ಕದ್ದ ಹಣದಲ್ಲಿ ಪಾರ್ಟಿ, ಬಡವರಿಗೆ ಸಹಾಯ! ಖತರ್ನಾಕ್ ಮನೆಗಳ್ಳ ಅರೆಸ್ಟ್
ಬೆಂಗಳೂರಿನಲ್ಲಿ ಬೆಳಗಿನ ಜಾವ ಬೀಗ ಹಾಕಿದ ಮನೆಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬೇಗೂರು ಪೊಲೀಸರು ಬಂಧಿಸಿದ್ದು, ಎಂಟು ಪ್ರಕರಣಗಳಲ್ಲಿ 36 ಲಕ್ಷ ರೂ. ಮೌಲ್ಯದ ವಸ್ತು ವಶಪಡಿಸಿಕೊಂಡಿದ್ದಾರೆ.

ಬೆಂಗಳೂರು, ಆಗಸ್ಟ್ 25: ಕಳ್ಳತನ ಮಾಡುತ್ತಿದ್ದ ಹಣದಲ್ಲೇ ಸ್ನೇಹಿತರಿಗೆ ಅದ್ದೂರಿ ಪಾರ್ಟಿ ಕೊಡುತ್ತಿದ್ದ, ಮತ್ತೊಂದೆಡೆ ಬಡವರು ಹಾಗೂ ಆಟೋ ಚಾಲಕರಿಗೆ ಹಣದ ನೆರವು ನೀಡುತ್ತಿದ್ದ ಆರೋಪಿಯೊಬ್ಬನನ್ನು ಬೇಗೂರು ಪೊಲೀಸರು ಬಂಧಿಸಿದ್ದಾರೆ. ವೈಟ್‌ಫೀಲ್ಡ್‌ನಲ್ಲಿ (Whitefield) ವಾಸವಾಗಿದ್ದ ಶಿವರಸನ್ (34) ಬಂಧಿತ ಆರೋಪಿ.
ಪೊಲೀಸರ ಪ್ರಕಾರ, ಶಿವರಸನ್ ಬೆಳಗಿನ ಜಾವ ಬೈಕ್‌ನಲ್ಲಿ ನಗರದಲ್ಲಿ ಸುತ್ತಾಡಿ ಬೀಗ ಹಾಕಿರುವ ಮನೆಗಳನ್ನು ಗುರುತಿಸುತ್ತಿದ್ದ. ಮನೆಯವರು ಹೊರಗೆ ಹೋಗಿರುವುದನ್ನು ಖಚಿತಪಡಿಸಿಕೊಂಡ ಬಳಿಕ ಮನೆಗೆ ನುಗ್ಗಿ ಚಿನ್ನಾಭರಣ ಹಾಗೂ ಬೆಲೆಬಾಳುವ ವಸ್ತುಗಳನ್ನು ಕಳವು ಮಾಡುತ್ತಿದ್ದ ಎನ್ನಲಾಗಿದೆ.
ಆರೋಪಿಯನ್ನು ಬಂಧಿಸಿದ ಬಳಿಕ ವಿಚಾರಣೆ ನಡೆಸಿದ ಪೊಲೀಸರಿಗೆ ಹಲವು ಪ್ರಕರಣಗಳ ಸುಳಿವು ಸಿಕ್ಕಿದೆ. ಬೇಗೂರು ವ್ಯಾಪ್ತಿಯ ಮೂರು ಮನೆಗಳು, ರಾಮಮೂರ್ತಿನಗರದ ಎರಡು ಮನೆಗಳು ಹಾಗೂ ಆಲವಳ್ಳಿ, ಹೊಸಕೋಟೆ (ಹನಗೊಂಡನಹಳ್ಳಿ) ಮತ್ತು ಕೆ.ಆರ್.ಪುರಂನ ತಲಾ ಒಂದು ಮನೆ ಸೇರಿದಂತೆ ಒಟ್ಟು ಎಂಟು ಕಳ್ಳತನ ಪ್ರಕರಣಗಳು ಪತ್ತೆಯಾಗಿವೆ.
ಬಡವರಿಗೆ ನೆರವು ನೀಡಿ ಮಾಹಿತಿ ಪಡೆಯುತ್ತಿದ್ದ?
ಶಿವರಸನ್ ಮೂಲತಃ ಕಲಾವಿದನಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದ್ದು, ಐಷಾರಾಮಿ ಜೀವನ ನಡೆಸುವ ಆಸೆಯಿಂದ ಕಳ್ಳತನದ ದಾರಿ ಹಿಡಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ವೈಟ್‌ಫೀಲ್ಡ್‌ನಲ್ಲಿ ಬಾಡಿಗೆ ಮನೆ ಮಾಡಿಕೊಂಡು ನೆಲೆಸಿದ್ದ ಈತ, ಕಳ್ಳತನಕ್ಕೆ ಮುನ್ನ ಮನೆಗಳ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದ ಎನ್ನಲಾಗಿದೆ.
ಆಟೋ ಚಾಲಕರು ಹಾಗೂ ಬಡವರಿಗೆ ಕದ್ದ ಹಣದಿಂದಲೇ ಕೆಲವೊಮ್ಮೆ ಸಹಾಯ ಮಾಡುತ್ತಿದ್ದ ಆರೋಪಿ, ಅವರ ಮೂಲಕ ಬೀಗ ಹಾಕಿರುವ ಮನೆಗಳ ಕುರಿತು ಮಾಹಿತಿ ಪಡೆದುಕೊಳ್ಳುತ್ತಿದ್ದ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಸ್ನೇಹಿತರಿಗಾಗಿ ಕದ್ದ ಹಣದಲ್ಲೇ ಪಾರ್ಟಿ ಆಯೋಜಿಸುತ್ತಿದ್ದ ಎನ್ನುವುದೂ ಪೊಲೀಸರ ಗಮನಕ್ಕೆ ಬಂದಿದೆ.
ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಬೇಗೂರು ಪೊಲೀಸರು ಶಿವರಸನ್‌ನನ್ನು ಬಂಧಿಸಿದ್ದಾರೆ. ಆತನಿಂದ 196 ಗ್ರಾಂ ಚಿನ್ನ ಮತ್ತು ಸುಮಾರು 4 ಕೆಜಿ ಬೆಳ್ಳಿ ಸೇರಿದಂತೆ ಒಟ್ಟು 36 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಶಿವರಸನ್ ವಿರುದ್ಧ ಬೆಂಗಳೂರಿನ ವಿವಿಧ ಪೊಲೀಸ್ ಠಾಣೆಗಳಲ್ಲಿ ಈ ಹಿಂದೆಯೇ 30ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಇದೀಗ ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಮುಂದುವರಿಸಲಾಗಿದೆ. ಆರೋಪಿಯ ಹಿಂದಿನ ಕಳ್ಳತನ ಪ್ರಕರಣಗಳು ಹಾಗೂ ಇನ್ನಷ್ಟು ಕೃತ್ಯಗಳಲ್ಲಿ ಆತನ ಪಾತ್ರವಿದೆಯೇ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.



