Bengaluru: ಬೆಂಗಳೂರು ವಿಮಾನ ನಿಲ್ದಾಣ ಮತ್ತೊಮ್ಮೆ ದಾಖಲೆ! 60 ದಶಲಕ್ಷ ಗುಲಾಬಿ ರಫ್ತು
ಪ್ರೇಮಿಗಳ ದಿನದ ಹಿನ್ನಲೆಯಲ್ಲಿ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಿಂದ 60 ದಶಲಕ್ಷಕ್ಕೂ ಅಧಿಕ ಗುಲಾಬಿ ಹೂವುಗಳು ಜಾಗತಿಕ ಮಾರುಕಟ್ಟೆಗೆ ರಫ್ತುಗೊಂಡಿದ್ದು, ಕಳೆದ ವರ್ಷದಿಗಿಂತ 38% ಏರಿಕೆ ದಾಖಲಾಗಿದೆ.

ಬೆಂಗಳೂರು (Bengaluru): ಪ್ರೇಮಿಗಳ ದಿನ ಸಮೀಪಿಸುತ್ತಿದ್ದಂತೆ ಜಾಗತಿಕ ಮಾರುಕಟ್ಟೆಯಲ್ಲಿ ಗುಲಾಬಿ ಹೂವಿನ ಬೇಡಿಕೆ ತೀವ್ರಗೊಂಡಿತ್ತು. ಈ ಬೇಡಿಕೆಯನ್ನು ಪೂರೈಸುವಲ್ಲಿ Bengaluru Kempegowda International Airport ಮತ್ತೊಮ್ಮೆ ಮುನ್ನಡೆ ಸಾಧಿಸಿದೆ. ಈ ವರ್ಷ 60 ದಶಲಕ್ಷಕ್ಕೂ ಅಧಿಕ ಗುಲಾಬಿಗಳನ್ನು ವಿದೇಶಗಳಿಗೆ ರವಾನಿಸುವ ಮೂಲಕ ಹೊಸ ದಾಖಲೆ ನಿರ್ಮಿಸಲಾಗಿದೆ.
ಒಟ್ಟು 2,700 ಮೆಟ್ರಿಕ್ ಟನ್‌ಗಿಂತ ಹೆಚ್ಚು ಹೂವುಗಳನ್ನು ದೇಶ-ವಿದೇಶಗಳಿಗೆ ಸಾಗಿಸಲಾಗಿದೆ. ಹೂವಿನ ಸಂಖ್ಯೆಯಲ್ಲಿ ಕಳೆದ ವರ್ಷಕ್ಕಿಂತ ಶೇ.38ರಷ್ಟು ಏರಿಕೆ ಕಂಡುಬಂದಿದ್ದು, ಒಟ್ಟು ತೂಕದಲ್ಲೂ ಶೇ.64ರಷ್ಟು ಹೆಚ್ಚಳವಾಗಿದೆ. ಇದು ಹೂವಿನ ರಫ್ತು ಕ್ಷೇತ್ರದಲ್ಲಿ ಬೆಂಗಳೂರಿನ ಬಲವನ್ನು ತೋರಿಸುತ್ತದೆ.
ಅಂತಾರಾಷ್ಟ್ರೀಯವಾಗಿ 26 ಗಮ್ಯಸ್ಥಾನಗಳಿಗೆ ಸುಮಾರು 305 ಮೆಟ್ರಿಕ್ ಟನ್ ಹೂವುಗಳನ್ನು ಕಳುಹಿಸಲಾಗಿದೆ. ಸಿಂಗಾಪುರ ಮೊದಲ ಸ್ಥಾನದಲ್ಲಿದ್ದರೆ, ಕೌಲಾಲಂಪುರ್, ಅಬುಧಾಬಿ, ನ್ಯೂಯಾರ್ಕ್ ಹಾಗೂ ಕುವೈತ್ ಪ್ರಮುಖ ಮಾರುಕಟ್ಟೆಗಳಾಗಿವೆ. ಈ ಬಾರಿ ಲಾಸ್ ಏಂಜಲೀಸ್ ಮತ್ತು ಲಂಡನ್ ಗ್ಯಾಟ್ವಿಕ್ ಮುಂತಾದ ಹೊಸ ನಗರಗಳಿಗೂ ರಫ್ತು ವಿಸ್ತರಿಸಲಾಗಿದೆ.
ದೇಶೀಯ ಮಾರುಕಟ್ಟೆಯಲ್ಲೂ 47 ನಗರಗಳಿಗೆ 2,402 ಮೆಟ್ರಿಕ್ ಟನ್ ಹೂವುಗಳನ್ನು ಸಾಗಿಸಲಾಗಿದೆ. ದೆಹಲಿ ಮತ್ತು ಕೋಲ್ಕತ್ತಾ ಪ್ರಮುಖ ಕೇಂದ್ರಗಳಾಗಿದ್ದು, ಲಕ್ನೋ ಮತ್ತು ಚಂಡೀಗಢ ನಗರಗಳಲ್ಲಿ 150% ಕ್ಕಿಂತ ಹೆಚ್ಚು ಬೆಳವಣಿಗೆ ಕಂಡುಬಂದಿದೆ.
ಹೂವುಗಳು ಗ್ರಾಹಕರಿಗೆ ತಾಜಾವಾಗಿ ತಲುಪಲು ಕೆಐಎಯ ಸುಧಾರಿತ ‘ಕೋಲ್ಡ್ ಚೈನ್’ ಮೂಲಸೌಕರ್ಯ ಪ್ರಮುಖ ಪಾತ್ರವಹಿಸಿದೆ. ನೈಜ-ಸಮಯದ ಟ್ರ್ಯಾಕಿಂಗ್ ಮತ್ತು ತಾಪಮಾನ ನಿಯಂತ್ರಣದ ಮೂಲಕ ಸಾಗಣೆ ಯಾವುದೇ ವ್ಯತ್ಯಯವಿಲ್ಲದೆ ನಡೆದಿದೆ. ಇದರ ಫಲವಾಗಿ ಸತತ ಐದನೇ ವರ್ಷವೂ ಕೆಐಎ ದೇಶದ ಅಗ್ರ ಹೂವಿನ ರಫ್ತು ವಿಮಾನ ನಿಲ್ದಾಣವಾಗಿ ಗುರುತಿಸಿಕೊಂಡಿದೆ.



