ಬೆಂಗಳೂರು ನಾಯಂಡಳ್ಳಿಯ ಸಿಲಿಂಡರ್ ಸ್ಫೋಟ ಘಟನೆ; ಚಿಕಿತ್ಸೆ ಫಲಿಸದೆ ಮತ್ತೊಂದು ಮಗು ಸಾವು

ಬೆಂಗಳೂರಿನ ನಾಯಂಡಹಳ್ಳಿಯ ವಿನಾಯಕ ಲೇಔಟ್‌ನಲ್ಲಿ ನಡೆದ ಸಿಲಿಂಡರ್ ಸ್ಫೋಟ (Cylinder Blast) ಪ್ರಕರಣದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮೂರು ವರ್ಷದ ಮತ್ತೊಂದು ಮಗು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ.

ಬೆಂಗಳೂರು (Bengaluru): ನಗರದ ನಾಯಂಡಹಳ್ಳಿಯ ವಿನಾಯಕ ಲೇಔಟ್‌ನಲ್ಲಿ ಸಂಭವಿಸಿದ ಸಿಲಿಂಡರ್ ಸ್ಫೋಟ (Cylinder Blast) ಪ್ರಕರಣದಲ್ಲಿ ಮತ್ತೊಂದು ಮಗು ಮೃತಪಟ್ಟಿದೆ.

ಗಂಭೀರ ಸುಟ್ಟ ಗಾಯಗಳಿಂದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೂರು ವರ್ಷದ ಗೀತಾ ಭಾನುವಾರ ಕೊನೆಯುಸಿರೆಳೆದಿದ್ದಾಳೆ. ಇದರೊಂದಿಗೆ ಈ ದುರ್ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ.

ರಾಯಚೂರು ಮೂಲದ ಕೂಲಿ ಕಾರ್ಮಿಕ ಕರಿಲಿಂಗಪ್ಪ ಅವರ ಕುಟುಂಬ ಮೂರು ವರ್ಷಗಳ ಹಿಂದೆ ಉದ್ಯೋಗ ಅರಸಿ ಬೆಂಗಳೂರಿಗೆ ಬಂದಿತ್ತು. ನಾಲ್ವರು ಮಕ್ಕಳೊಂದಿಗೆ ಅವರು ನಾಯಂಡಹಳ್ಳಿಯ ವಿನಾಯಕ ಲೇಔಟ್‌ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಆದರೆ, ಅಡುಗೆ ಮನೆಯಲ್ಲಾದ ಅನಿಲ ಸೋರಿಕೆ ಇಡೀ ಕುಟುಂಬಕ್ಕೆ ಭೀಕರ ದುರಂತವನ್ನು ತಂದೊಡ್ಡಿದೆ.

ಇದನ್ನೂ ಓದಿ: ಬೆಂಗಳೂರು ಯುವತಿ ಪ್ರಿಯಕರನಿಗೆ ಕಳುಹಿಸಿದ್ದ ಖಾಸಗಿ ವಿಡಿಯೋ, ಫೋಟೋ ಅಶ್ಲೀಲ ವೆಬ್‌ಸೈಟ್‌ಗಳಲ್ಲಿ ಸೋರಿಕೆ

ಅಕ್ಟೋಬರ್ 2ರಂದು ಬೆಳಿಗ್ಗೆ ಸುಮಾರು 6.30ರ ವೇಳೆಗೆ ಅಡುಗೆ ಮಾಡಲು ಸ್ಟವ್ ಹಚ್ಚುತ್ತಿದ್ದಾಗ ಸಿಲಿಂಡರ್‌ನಿಂದ ಅನಿಲ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡು ಸ್ಫೋಟ ಸಂಭವಿಸಿತ್ತು. ಈ ಘಟನೆಯಲ್ಲಿ ಕರಿಲಿಂಗಪ್ಪ (40), ಅವರ ಪತ್ನಿ ಲಕ್ಷ್ಮಮ್ಮ (43), ಪುತ್ರಿಯರಾದ ಚೈತ್ರಾ (11), ಬಸಮ್ಮ (9) ಹಾಗೂ ಅವಳಿ ಮಕ್ಕಳಾದ ಗೀತಾ ಮತ್ತು ಗಿರಿಜಾ (3) ಗಂಭೀರವಾಗಿ ಗಾಯಗೊಂಡಿದ್ದರು.

ಗಾಯಾಳುಗಳನ್ನು ತಕ್ಷಣವೇ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಅಕ್ಟೋಬರ್ 7ರಂದು ಲಕ್ಷ್ಮಮ್ಮ ಮತ್ತು ಅವರ ಮೂರು ವರ್ಷದ ಮಗಳು ಗಿರಿಜಾ ಮೃತಪಟ್ಟಿದ್ದರು. ಇದೀಗ ಮತ್ತೊಂದು ಅವಳಿ ಮಗು ಗೀತಾ ಕೂಡ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಕುಟುಂಬದ ದುಃಖ ಮತ್ತಷ್ಟು ಹೆಚ್ಚಾಗಿದೆ.

ಚಂದ್ರಾ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಗಾಯಗೊಂಡಿರುವ ಕುಟುಂಬದ ಉಳಿದ ಸದಸ್ಯರಿಗೆ ಚಿಕಿತ್ಸೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

English Summary▼

ಕರ್ನಾಟಕ ರಾಜ್ಯದ ಮೂಲೆಮೂಲೆಗಳ ಕನ್ನಡ ಸುದ್ದಿಗಳ ಜೊತೆಗೆ ದಿನದ ಪ್ರಮುಖ ಬೆಳವಣಿಗೆಗಳನ್ನು Kannada News Today ಮೂಲಕ ತಿಳಿಯಿರಿ.

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories