ಬೆಂಗಳೂರು: ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಡಿಕ್ಕಿಗೆ ಆಟೋ ಚಾಲಕ ಸಾವು
ಕೆ.ಆರ್. ಸರ್ಕಲ್ನಲ್ಲಿ ಸಿಗ್ನಲ್ ಬಳಿ ನಿಂತಿದ್ದ ಆಟೋಗೆ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಡಿಕ್ಕಿ ಹೊಡೆದ ಪರಿಣಾಮ ಗಾಯಗೊಂಡಿದ್ದ ಚಾಲಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಪ್ರಕರಣ ದಾಖಲಿಸಿ ಬಸ್ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬೆಂಗಳೂರು: ನಗರದ ಕೆ.ಆರ್. ಸರ್ಕಲ್ನಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಆಟೋ ಚಾಲಕ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಸಿಂಗಯ್ಯನಪಾಳ್ಯದ ನಿವಾಸಿ 60 ವರ್ಷದ ಕೃಷ್ಣಮೂರ್ತಿ ಮೃತಪಟ್ಟವರಾಗಿದ್ದು, ಅವರ ನಿಧನದಿಂದ ಕುಟುಂಬದಲ್ಲಿ ಶೋಕ ಆವರಿಸಿದೆ.
ಪೊಲೀಸರ ಮಾಹಿತಿ ಪ್ರಕಾರ, ಶನಿವಾರ ಮಧ್ಯಾಹ್ನ ಸುಮಾರು 3.15ರ ವೇಳೆಗೆ ಮೆಜೆಸ್ಟಿಕ್ನಿಂದ ಚಂದಾಪುರದತ್ತ ತೆರಳುತ್ತಿದ್ದ ಬಿಎಂಟಿಸಿ ಎಲೆಕ್ಟ್ರಿಕ್ ಬಸ್, ಕೆ.ಆರ್. ಸರ್ಕಲ್ನ ಇಳಿಜಾರು ರಸ್ತೆಯಲ್ಲಿ ಸಿಗ್ನಲ್ ಬಳಿ ನಿಂತಿದ್ದ ಆಟೋ ರಿಕ್ಷಾದ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಆಟೋ ಮುಂದೆ ಸಾಗುತ್ತಿದ್ದ ಕಾರಿಗೂ ಅಪ್ಪಳಿಸಿದ್ದು, ಬಳಿಕ ನಿಯಂತ್ರಣ ಕಳೆದುಕೊಂಡ ಬಸ್ ರಸ್ತೆ ಬದಿಯ ವಿದ್ಯುತ್ ಕಂಬ ಮತ್ತು ಮರಕ್ಕೆ ಡಿಕ್ಕಿ ಹೊಡೆದು ನಿಂತಿದೆ.
ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಆಟೋ ಚಾಲಕ ಕೃಷ್ಣಮೂರ್ತಿಯನ್ನು ತಕ್ಷಣವೇ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ವೈದ್ಯರು ಚಿಕಿತ್ಸೆ ನೀಡಿದರೂ ಅವರ ಜೀವ ಉಳಿಸಲು ಸಾಧ್ಯವಾಗಲಿಲ್ಲ. ನಂತರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.
ಘಟನೆಯ ನಂತರ ಬಸ್ಗೆ ಬ್ರೇಕ್ ವೈಫಲ್ಯ ಉಂಟಾಗಿದೆ ಎಂದು ಚಾಲಕ ಹೇಳಿರುವುದಾಗಿ ತಿಳಿದುಬಂದಿದೆ. ಆದರೆ ಬಸ್ ಅನ್ನು ಟೋಯಿಂಗ್ ಮಾಡದೇ ಸ್ವತಃ ಚಾಲನೆ ಮಾಡಿಕೊಂಡೇ ಸ್ಥಳದಿಂದ ಕೊಂಡೊಯ್ಯಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ತಾಂತ್ರಿಕ ಪರಿಶೀಲನೆಗೂ ಪೊಲೀಸರು ಮುಂದಾಗಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಸಂಚಾರ ಪೊಲೀಸರು ಬಿಎಂಟಿಸಿ ಬಸ್ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಅಪಘಾತಕ್ಕೆ ನಿಖರ ಕಾರಣವೇನು ಎಂಬುದನ್ನು ತನಿಖೆಯ ಬಳಿಕ ಸ್ಪಷ್ಟಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ಥಳೀಯರ ಪ್ರಕಾರ, ಫ್ರೀಡಂ ಪಾರ್ಕ್ನಿಂದ ಕೆ.ಆರ್. ಸರ್ಕಲ್ವರೆಗೆ ಇರುವ ಇಳಿಜಾರು ರಸ್ತೆ ಹಾಗೂ ವಿವಿಧ ಮಾರ್ಗಗಳು ಒಂದೇ ಜಂಕ್ಷನ್ನಲ್ಲಿ ಸೇರುವುದರಿಂದ ಇಲ್ಲಿ ಆಗಾಗ ಅಪಘಾತಗಳು ಸಂಭವಿಸುತ್ತಿವೆ. ವಿಶೇಷವಾಗಿ ಸಿಗ್ನಲ್ ದಾಟಲು ಕೆಲ ವಾಹನಗಳು ಅತಿವೇಗದಲ್ಲಿ ಚಲಿಸುವುದು ಅಪಾಯಕ್ಕೆ ಪ್ರಮುಖ ಕಾರಣವಾಗುತ್ತಿದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.
More:
Karnataka Reservoir
Safety Concern
Gst intelligence
Fake God Man
Karnataka Police Recruitment



