ಬೆಂಗಳೂರು ಆಟೋ ಪ್ರಯಾಣಿಕರಿಗೆ ಹೊಡೆತ! ಮೀಟರ್ ದರ ಹೆಚ್ಚಳ ಸಾಧ್ಯತೆ
ಇರಾನ್-ಇಸ್ರೇಲ್-ಅಮೆರಿಕ ಯುದ್ಧದ ಪರಿಣಾಮವಾಗಿ ಆಟೋ ಎಲ್ಪಿಜಿ ದರ ಏರಿಕೆ ಆರಂಭವಾಗಿದೆ. ಬೆಲೆ ಏರಿಕೆಯಿಂದ ಬೆಂಗಳೂರು ಆಟೋ ಚಾಲಕರು ಮೀಟರ್ ದರ ಹೆಚ್ಚಳಕ್ಕೆ ಒತ್ತಾಯಿಸಿದ್ದು, ಪ್ರಯಾಣಿಕರಿಗೆ ಮತ್ತೊಂದು ಹೊಡೆತ ತಟ್ಟುವ ಆತಂಕ ಹೆಚ್ಚಾಗಿದೆ.

ಬೆಂಗಳೂರು (Bengaluru): ಅಮೆರಿಕ, ಇರಾನ್ ಹಾಗೂ ಇಸ್ರೇಲ್ ನಡುವೆ ಉಂಟಾದ ಯುದ್ಧದ ಪರಿಣಾಮ ಜಾಗತಿಕ ಮಟ್ಟದಲ್ಲಿ ಇಂಧನ ಸರಬರಾಜಿನ ಮೇಲೆ ಪರಿಣಾಮ ಬೀರುತ್ತಿದ್ದು, ಅದರ ಪ್ರಭಾವ ಭಾರತದಲ್ಲಿಯೂ ನಿಧಾನವಾಗಿ ಕಾಣಿಸಿಕೊಳ್ಳುತ್ತಿದೆ. ವಿಶೇಷವಾಗಿ ಎಲ್ಪಿಜಿ ಬೆಲೆ ಏರಿಕೆಯಿಂದ ಬೆಂಗಳೂರಿನ ಆಟೋ ಹಾಗೂ ಕ್ಯಾಬ್ ಸೇವೆಗಳು ದುಬಾರಿಯಾಗುವ ಸೂಚನೆಗಳು ಕಾಣಿಸುತ್ತಿವೆ.
ಈಗಾಗಲೇ ಕೆಲವು ಬಂಕ್ಗಳಲ್ಲಿ ಆಟೋಗಳಿಗೆ ಬಳಸುವ ಎಲ್ಪಿಜಿ ದರ ಲೀಟರ್ಗೆ 10 ರಿಂದ 20 ರೂಪಾಯಿವರೆಗೆ ಹೆಚ್ಚಾಗಿದೆ. ಇದರಿಂದ ಚಾಲಕರ ವೆಚ್ಚ ಹೆಚ್ಚಾಗಿ, ಪ್ರಯಾಣ ದರವನ್ನು ಹೆಚ್ಚಿಸುವಂತೆ ಒತ್ತಾಯ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಆಟೋ ಮೀಟರ್ ದರ ಹೆಚ್ಚಳಕ್ಕೆ ಒತ್ತಾಯ
ಇದುವರೆಗೆ ಆಟೋ ಎಲ್ಪಿಜಿ ದರ ಲೀಟರ್ಗೆ ಸುಮಾರು 58 ರೂಪಾಯಿ ಇತ್ತು. ನಂತರ ಅದು 59 ರೂಪಾಯಿಗೆ ಏರಿಕೆ ಕಂಡಿತ್ತು. ಆದರೆ ಇತ್ತೀಚೆಗೆ ಕೆಲವು ಬಂಕ್ಗಳಲ್ಲಿ ಇದು ಸುಮಾರು 69.74 ರೂಪಾಯಿ ವರೆಗೆ ಏರಿಕೆಯಾಗಿದೆ ಎಂದು ಚಾಲಕರು ಹೇಳಿದ್ದಾರೆ. ಕೆಲವೆಡೆ ಮಾಲೀಕರು ಹೆಚ್ಚುವರಿ ದರ ವಿಧಿಸುತ್ತಿರುವ ಆರೋಪವೂ ಕೇಳಿಬರುತ್ತಿದೆ.
