Bengaluru: ಬೆಂಗಳೂರು ಬಾರ್–ಪಬ್‌ಗಳಿಗೆ ರಾತ್ರಿ 1ರವರೆಗೆ ಅವಕಾಶ, ಹೊಸ ವರ್ಷಾಚರಣೆ ಕಟ್ಟುನಿಟ್ಟಿನ ಸೂಚನೆ

ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಬೆಂಗಳೂರು ನಗರದಲ್ಲಿ ಬಾರ್, ಪಬ್, ಹೋಟೆಲ್ ಹಾಗೂ ಕಾರ್ಯಕ್ರಮ ಸ್ಥಳಗಳಿಗೆ ರಾತ್ರಿ 1ರವರೆಗೆ ಸಮಯ ವಿಸ್ತರಣೆ ನೀಡಲಾಗಿದ್ದು, ಕಟ್ಟುನಿಟ್ಟಿನ ಸುರಕ್ಷತಾ ನಿಯಮಗಳನ್ನು ಪೊಲೀಸರು ಜಾರಿಗೊಳಿಸಿದ್ದಾರೆ.

  • ಬೆಂಗಳೂರು ಬಾರ್–ಪಬ್‌ಗಳಿಗೆ ರಾತ್ರಿ 1ರವರೆಗೆ ಅವಕಾಶ
  • ಹೊಸ ವರ್ಷಾಚರಣೆ, ಪೊಲೀಸರಿಂದ ಕಟ್ಟುನಿಟ್ಟಿನ ಸೂಚನೆ
  • ಅಕ್ರಮ ಪಾರ್ಟಿ, ಪಟಾಕಿ, ಮಾದಕ ವಸ್ತುಗಳಿಗೆ ನಿಷೇಧ

ಬೆಂಗಳೂರು (Bengaluru): ಹೊಸ ವರ್ಷದ ಸಂಭ್ರಮವನ್ನು (New Year celebrations) ಸುರಕ್ಷಿತವಾಗಿ ಆಚರಿಸುವ ಉದ್ದೇಶದಿಂದ ಬೆಂಗಳೂರು ನಗರದಲ್ಲಿ ಬಾರ್, ಪಬ್‌, ಹೋಟೆಲ್‌ಗಳು ಹಾಗೂ ಕಾರ್ಯಕ್ರಮ ಆಯೋಜಿಸುವ ಸ್ಥಳಗಳಿಗೆ ಬುಧವಾರ ರಾತ್ರಿ 1 ಗಂಟೆಯವರೆಗೆ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗಿದೆ.

ಈ ಸಂಬಂಧ ನಗರ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಮಾಲೀಕರು ಮತ್ತು ಆಯೋಜಕರೊಂದಿಗೆ ಮಹತ್ವದ ಸಭೆ ನಡೆಯಿತು.

ಸಭೆಯಲ್ಲಿ ಮಾತನಾಡಿದ ಪೊಲೀಸ್ ಕಮಿಷನರ್ ಸೀಮಾಂತ್‌ಕುಮಾರ್ ಸಿಂಗ್, ಹೊಸ ವರ್ಷಾಚರಣೆ ವೇಳೆ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡಬಾರದು ಎಂದು ಸ್ಪಷ್ಟ ಸೂಚನೆ ನೀಡಿದರು.

ನಗರದಲ್ಲಿನ ಎಲ್ಲಾ ಉಪವಿಭಾಗ ಹಾಗೂ ಠಾಣಾ ವ್ಯಾಪ್ತಿಗಳಲ್ಲಿ ಬಾರ್, ಪಬ್ ಮತ್ತು ಹೋಟೆಲ್ ಮಾಲೀಕರೊಂದಿಗೆ ಪ್ರತ್ಯೇಕ ಸಭೆ ನಡೆಸಲಾಗಿದ್ದು, ವಿಶೇಷವಾಗಿ ಮಹಿಳೆಯರ ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕೆಂದು ಸೂಚಿಸಲಾಗಿದೆ ಎಂದರು.

