ಬೆಂಗಳೂರು ಬ್ಯಾಂಕ್ ಮ್ಯಾನೇಜರ್ ವಂಚನೆ! ಗ್ರಾಹಕರ ಹೆಸರಿನಲ್ಲಿ ಸಾಲ ಪಡೆದು ಪರಾರಿ

ಮಲ್ಲೇಶ್ವರದ ಕೆನರಾ ಬ್ಯಾಂಕ್ ಶಾಖೆಯ ಹಿರಿಯ ವ್ಯವಸ್ಥಾಪಕ ಗ್ರಾಹಕರ ಹೆಸರಿನಲ್ಲಿ ಚಿನ್ನದ ಸಾಲ ಪಡೆದು 3.11 ಕೋಟಿ ರೂ. ವಂಚನೆ ಎಸಗಿ, ಅಕ್ರಮ ಪತ್ತೆಯಾಗುತ್ತಿದ್ದಂತೆಯೇ ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.

  • ಬೆಂಗಳೂರು ಕೆನರಾ ಬ್ಯಾಂಕ್ ವಂಚನೆ ಪ್ರಕರಣ
  • ಗ್ರಾಹಕರ ಹೆಸರಿನಲ್ಲಿ ಚಿನ್ನದ ಸಾಲ ಪಡೆದು ವಂಚನೆ
  • ಬ್ಯಾಂಕ್ ಮ್ಯಾನೇಜರ್ ರಘು ಅಕ್ರಮ ಬಯಲು, ಪರಾರಿ

ಬೆಂಗಳೂರು (Bengaluru): ಸಿಲಿಕಾನ್ ಸಿಟಿಯಲ್ಲಿ ಸಿನಿಮಾವನ್ನೇ ಮೀರಿಸುವ ಬ್ಯಾಂಕ್ ವಂಚನೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ಮಲ್ಲೇಶ್ವರದಲ್ಲಿರುವ ಕೆನರಾ ಬ್ಯಾಂಕ್ (Canara Bank) ಶಾಖೆಯ ಹಿರಿಯ ವ್ಯವಸ್ಥಾಪಕನೊಬ್ಬ, ಗ್ರಾಹಕರ ನಂಬಿಕೆಯನ್ನು ದುರುಪಯೋಗಪಡಿಸಿಕೊಂಡು ಕೋಟ್ಯಂತರ ರೂಪಾಯಿ ದೋಚಿ ಪರಾರಿಯಾಗಿದ್ದಾನೆ.

ಬ್ಯಾಂಕ್‌ನ ಆಂತರಿಕ ಲೆಕ್ಕ ಪರಿಶೋಧನೆಯ ವೇಳೆ ಅಕ್ರಮ ಬಯಲಾಗುತ್ತಿದ್ದಂತೆಯೇ, ಹಿರಿಯ ವ್ಯವಸ್ಥಾಪಕ ಎನ್. ರಘು ಯಾವುದೇ ಮಾಹಿತಿ ನೀಡದೇ ನಾಪತ್ತೆಯಾಗಿದ್ದಾನೆ. ಈ ಸಂಬಂಧ ಮಲ್ಲೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

41ಕ್ಕೂ ಹೆಚ್ಚು ಗ್ರಾಹಕರ ಹೆಸರಿನಲ್ಲಿ ಸಾಲ

ಪೊಲೀಸರ ಮಾಹಿತಿ ಪ್ರಕಾರ, ಎನ್. ರಘು ಕಳೆದ ವರ್ಷ ಜುಲೈ 8ರಿಂದ ಮಲ್ಲೇಶ್ವರದ 15ನೇ ಕ್ರಾಸ್‌ನಲ್ಲಿರುವ ಕೆನರಾ ಬ್ಯಾಂಕ್ ಶಾಖೆಯಲ್ಲಿ ಹಿರಿಯ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಈ ಅವಧಿಯಲ್ಲಿ 41ಕ್ಕೂ ಹೆಚ್ಚು ಗ್ರಾಹಕರ ಹೆಸರಿನಲ್ಲಿ ಚಿನ್ನದ ಮೇಲೆ ಸಾಲ (Gold Loan) ಪಡೆದು, ಆ ಹಣವನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದಾನೆ.

