ಬೆಂಗಳೂರು ರಸ್ತೆಗಳಲ್ಲಿನ ಅನಾಥ ವಾಹನಗಳಿಗೆ ಬ್ರೇಕ್; 7 ದಿನಗಳ ಗಡುವು! ಜಪ್ತಿ, ಹರಾಜು ಖಚಿತ
Bengaluru Abandoned Vehicles: ಬೆಂಗಳೂರು ರಸ್ತೆ, ಪಾದಚಾರಿ ಮಾರ್ಗಗಳಲ್ಲಿ ದೀರ್ಘಕಾಲ ನಿಂತಿರುವ ಅನಾಥ ವಾಹನಗಳ ತೆರವಿಗೆ ಜಂಟಿ ಕಾರ್ಯಾಚರಣೆ ಆರಂಭವಾಗಿದೆ. ನೋಟಿಸ್ ಬಳಿಕ ಏಳು ದಿನಗಳಲ್ಲಿ ತೆರವುಗೊಳಿಸದ ವಾಹನಗಳನ್ನು ಜಪ್ತಿ ಮಾಡಿ ಹರಾಜು ಮಾಡಲಾಗುತ್ತದೆ.

Bengaluru Abandoned Vehicles: ಬೆಂಗಳೂರು ನಗರದಲ್ಲಿ ರಸ್ತೆ, ಪಾದಚಾರಿ ಮಾರ್ಗ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ದೀರ್ಘಕಾಲದಿಂದ ನಿಲ್ಲಿಸಿ ಬಿಟ್ಟಿರುವ ಅನಾಥ ವಾಹನಗಳ ವಿರುದ್ಧ ಅಧಿಕಾರಿಗಳು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಮತ್ತು ಬೆಂಗಳೂರು ಸಂಚಾರಿ ಪೊಲೀಸರು (BTP) ಜಂಟಿಯಾಗಿ ನಗರವ್ಯಾಪಿ ವಿಶೇಷ ಕಾರ್ಯಾಚರಣೆಯನ್ನು ಆರಂಭಿಸಿದ್ದು, ಸಂಚಾರ ಸುಗಮಗೊಳಿಸುವುದು ಹಾಗೂ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿಡುವುದು ಇದರ ಉದ್ದೇಶವಾಗಿದೆ.
ಈ ಕಾರ್ಯಾಚರಣೆಯಲ್ಲಿ ಮೊದಲು ಸಾರ್ವಜನಿಕ ಸ್ಥಳಗಳಲ್ಲಿ ಹಲವು ದಿನಗಳಿಂದ ಬಳಕೆಯಾಗದೆ ನಿಂತಿರುವ ವಾಹನಗಳನ್ನು ಗುರುತಿಸಲಾಗುತ್ತದೆ. ಬಳಿಕ ವಾಹನದ ಮೇಲೆ ಅಧಿಕೃತ ನೋಟಿಸ್ ಅಂಟಿಸಿ, ಚಕ್ರಕ್ಕೆ ವೀಲ್ ಕ್ಲಾಂಪ್ ಅಳವಡಿಸಲಾಗುತ್ತದೆ. ವಾಹನದ ಮಾಲೀಕರಿಗೆ ಅದನ್ನು ಸ್ಥಳಾಂತರಿಸಲು ಏಳು ದಿನಗಳ ಕಾಲಾವಕಾಶ ನೀಡಲಾಗುತ್ತದೆ.
ನಿಗದಿತ ಅವಧಿಯೊಳಗೆ ವಾಹನವನ್ನು ತೆರವುಗೊಳಿಸದಿದ್ದರೆ ಅಧಿಕಾರಿಗಳು ಯಾವುದೇ ವಿನಾಯಿತಿ ನೀಡದೆ ವಾಹನವನ್ನು ಟೋಯಿಂಗ್ ಮೂಲಕ ಜಪ್ತಿ ಮಾಡಲಿದ್ದಾರೆ. ಬಳಿಕವೂ ಯಾರೂ ಹಕ್ಕು ಸಾಧಿಸದ ವಾಹನಗಳನ್ನು ಕಾನೂನು ಪ್ರಕ್ರಿಯೆಯಂತೆ ಬಹಿರಂಗ ಹರಾಜು ಮೂಲಕ ವಿಲೇವಾರಿ ಮಾಡಲಾಗುತ್ತದೆ. ಹರಾಜು ಪೂರ್ಣಗೊಂಡ ನಂತರ ಮಾಲೀಕತ್ವದ ಯಾವುದೇ ಹಕ್ಕುಸ್ವಾಮ್ಯ ಮನವಿಯನ್ನು ಪರಿಗಣಿಸಲಾಗುವುದಿಲ್ಲ.
ಈ ಕಾರ್ಯಾಚರಣೆ ಗ್ರೇಟರ್ ಬೆಂಗಳೂರು ಗವರ್ನೆನ್ಸ್ ಕಾಯ್ದೆ–2024ರ ಸೆಕ್ಷನ್ 324ರ ಅನ್ವಯ ನಡೆಯುತ್ತಿದೆ. ನಗರದ ಸೌಂದರ್ಯ, ಪಾದಚಾರಿಗಳ ಸುರಕ್ಷತೆ ಹಾಗೂ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿರುವ ಅನಾಥ ವಾಹನಗಳನ್ನು ತೆರವುಗೊಳಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.
ಸಾರ್ವಜನಿಕರ ಸಹಕಾರವನ್ನೂ ಅಧಿಕಾರಿಗಳು ಕೋರಿದ್ದಾರೆ. ರಸ್ತೆ ಬದಿ ಅಥವಾ ತಮ್ಮ ಪ್ರದೇಶದಲ್ಲಿ ದೀರ್ಘಕಾಲದಿಂದ ಬಿದ್ದಿರುವ ವಾಹನಗಳ ಬಗ್ಗೆ ‘Public Eye’ ಮೊಬೈಲ್ ಆ್ಯಪ್ ಮೂಲಕ ಫೋಟೋ ಸಮೇತ ದೂರು ಸಲ್ಲಿಸಬಹುದು. ಈ ಮಾಹಿತಿಯ ಆಧಾರದಲ್ಲಿ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ.
ಪ್ರಾಥಮಿಕ ಸಮೀಕ್ಷೆಯಲ್ಲಿ ನಗರದ ವಿವಿಧ ಭಾಗಗಳಲ್ಲಿ 1,518 ಅನಾಥ ವಾಹನಗಳು ಪತ್ತೆಯಾಗಿದ್ದು, ಅವುಗಳಲ್ಲಿ ಬೆಂಗಳೂರು ಸೆಂಟ್ರಲ್ ವಲಯದಲ್ಲೇ 403 ವಾಹನಗಳು ಗುರುತಿಸಲ್ಪಟ್ಟಿವೆ. ಹಳೆಯ ಅಥವಾ ಬಳಕೆಯಾಗದ ವಾಹನಗಳನ್ನು ಸಾರ್ವಜನಿಕ ರಸ್ತೆಯಲ್ಲಿ ಬಿಡದೇ ತಮ್ಮ ಖಾಸಗಿ ಜಾಗಕ್ಕೆ ಸ್ಥಳಾಂತರಿಸುವಂತೆ ಅಧಿಕಾರಿಗಳು ವಾಹನ ಮಾಲೀಕರಿಗೆ ಮನವಿ ಮಾಡಿದ್ದಾರೆ.