ಪಬ್‌, ಕ್ಲಬ್‌ ಹಾಗೂ ರೆಸ್ಟೋರೆಂಟ್‌ಗಳಲ್ಲಿ ಕೆಲಸ ಮಾಡುವ ವ್ಯವಸ್ಥಾಪಕರು ಮತ್ತು ಸಿಬ್ಬಂದಿ ಕರ್ತವ್ಯದ ವೇಳೆ ಮದ್ಯಪಾನ ಮಾಡಬಾರದು ಎಂದು ಮಾಲೀಕರಿಗೆ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ. ಜೊತೆಗೆ, ಪ್ರಚೋದನಕಾರಿ ಹಾಡುಗಳು, ಪಟಾಕಿ ಸ್ಫೋಟ, ಕಾನೂನುಬಾಹಿರ ಪಾರ್ಟಿಗಳು ಮತ್ತು ಗುಂಪು ಸೇರಿ ನಡೆಯುವ ರೇವ್ ಪಾರ್ಟಿಗಳಿಗೆ ಯಾವುದೇ ಕಾರಣಕ್ಕೂ ಅವಕಾಶ ಇರುವುದಿಲ್ಲ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಕಾರ್ಯಕ್ರಮ ಆಯೋಜಕರು ತಮ್ಮ ಈವೆಂಟ್ ವಿವರಗಳನ್ನು ಮುಂಚಿತವಾಗಿಯೇ ಪೊಲೀಸರಿಗೆ ತಿಳಿಸಬೇಕು. ಬಾರ್ ಹಾಗೂ ಪಬ್ ಮಾಲೀಕರು ಹೆಚ್ಚುವರಿ ಸಮಯಕ್ಕೆ ಮನವಿ ಸಲ್ಲಿಸಿದ್ದ ಹಿನ್ನೆಲೆ, ನಿಯಮ ಪಾಲನೆಯ ಶರತ್ತಿನೊಂದಿಗೆ ರಾತ್ರಿ 1ರವರೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಾದಕ ವಸ್ತುಗಳ ಸೇವನೆ, ಮಾರಾಟ ಅಥವಾ ಸಂಗ್ರಹದ ಬಗ್ಗೆ ಮಾಹಿತಿ ಲಭ್ಯವಾದರೆ ತಕ್ಷಣವೇ ಸ್ಥಳೀಯ ಪೊಲೀಸ್ ಠಾಣೆಗೆ ತಿಳಿಸಬೇಕು. ನಿಯಮ ಉಲ್ಲಂಘನೆಯು ಕಂಡುಬಂದಲ್ಲಿ ಆಯೋಜಕರು ಮಾತ್ರವಲ್ಲದೆ ಕಟ್ಟಡದ ಮಾಲೀಕರು ಹಾಗೂ ನಿರ್ವಾಹಕರ ವಿರುದ್ಧವೂ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಕಟ್ಟುನಿಟ್ಟಾಗಿ ಎಚ್ಚರಿಕೆ ನೀಡಲಾಗಿದೆ.

ನಗರ ಪೊಲೀಸರು ವಿತರಿಸುವ ಕ್ಯೂಆರ್ ಕೋಡ್ ಅನ್ನು ಸಾರ್ವಜನಿಕರಿಗೆ ಕಾಣುವಂತೆ ಅಳವಡಿಸುವುದು ಕಡ್ಡಾಯವಾಗಿದ್ದು, ಯಾವುದೇ ಗಲಾಟೆ ಅಥವಾ ತುರ್ತು ಪರಿಸ್ಥಿತಿ ಉಂಟಾದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕೆಂದು ಸೂಚಿಸಲಾಗಿದೆ.

ಮಾಲೀಕರು ಹಾಗೂ ಆಯೋಜಕರಿಗೆ ಪೊಲೀಸ್ ಸೂಚನೆಗಳು

  1. ಸ್ಥಳದ ಸಾಮರ್ಥ್ಯಕ್ಕೆ ಅನುಗುಣವಾಗಿ ಮಾತ್ರ ಪ್ರವೇಶ ಟಿಕೆಟ್ ಮತ್ತು ಪಾಸ್ ವಿತರಣೆ
  2. ಬಾಲಕರು ಮತ್ತು ಬಾಲಕಿಯರಿಗೆ ಮದ್ಯ ಪೂರೈಕೆ ಸಂಪೂರ್ಣ ನಿಷೇಧ
  3. ಪ್ರವೇಶ ಹಾಗೂ ನಿರ್ಗಮನ ದ್ವಾರಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ
  4. ಸಂಶಯಾಸ್ಪದ ವಸ್ತುಗಳು ಅಥವಾ ವ್ಯಕ್ತಿಗಳು ಕಂಡರೆ ಪೊಲೀಸರಿಗೆ ತಕ್ಷಣ ಮಾಹಿತಿ
  5. ಅಗ್ನಿ ನಿರೋಧಕ ಉಪಕರಣಗಳ ಅಳವಡಿಕೆ ಮತ್ತು ಕಾಲ್ತುಳಿತ ತಪ್ಪಿಸಲು ಮುನ್ನೆಚ್ಚರಿಕೆ
  6. ವಿದ್ಯುತ್ ಕಡಿತಕ್ಕೆ ಪರ್ಯಾಯ ವಿದ್ಯುತ್ ವ್ಯವಸ್ಥೆ ಕಡ್ಡಾಯ
  7. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಸ್ಥಳಗಳಲ್ಲಿ ಮಹಿಳಾ ಭದ್ರತಾ ಸಿಬ್ಬಂದಿ ನಿಯೋಜನೆ
  8. ವಾಹನ ನಿಲುಗಡೆ ಹಾಗೂ ಕಾರ್ಯಕ್ರಮ ಸ್ಥಳದಲ್ಲಿ ನೂಕುನುಗ್ಗಲು ಆಗದಂತೆ ವ್ಯವಸ್ಥೆ
  9. ಕಾರ್ಯಕ್ರಮ ಸ್ಥಳದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿ, ಕನಿಷ್ಠ 30 ದಿನಗಳ ದೃಶ್ಯ ಸಂಗ್ರಹ

TRENDING ARTICLES1 / 8

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories