ಬೆಂಗಳೂರು ಆನೇಕಲ್‌ನ ಕಿಡ್ನ್ಯಾಪ್ ಪ್ರಕರಣ ಭೇದಿಸಿದ ಪೊಲೀಸರು! ಹೇಗಿತ್ತು ಗೊತ್ತಾ ಮಾಸ್ಟರ್ ಪ್ಲ್ಯಾನ್
ಹಣದಾಸೆಗಾಗಿ ಸ್ಪಾ ಮಾಲೀಕರನ್ನು ಗುರಿಯಾಗಿಸಿಕೊಂಡ ದುಷ್ಕರ್ಮಿಗಳ ಕಿಡ್ನ್ಯಾಪ್ ಪ್ರಕರಣವನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಕೆಲವೇ ಗಂಟೆಗಳಲ್ಲಿ ಭೇದಿಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಬೆಂಗಳೂರು (Bengaluru): ಆನೇಕಲ್ ತಾಲೂಕಿನ ಬೆಟ್ಟದಾಸನಪುರ ಬಳಿ ನಡೆದ ಕಿಡ್ನ್ಯಾಪ್ ಪ್ರಕರಣವನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ವೇಗವಾಗಿ ಭೇದಿಸಿದ್ದಾರೆ. ಜಿಗಣಿ ಮೂಲದ ಅಕ್ಷಯ್, ಮಂಜುನಾಥ್ ಹಾಗೂ ಹೊಂಪಲಘಟ್ಟದ ಪ್ರಜ್ವಲ್ ಬಂಧಿತರಾಗಿದ್ದಾರೆ. ಪ್ರಕರಣ ದಾಖಲಾಗುತ್ತಿದ್ದಂತೆ ಪೊಲೀಸರು ತುರ್ತು ಕಾರ್ಯಾಚರಣೆ ಆರಂಭಿಸಿದ್ದರು.
ಈ ಬಗ್ಗೆ ಎಲೆಕ್ಟ್ರಾನಿಕ್ ಸಿಟಿ ಡಿಸಿಪಿ ನಾರಾಯಣ್ ಮಾತನಾಡಿ, “ಸ್ಪಾ ನಡೆಸುತ್ತಿದ್ದ ಅಶೀತ್ ಜ್ಹಾ ಅವರನ್ನು ಹಣಕ್ಕಾಗಿ ಟಾರ್ಗೆಟ್ ಮಾಡಲಾಗಿತ್ತು. ಮ್ಯಾನೇಜರ್ ಮನ್ನುಕುಮಾರ್ ನೀಡಿದ ದೂರಿನ ಆಧಾರದ ಮೇಲೆ ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ” ಎಂದು ತಿಳಿಸಿದ್ದಾರೆ.
ಹೇಗಿತ್ತು ಕಿಡ್ನ್ಯಾಪ್ ಪ್ಲ್ಯಾನ್?
ಬಂಧಿತ ಮಂಜುನಾಥ್ ಅಪಾರ್ಟ್‌ಮೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದನು. ಅಲ್ಲಿನ ಹಣದ ದುರ್ಬಳಕೆಯಿಂದ ಸಂಕಷ್ಟಕ್ಕೀಡಾದ ಬಳಿಕ, ಸ್ನೇಹಿತರಾದ ಪ್ರಜ್ವಲ್ ಮತ್ತು ಅಕ್ಷಯ್ ಜೊತೆ ಸೇರಿ ಕಿಡ್ನ್ಯಾಪ್ ಪ್ಲ್ಯಾನ್ ರೂಪಿಸಿದ್ದನು. ಸ್ಪಾ ಮಾಲೀಕರ ಬಳಿ ಹಣ ಇರುತ್ತದೆ ಎಂಬ ಊಹೆಯಿಂದ, ಅಶೀತ್ ಅವರನ್ನು ಹಿಂಬಾಲಿಸಿ ಅಪಹರಿಸಿದ್ದರು.
ಬೈಕ್‌ನಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ಕಾರಿನಿಂದ ಡಿಕ್ಕಿ ಹೊಡೆದು, ಲಾಂಗ್ ತೋರಿಸಿ ಬೆದರಿಸಿ ಕಾರಿಗೆ ಎತ್ತಿಕೊಂಡು ಹೋಗಿದ್ದರು. ನಂತರ ಎರಡು ಲಕ್ಷ ರೂಪಾಯಿ ಬೇಡಿಕೆ ಇಟ್ಟು, ಹಣ ಕೊಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು.
ಪೊಲೀಸರ ಕಾರ್ಯಾಚರಣೆ
ಎಸಿಪಿ ಸತೀಶ್, ಇನ್ಸ್‌ಪೆಕ್ಟರ್ ನವೀನ್ ಮತ್ತು ಪಿಎಸ್ಐ ದರ್ಶನ್ ನೇತೃತ್ವದಲ್ಲಿ ತಂಡ ಕಾರ್ಯಾಚರಣೆ ನಡೆಸಿತು. ಲೊಕೇಶನ್ ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಲಾಯಿತು. ಆರೋಪಿಗಳಿಂದ ಒಂದು ಕಾರು, ಲಾಂಗ್, ಡ್ರಾಗರ್‌ಗಳು, ಮೊಬೈಲ್ ಫೋನ್‌ಗಳು ಹಾಗೂ 9,700 ರೂ. ಹಣ ವಶಪಡಿಸಿಕೊಳ್ಳಲಾಗಿದೆ.
ಅಶೀತ್ ಜ್ಹಾ ಮಾತನಾಡಿ, “ಕುತ್ತಿಗೆಗೆ ಚಾಕು ಇಟ್ಟು ಸ್ನೇಹಿತರಿಗೆ ಕರೆ ಮಾಡಿಸಿದರು. ಪೊಲೀಸರ ತ್ವರಿತ ಕಾರ್ಯದಿಂದ ನಾನು ಪಾರಾದೆ. ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು” ಎಂದು ಮನವಿ ಮಾಡಿದ್ದಾರೆ.
ಡಿಸಿಪಿ ನಾರಾಯಣ್, ಪ್ರಕರಣ ಭೇದಿಸಿದ ಪೊಲೀಸರಿಗೆ ಬಹುಮಾನ ನೀಡಲಾಗುವುದು ಎಂದು ತಿಳಿಸಿದ್ದಾರೆ.