“ಮನೆಯಲ್ಲಿ ಸಮಸ್ಯೆ ಇದೆ, ನಿಮ್ಮ ಹೆಸರಿನಲ್ಲಿ ಸಾಲ ತೆಗೆದುಕೊಳ್ಳುತ್ತೇನೆ” ಎಂದು ಹೇಳಿ ಗ್ರಾಹಕರ ವಿಶ್ವಾಸ ಗೆದ್ದಿದ್ದ ರಘು, ಅವರ ಸಹಿ, ಬ್ಯಾಂಕ್ ವಿವರ, ಆಧಾರ್ ಮಾಹಿತಿ ಹಾಗೂ ಒಟಿಪಿಗಳನ್ನು ಸಂಗ್ರಹಿಸಿದ್ದಾನೆ ಎನ್ನಲಾಗಿದೆ.

ನಂಬಿಕೆ ದುರುಪಯೋಗ ಮಾಡಿಕೊಂಡ ಮ್ಯಾನೇಜರ್

ಮ್ಯಾನೇಜರ್ ಮಾತು ನಂಬಿದ ಗ್ರಾಹಕರು, ಯಾವುದೇ ಅನುಮಾನವಿಲ್ಲದೇ ಖಾತೆಯ ವಿವರ ಹಾಗೂ ಚೆಕ್ ಸಹ ನೀಡಿದ್ದರು. ಈ ದಾಖಲೆಗಳನ್ನು ಬಳಸಿ ರಘು ಚಿನ್ನದ ಸಾಲ (Gold Loan) ಮಂಜೂರು ಮಾಡಿಸಿಕೊಂಡು ಹಣವನ್ನು ದೋಚಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಚಿನ್ನದ ಸಾಲ ಮಂಜೂರಾತಿ ಹಾಗೂ ಶಾಖೆಯ ಇತರೆ ಜವಾಬ್ದಾರಿಗಳನ್ನು ರಘುವಿಗೆ ವಹಿಸಲಾಗಿತ್ತು. ನಿಯಮಾನುಸಾರ ತ್ರೈಮಾಸಿಕ ಲೆಕ್ಕ ಪರಿಶೋಧನೆ ನಡೆಸಿದಾಗ, ಹಲವಾರು ಸಾಲಗಳು ಕಾಗದದ ಮೇಲಷ್ಟೇ ಇದ್ದು, ಸಂಬಂಧಿತ ಚಿನ್ನದ ಆಭರಣಗಳೇ ಲಭ್ಯವಿರಲಿಲ್ಲ ಎಂಬುದು ಪತ್ತೆಯಾಗಿದೆ.

ಅಕ್ರಮ ಒಪ್ಪಿಕೊಂಡ ಬಳಿಕ ನಾಪತ್ತೆ

ಅಕ್ಟೋಬರ್ 4ರಿಂದ ಡಿಸೆಂಬರ್ 9ರ ಅವಧಿಯಲ್ಲಿ ಚಿನ್ನವಿಲ್ಲದೇ ಸಾಲ ಮಂಜೂರು ಮಾಡಿರುವುದು ಸಿಬಿಎಸ್ ದಾಖಲೆ ಪರಿಶೀಲನೆಯಲ್ಲೂ ದೃಢಪಟ್ಟಿದೆ. ಬ್ಯಾಂಕ್‌ನ ಹಿರಿಯ ಅಧಿಕಾರಿಗಳ ವಿಚಾರಣೆಯಲ್ಲಿ ರಘು ಅಕ್ರಮ ಒಪ್ಪಿಕೊಂಡಿದ್ದರೂ, ನಂತರ ಯಾವುದೇ ಮಾಹಿತಿ ನೀಡದೇ ಪರಾರಿಯಾಗಿದ್ದಾನೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಈ ಪ್ರಕರಣದ ಆರೋಪಿಯ ಪತ್ತೆಗೆ ವಿಶೇಷ ಪೊಲೀಸ್ ತಂಡ ರಚಿಸಲಾಗಿದ್ದು, ಹುಡುಕಾಟ ಮುಂದುವರಿದಿದೆ.

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories