ಮಾಸಿಕ ಗೌರವಧನ ಹೆಚ್ಚಳಕ್ಕೆ ಸರ್ಕಾರ ಲಿಖಿತ ಒಪ್ಪಿಗೆ; ಆಶಾ ಕಾರ್ಯಕರ್ತೆಯರ ಧರಣಿ ಅಂತ್ಯ
ಬೆಂಗಳೂರು ಫ್ರೀಡಂ ಪಾರ್ಕ್ನಲ್ಲಿ ಹಲವು ದಿನಗಳಿಂದ ನಡೆಯುತ್ತಿದ್ದ ಆಶಾ ಕಾರ್ಯಕರ್ತೆಯರ ಪ್ರತಿಭಟನೆಗೆ ತೆರೆ ಬಿದ್ದಿದೆ. ಮಾಸಿಕ ಗೌರವಧನ ಹೆಚ್ಚಳಕ್ಕೆ ಸರ್ಕಾರ ಲಿಖಿತ ಒಪ್ಪಿಗೆ ನೀಡಿದ್ದು, ಸಂಘಟನೆ ಧರಣಿ ಹಿಂಪಡೆಯಲು ನಿರ್ಧರಿಸಿದೆ.

ಬೆಂಗಳೂರು, ನವೆಂಬರ್ 29: ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಹಲವು ದಿನಗಳಿಂದ ಬೀದಿಗಿಳಿದು ಹೋರಾಟ ನಡೆಸುತ್ತಿದ್ದ ಆಶಾ ಕಾರ್ಯಕರ್ತೆಯರಿಗೆ ಕೊನೆಗೂ ಮಹತ್ವದ ಭರವಸೆ ಸಿಕ್ಕಿದೆ. ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ನಡೆಯುತ್ತಿದ್ದ ಧರಣಿಯನ್ನು (Protest) ಅಂತ್ಯಗೊಳಿಸಲು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ನಿರ್ಧರಿಸಿದೆ.
ಆಶಾ ಕಾರ್ಯಕರ್ತೆಯರ ಪ್ರಮುಖ ಬೇಡಿಕೆಯಾಗಿದ್ದ ಮಾಸಿಕ ಗೌರವಧನ ಹೆಚ್ಚಳಕ್ಕೆ ರಾಜ್ಯ ಸರ್ಕಾರ ಲಿಖಿತ ಒಪ್ಪಿಗೆ ನೀಡಿದೆ. ಅದರಂತೆ ಪ್ರತಿ ತಿಂಗಳ ಗೌರವಧನದಲ್ಲಿ 2,000 ರೂಪಾಯಿ ಹೆಚ್ಚಳ ಮಾಡಲು ಆದೇಶ ಹೊರಡಿಸಲಾಗಿದೆ. ಈ ಬೆಳವಣಿಗೆ ಪ್ರತಿಭಟನಾನಿರತ ಕಾರ್ಯಕರ್ತೆಯರಲ್ಲಿ ಸಮಾಧಾನ ಮೂಡಿಸಿದೆ.
ಇದರ ಜತೆಗೆ ಗ್ರೂಪ್ ಆಧಾರಿತ ಪ್ರೋತ್ಸಾಹಧನ (Group Based Incentive) ರೂಪದಲ್ಲಿ 1,000 ರೂಪಾಯಿ ನೀಡುವ ಸಂಬಂಧ ಆರೋಗ್ಯ ಇಲಾಖೆ ಈಗಾಗಲೇ ಆದೇಶ ಹೊರಡಿಸಿದೆ. ಹೀಗಾಗಿ ಗೌರವಧನ ಹೆಚ್ಚಳದ ಜೊತೆಗೆ ಹೆಚ್ಚುವರಿ ಪ್ರೋತ್ಸಾಹಧನವೂ ಸಿಗುವ ನಿರೀಕ್ಷೆಯಿದೆ.
ಮುಂಬರುವ ರಾಜ್ಯ ಬಜೆಟ್ನಲ್ಲಿ ಮತ್ತೊಂದು 1,000 ರೂಪಾಯಿ ಹೆಚ್ಚಳ ಘೋಷಣೆಯಾಗಬಹುದು ಎಂಬ ನಿರೀಕ್ಷೆಯನ್ನೂ ಕಾರ್ಯಕರ್ತೆಯರು ಹೊಂದಿದ್ದಾರೆ. ಈ ಬೇಡಿಕೆಯೂ ಈಡೇರಿದರೆ ತಮ್ಮ ಹೋರಾಟದ ಪ್ರಮುಖ ಉದ್ದೇಶ ಸಾಕಾರವಾಗಲಿದೆ ಎಂಬುದು ಸಂಘಟನೆಯ ಅಭಿಪ್ರಾಯವಾಗಿದೆ.
ಸರ್ಕಾರದ ಲಿಖಿತ ಭರವಸೆ ದೊರೆತ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಸಭೆ ನಡೆಸಿ ಮುಂದಿನ ನಿರ್ಧಾರ ಕೈಗೊಂಡಿತು. ಧರಣಿಯನ್ನು ಮುಂದುವರಿಸುವ ಅಗತ್ಯವಿದೆಯೇ ಎಂಬ ಕುರಿತು ಚರ್ಚಿಸಿದ ಬಳಿಕ ಪ್ರತಿಭಟನೆ ಹಿಂಪಡೆಯಲು ತೀರ್ಮಾನಿಸಲಾಯಿತು.
ನಂತರ ಸಂಘದ ಕಾರ್ಯದರ್ಶಿ ಡಿ. ನಾಗಲಕ್ಷ್ಮೀ ಅವರು ವೇದಿಕೆಯಿಂದಲೇ ಪ್ರತಿಭಟನೆ ಅಂತ್ಯಗೊಂಡಿರುವುದನ್ನು ಅಧಿಕೃತವಾಗಿ ಪ್ರಕಟಿಸಿದರು. ಸರ್ಕಾರ ತಮ್ಮ ಬೇಡಿಕೆಗೆ ಸ್ಪಂದಿಸಿರುವುದು ಹೋರಾಟಕ್ಕೆ ಸಿಕ್ಕ ಮೊದಲ ಜಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಹಲವು ದಿನಗಳ ಕಾಲ ನಡೆದ ಹೋರಾಟದ ಬಳಿಕ ಫ್ರೀಡಂ ಪಾರ್ಕ್ನಿಂದ ಆಶಾ ಕಾರ್ಯಕರ್ತೆಯರು ನಿರ್ಗಮಿಸಲು ಸಿದ್ಧರಾಗಿದ್ದಾರೆ. ಆದರೆ ಉಳಿದ ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರದ ಮುಂದಿನ ಕ್ರಮಗಳ ಮೇಲೆಯೂ ಸಂಘಟನೆ ಗಮನಹರಿಸಲಿದೆ.



