Bengaluru Airport: ಬೆಂಗಳೂರು ಏರ್ಪೋರ್ಟ್ನಲ್ಲಿ ಹೆಚ್ಚುವರಿ ಭದ್ರತಾ ಕ್ರಮ! ವಿಮಾನ ಪ್ರಯಾಣಿಕರಿಗೆ ಸೂಚನೆ
Bengaluru Airport: ಗಣರಾಜ್ಯೋತ್ಸವ ಮತ್ತು ದೀರ್ಘ ವಾರಾಂತ್ಯ ಹಿನ್ನೆಲೆಯಲ್ಲಿ ಬೆಂಗಳೂರು ಏರ್ಪೋರ್ಟ್ನಲ್ಲಿ ಹೆಚ್ಚುವರಿ ಭದ್ರತೆ ಜಾರಿಯಲ್ಲಿದ್ದು ಪ್ರಯಾಣಿಕರ ದಟ್ಟಣೆ ಹೆಚ್ಚಳ ನಿರೀಕ್ಷೆ ಇದೆ. ಚೆಕ್ಇನ್ ಭದ್ರತಾ ತಪಾಸಣೆಗೆ ಹೆಚ್ಚು ಸಮಯ ಕಾಯ್ದುಕೊಳ್ಳಲು ಅಧಿಕಾರಿಗಳು ಮನವಿ ಮಾಡಿದ್ದಾರೆ

- ಬೆಂಗಳೂರು ಏರ್ಪೋರ್ಟ್ನಲ್ಲಿ ಹೆಚ್ಚುವರಿ ಭದ್ರತಾ ಕ್ರಮ
- ಗಣರಾಜ್ಯೋತ್ಸವದ ಹಿನ್ನೆಲೆ ಪ್ರಯಾಣಿಕರ ದಟ್ಟಣೆ ಹೆಚ್ಚಳ
- ವಿಮಾನ ಪ್ರಯಾಣಿಕರು ಮುಂಚಿತವಾಗಿ ಏರ್ಪೋರ್ಟ್ಗೆ ಬರಲು ಸೂಚನೆ
ಬೆಂಗಳೂರು (Bengaluru): ಗಣರಾಜ್ಯೋತ್ಸವದ ದೀರ್ಘ ವಾರಾಂತ್ಯದ ಹಿನ್ನೆಲೆಯಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Bangalore Airport) ಪ್ರಯಾಣಿಕರ ಸಂಖ್ಯೆಯಲ್ಲಿ ಭಾರೀ ಏರಿಕೆ ನಿರೀಕ್ಷಿಸಲಾಗಿದೆ. ಈ ಹಿನ್ನೆಲೆ, ವಿಮಾನ ನಿಲ್ದಾಣ ಆಡಳಿತ ಮಂಡಳಿ ಪ್ರಯಾಣಿಕರಿಗೆ ಮುನ್ನೆಚ್ಚರಿಕೆಯ ಸೂಚನೆ ನೀಡಿದೆ.
ಭದ್ರತಾ ವ್ಯವಸ್ಥೆ ಮತ್ತಷ್ಟು ಕಠಿಣ
ಹಬ್ಬದ ದಿನಗಳಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಸಿಐಎಸ್ಎಫ್ ಸಿಬ್ಬಂದಿ ಹೆಚ್ಚುವರಿ ಭದ್ರತಾ ಕ್ರಮಗಳನ್ನು ಜಾರಿಗೊಳಿಸಿದ್ದಾರೆ. ಸ್ಕ್ರೀನಿಂಗ್, ಲಗೇಜ್ ಪರಿಶೀಲನೆ ಹಾಗೂ ಚೆಕ್-ಇನ್ ಪ್ರಕ್ರಿಯೆಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ನಡೆಯಲಿದೆ. ಇದರ ಪರಿಣಾಮ ಪ್ರವೇಶ ದ್ವಾರಗಳಲ್ಲಿ ಮತ್ತು ಭದ್ರತಾ ತಪಾಸಣೆಯಲ್ಲಿ ಹೆಚ್ಚು ಸಮಯ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಮುಂಚಿತ ಆಗಮನಕ್ಕೆ ಮನವಿ
ಈ ಎಲ್ಲಾ ಕಾರಣಗಳಿಂದಾಗಿ ಪ್ರಯಾಣಿಕರು ನಿಗದಿತ ಸಮಯಕ್ಕಿಂತ ಮೊದಲೇ ವಿಮಾನ ನಿಲ್ದಾಣಕ್ಕೆ ಆಗಮಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ. ಕೊನೆ ಕ್ಷಣದ ಗೊಂದಲ, ವಿಳಂಬ ಅಥವಾ ವಿಮಾನ ತಪ್ಪುವ ಪರಿಸ್ಥಿತಿ ಎದುರಾಗದಂತೆ, ಚೆಕ್-ಇನ್ ಮತ್ತು ಭದ್ರತಾ ಪ್ರಕ್ರಿಯೆಗಳಿಗೆ ಸಾಕಷ್ಟು ಸಮಯ ಮೀಸಲಿಡುವಂತೆ ಸಲಹೆ ನೀಡಲಾಗಿದೆ.
ವಿಮಾನ ಮಾಹಿತಿ ಪರಿಶೀಲನೆ ಅಗತ್ಯ
ಬೋರ್ಡಿಂಗ್ ಸಮಯ, ಗೇಟ್ ಬದಲಾವಣೆ ಅಥವಾ ವಿಮಾನ ವೇಳಾಪಟ್ಟಿ ಕುರಿತು ಸ್ಪಷ್ಟ ಮಾಹಿತಿಗಾಗಿ ತಮ್ಮ ತಮ್ಮ ವಿಮಾನಯಾನ ಸಂಸ್ಥೆಗಳೊಂದಿಗೆ ನೇರ ಸಂಪರ್ಕದಲ್ಲಿರಲು ಪ್ರಯಾಣಿಕರಿಗೆ ಸೂಚಿಸಲಾಗಿದೆ. ಸಾಮಾಜಿಕ ಜಾಲತಾಣಗಳ ಮೂಲಕವೂ ಏರ್ಪೋರ್ಟ್ ಆಡಳಿತ ಈ ಮಾಹಿತಿ ಹಂಚಿಕೊಂಡಿದೆ.



