Basava Mantapa Book: ಬಸವ ಮಂಟಪ ಪುಸ್ತಕ ವಿವಾದ; ಲೇಖಕ ರವಿ ಹಂಜ್ ವಿರುದ್ಧ ದೂರು ದಾಖಲು
Basava Mantapa Book: ಬಸವಣ್ಣನವರ ಕುರಿತು ಆಕ್ಷೇಪಾರ್ಹ ವಿಚಾರಗಳಿವೆ ಎಂಬ ಆರೋಪದಿಂದ ‘ಬಸವ ಮಂಟಪ’ ಪುಸ್ತಕ ವಿವಾದಕ್ಕೆ ಕಾರಣವಾಗಿದೆ. ಲೇಖಕ ರವಿ ಹಂಜ್ ವಿರುದ್ಧ ದೂರು ದಾಖಲಾಗಿದ್ದು, ಕೃತಿ ನಿಷೇಧಕ್ಕೆ ಹಲವು ಸಂಘಟನೆಗಳು ಆಗ್ರಹಿಸಿವೆ.

- ಬಸವಣ್ಣನಿಗೆ ಅವಮಾನ ಆರೋಪ
- ಲೇಖಕ ರವಿ ಹಂಜ್ ವಿರುದ್ಧ ದೂರು
- ಪುಸ್ತಕ ನಿಷೇಧಕ್ಕೆ ಸಂಘಟನೆಗಳ ಒತ್ತಾಯ
Basava Mantapa Book: ಬಸವಣ್ಣನವರ (Basavanna) ಕುರಿತು ಬರೆಯಲಾಗಿದೆ ಎನ್ನಲಾದ ಕೆಲವು ವಿಚಾರಗಳು ಇದೀಗ ಕರ್ನಾಟಕದಲ್ಲಿ ದೊಡ್ಡ ವಿವಾದಕ್ಕೆ ಕಾರಣವಾಗಿವೆ. ‘ಬಸವ ಮಂಟಪ’ ಪುಸ್ತಕದಲ್ಲಿ ಬಸವಣ್ಣನವರ ವ್ಯಕ್ತಿತ್ವಕ್ಕೆ ಧಕ್ಕೆ ತರಲಾಗಿದೆ ಎಂದು ಆರೋಪಿಸಿ ಲೇಖಕ ರವಿ ಹಂಜ್ ವಿರುದ್ಧ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಶಾಸಕ ಬಿ.ಆರ್. ಪಾಟೀಲ್ ನೇತೃತ್ವದಲ್ಲಿ ಬಸವಣ್ಣನವರ ಅನುಯಾಯಿಗಳ ನಿಯೋಗ ದೂರು ಸಲ್ಲಿಸಿದ್ದು, ಲೇಖಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ. ಮತ್ತೊಂದೆಡೆ, ಬೆಂಗಳೂರಿನ ಬಸವ ಸಮಿತಿ ಆವರಣದಲ್ಲಿ ಪುಸ್ತಕ ಸುಟ್ಟು ಪ್ರತಿಭಟನೆ ನಡೆಸಲಾಗಿದೆ.
ಈ ವಿಚಾರವಾಗಿ ಸಚಿವ ಎಂ.ಬಿ. ಪಾಟೀಲ್ (M.B. Patil) ಕೂಡ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬಸವಣ್ಣನವರು ಯಾವುದೇ ಒಂದು ಸಮುದಾಯಕ್ಕೆ ಸೀಮಿತರಾದವರಲ್ಲ. ಎಲ್ಲ ವರ್ಗದ ಜನರಿಗೆ ಸಮಾನತೆ ಸಾರಿದ ಮಹಾನ್ ವ್ಯಕ್ತಿ. ಅಂತಹವರ ಬಗ್ಗೆ ಅವಹೇಳನಕಾರಿ ಬರಹಗಳನ್ನು ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಇನ್ನು ಸಚಿವ ಈಶ್ವರ ಖಂಡ್ರೆ (Eshwar Khandre) ಪುಸ್ತಕವನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಪುಸ್ತಕಕ್ಕೆ ಸಂಬಂಧಿಸಿದ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಿಂದ ತೆಗೆದುಹಾಕಬೇಕು ಎಂದೂ ಆಗ್ರಹಿಸಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಕೂಡ ಈ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ್ದು, ಬಸವಣ್ಣನವರ ಕುರಿತು ಆಧಾರರಹಿತ ಆರೋಪಗಳನ್ನು ಮಾಡುವುದು ಸರಿಯಲ್ಲ ಎಂದಿದ್ದಾರೆ. ಈ ವಿಷಯವನ್ನು ಮುಖ್ಯಮಂತ್ರಿ ಗಮನಕ್ಕೆ ತರುವುದಾಗಿ ತಿಳಿಸಿದ್ದಾರೆ.
ಇನ್ನೊಂದೆಡೆ, ಬಸವಪರ ಮತ್ತು ಲಿಂಗಾಯತ ಸಂಘಟನೆಗಳು ಪ್ರತಿಭಟನೆ ತೀವ್ರಗೊಳಿಸುವ ಎಚ್ಚರಿಕೆ ನೀಡಿವೆ. ಪುಸ್ತಕವನ್ನು ನಿಷೇಧಿಸಬೇಕು ಹಾಗೂ ಲೇಖಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬಂದಿದೆ. ಸದ್ಯ ಈ ಪುಸ್ತಕದ ವಿಚಾರ ರಾಜ್ಯ ರಾಜಕೀಯದಲ್ಲೂ ಚರ್ಚೆಗೆ ಗ್ರಾಸವಾಗಿದೆ.