ಈ ಹಿನ್ನೆಲೆಯಲ್ಲಿ ಆಟೋ ಹಾಗೂ ಕ್ಯಾಬ್ ಚಾಲಕರು ಸಾರಿಗೆ ಇಲಾಖೆ ಅಧಿಕಾರಿಗಳು ಮತ್ತು ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಮೀಟರ್ ದರ ಹೆಚ್ಚಳಕ್ಕೆ ಅನುಮತಿ ನೀಡುವಂತೆ ಒತ್ತಾಯಿಸಲು ಮುಂದಾಗಿದ್ದಾರೆ.
ಮುಂದಿನ ದಿನಗಳಲ್ಲಿ ಇನ್ನಷ್ಟು ಏರಿಕೆ ಸಾಧ್ಯತೆ
ಆರ್ಥಿಕ ತಜ್ಞರ ಪ್ರಕಾರ, ಹಾರ್ಮುಜ್ ಜಲಸಂಧಿ ಪ್ರದೇಶದ ಪರಿಸ್ಥಿತಿ ಜಾಗತಿಕ ಸಾಗಣೆ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತಿದೆ. ಈ ಮಾರ್ಗದಲ್ಲಿ ಸಾಗಾಟ ಅಡಚಣೆಯಾದರೆ ಹಡಗುಗಳು ಗುಡ್ ಹೋಪ್ ಶಿಖರದ ಮೂಲಕ ಪ್ರಯಾಣಿಸಬೇಕಾಗುತ್ತದೆ. ಇದರಿಂದ ಸಾಗಾಟ ವೆಚ್ಚ ಹೆಚ್ಚಾಗಿ ಇಂಧನದ ಬೆಲೆಯೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಜ್ಞರು ತಿಳಿಸಿದ್ದಾರೆ.
ಪ್ರಸ್ತುತ ಬೆಂಗಳೂರು ನಗರದಲ್ಲಿ ಆಟೋ ಕನಿಷ್ಠ ಮೀಟರ್ ದರ 36 ರೂ. ಇದ್ದು, ನಂತರ ಪ್ರತಿ ಕಿಮೀಗೆ ಸುಮಾರು 16 ರೂ. ವಸೂಲಿಸಲಾಗುತ್ತಿದೆ. ಕ್ಯಾಬ್ ಸೇವೆಗಳಲ್ಲಿಯೂ ಪ್ರತಿ ಕಿಮೀಗೆ ಸುಮಾರು 24 ರೂ. ದರ ಇದೆ. ಆದರೆ ಎಲ್ಪಿಜಿ ಬೆಲೆ ಏರಿಕೆಯ ಹಿನ್ನೆಲೆ ಇದನ್ನು ಕನಿಷ್ಠ 10 ರೂ. ಹೆಚ್ಚಿಸಬೇಕೆಂಬ ಆಗ್ರಹ ವ್ಯಕ್ತವಾಗಿದೆ.
ಒಟ್ಟಿನಲ್ಲಿ ಜಾಗತಿಕ ಯುದ್ಧ ಪರಿಸ್ಥಿತಿ ಮುಂದುವರೆದರೆ ಬೆಂಗಳೂರಿನಲ್ಲಿ ಸಾರಿಗೆ ವೆಚ್ಚವೂ ಹೆಚ್ಚಾಗುವ ಸಾಧ್ಯತೆ ಇದ್ದು, ಅದರ ಬಿಸಿ ಸಾಮಾನ್ಯ ಜನರಿಗೆ ತಟ್ಟುವ ಸಾಧ್ಯತೆ ಹೆಚ್ಚಿದೆ.



