾರ ವ್ಯವಸ್ಥೆಯ ಮೇಲೆ ದೊಡ್ಡ ಪರಿಣಾಮ ಬೀರುವ ಸಾಧ್ಯತೆ ಇದೆ.
ಡಾಲರ್ಸ್ ಕಾಲೋನಿ ಫ್ಲೈಓವರ್ ಜೆಪಿ ನಗರ, ಜಯನಗರ, ಬನ್ನೇರುಘಟ್ಟ ರಸ್ತೆ ಹಾಗೂ ಮೈಸೂರು ರಸ್ತೆ ಭಾಗಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಮೇಲ್ಸುತುವೆಯಾಗಿದೆ. ಈಗಾಗಲೇ ಜಯದೇವ ಫ್ಲೈಓವರ್ ತೆರವಿನಿಂದ ವಾಹನ ಸವಾರರು ತೊಂದರೆ ಅನುಭವಿಸುತ್ತಿರುವ ನಡುವೆ, ಮತ್ತೊಂದು ಫ್ಲೈಓವರ್ ತೆರವು ವಿಚಾರ ಜನರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
ಒಂದು ಕಿಲೋಮೀಟರ್ ಉದ್ದದ ಮೇಲ್ಸೇತುವೆ
2018ರಲ್ಲಿ ಸುಮಾರು ₹25 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಈ ಫ್ಲೈಓವರ್ನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಿದ್ದರು. ಸುಮಾರು ಒಂದು ಕಿಲೋಮೀಟರ್ ಉದ್ದದ ಈ ಮೇಲ್ಸೇತುವೆ ದೈನಂದಿನ ಸಂಚಾರಕ್ಕೆ ಬಹುಮುಖ್ಯವಾಗಿತ್ತು. ಇದೀಗ ಅದನ್ನು ಸಂಪೂರ್ಣವಾಗಿ ತೆರವುಗೊಳಿಸುವ ನಿರ್ಧಾರದಿಂದ ಸ್ಥಳೀಯ ನಿವಾಸಿಗಳು ಮತ್ತು ವಾಹನ ಸವಾರರು ಆತಂಕ ವ್ಯಕ್ತಪಡಿಸಿದ್ದಾರೆ.
ಈ ನಿರ್ಧಾರವು ಜೆಪಿ ನಗರ ನಾಲ್ಕನೇ ಹಂತದಿಂದ ಕೆಂಪಾಪುರವರೆಗಿನ ಆರೆಂಜ್ ಲೈನ್ ಮೆಟ್ರೋ ಕಾಮಗಾರಿ ಹಿನ್ನೆಲೆಯಲ್ಲೇ ಕೈಗೊಳ್ಳಲಾಗಿದೆ. ಮೆಟ್ರೋ ಮಾರ್ಗದ ಜೋತೆಗೆ ಡಬಲ್ ಡೆಕ್ಕರ್ ಫ್ಲೈಓವರ್ ನಿರ್ಮಿಸಲು BMRCL ಯೋಜನೆ ರೂಪಿಸಿದ್ದು, ಸಿವಿಲ್ ಕಾಮಗಾರಿಗೆ ಈಗಾಗಲೇ ಟೆಂಡರ್ ಆಹ್ವಾನಿಸಲಾಗಿದೆ.
ಕಾಮಗಾರಿ ಮುಗಿಯುವವರೆಗೆ ಟ್ರಾಫಿಕ್ ಕಷ್ಟ
ಮೂರನೇ ಹಂತದ ಮೆಟ್ರೋ ಯೋಜನೆಯಾಗಿರುವ ಆರೆಂಜ್ ಲೈನ್ ಒಟ್ಟು 44.65 ಕಿಮೀ ಉದ್ದವಿದ್ದು, ಎರಡು ಪ್ರಮುಖ ಕಾರಿಡಾರ್ಗಳನ್ನು ಒಳಗೊಂಡಿದೆ. ಒಂದು ಕಾರಿಡಾರ್ ಜೆಪಿ ನಗರ ನಾಲ್ಕನೇ ಹಂತದಿಂದ ಕೆಂಪಾಪುರವರೆಗೆ ಸಾಗಲಿದ್ದು, ಇನ್ನೊಂದು ಹೊಸಹಳ್ಳಿ ಮೆಟ್ರೋ ನಿಲ್ದಾಣದಿಂದ ಕಡಬಗೆರೆವರೆಗೆ ವಿಸ್ತರಲಿದೆ.
ಸ್ಥಳೀಯರು ಮೆಟ್ರೋ ಯೋಜನೆಯನ್ನು ದೀರ್ಘಾವಧಿಯ ಅಭಿವೃದ್ಧಿಗೆ ಅಗತ್ಯವೆಂದು ಒಪ್ಪಿಕೊಂಡರೂ, ಡಬಲ್ ಡೆಕ್ಕರ್ ಫ್ಲೈಓವರ್ ನಿರ್ಮಾಣ ಪೂರ್ಣಗೊಳ್ಳುವವರೆಗೆ ನಗರದಲ್ಲಿ ತೀವ್ರ ಟ್ರಾಫಿಕ್ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಪರಿಣಾಮಕಾರಿ ಟ್ರಾಫಿಕ್ ನಿರ್ವಹಣೆ ಮತ್ತು ಪರ್ಯಾಯ ಮಾರ್ಗಗಳ ವ್ಯವಸ್ಥೆ ಅಗತ್ಯವೆಂಬ ಒತ್ತಾಯ ಕೇಳಿಬರುತ್ತಿದೆ.



