ಬೆಂಗಳೂರಿನಲ್ಲಿ ಬೆಚ್ಚಿಬೀಳುವ ದರೋಡೆ: ಎಟಿಎಂ ವಾಹನದಿಂದ 7.11 ಕೋಟಿ ಲೂಟಿ

ಹಾಡಹಗಲೇ ಇನ್ನೋವಾ ಕಾರಿನಲ್ಲಿ ಬಂದ ಗ್ಯಾಂಗ್, ಆರ್‌ಬಿಐ ಅಧಿಕಾರಿಗಳಂತೆ ನಟಿಸಿ ಎಟಿಎಂ ಹಣ ಸಾಗಿಸುತ್ತಿದ್ದ ವಾಹನ ಹೈಜಾಕ್ ಮಾಡಿ 7.11 ಕೋಟಿ ರೂಪಾಯಿ ದರೋಡೆ ಮಾಡಿ ಪರಾರಿಯಾದ ಪ್ರಕರಣದಿಂದ ನಗರದಲ್ಲಿ ಭಾರಿ ಆತಂಕ.

ಬೆಂಗಳೂರು ನಗರದಲ್ಲಿ ಅತ್ಯಂತ ಧೈರ್ಯದಿಂದ ನಡೆಸಿದ ದರೋಡೆ ಪ್ರಕರಣ (Bengaluru Robbery) ಇಂದು ಭಾರೀ ಚರ್ಚೆಗೆ ಕಾರಣವಾಗಿದೆ. ಹಾಡಹಗಲೇ ನಡೆದ ಈ ಕೃತ್ಯದಲ್ಲಿ ಗ್ಯಾಂಗ್ ಒಂದು ಎಟಿಎಂಗೆ ಹಣ ಸಾಗಿಸುತ್ತಿದ್ದ ವಾಹನವನ್ನು (ATM Cash Van) ತಡೆದು, ಆರ್‌ಬಿಐ ಅಧಿಕಾರಿಗಳೆಂದು ಹೇಳಿಕೊಂಡು ತಂಡವನ್ನು ಹೆದರಿಸಿ ಹಣ ಲೂಟಿ ಮಾಡಿದೆ. ಘಟನೆ ನಡೆದಿದ್ದು ಜಯದೇವ ಡೇರಿ ಸರ್ಕಲ್ ಬಳಿಯಲ್ಲಿ.

ಘಟನೆಯ ಪ್ರಕಾರ, GJ 01 HT 9173 ಸಂಖ್ಯೆಯ ಎಟಿಎಂ ವಾಹನ ಸೌತ್ ಎಂಡ್ ಸರ್ಕಲ್ ಕಡೆ ಹೋಗುತ್ತಿದ್ದ ವೇಳೆ ಇನ್ನೋವಾ ಕಾರಿನಲ್ಲಿ ಬಂದ ಆರೇಳು ಜನರ ತಂಡವು ವಾಹನದ ಮಾರ್ಗ ತಡೆದಿದೆ.

‘ನಾವು ಆರ್‌ಬಿಐದಿಂದ ಬಂದಿದ್ದೇವೆ, ನೀವು ನಿಯಮ ಉಲ್ಲಂಘಿಸಿದ್ದೀರಿ’ ಎಂದು ಸಿಬ್ಬಂದಿಯನ್ನು ಗೊಂದಲಕ್ಕೀಡಾಗಿಸಿ ಆರೋಪಿಗಳು ವಾಹನವನ್ನು ಸಂಪೂರ್ಣ ತಮ್ಮ ವಶಕ್ಕೆ ಪಡೆದಿದ್ದಾರೆ.

ಎಟಿಎಂ ವಾಹನದಲ್ಲಿ ನಾಲ್ವರು CMS ಸಿಬ್ಬಂದಿ ಇದ್ದರು, ಚಾಲಕ, ಇಬ್ಬರು ಗನ್‌ಮ್ಯಾನ್ ಹಾಗೂ ಇನ್ನೊಬ್ಬ ಹಣ ಹಾಕುವ ಸಿಬ್ಬಂದಿ. ಇವರನ್ನೆಲ್ಲ ಅಲ್ಲೇ ಇಳಿಸಿ, ವಾಹನ ಹಾಗೂ ಚಾಲಕನನ್ನು ಡೇರಿ ಸರ್ಕಲ್ ಫ್ಲೈಓವರ್ ಕಡೆಗೆ ಕರೆದೊಯ್ಯಲಾಗಿದೆ. ನಂತರ ಫ್ಲೈಓವರ್ ಮೇಲೆ ನಿಲ್ಲಿಸಿ, ಸುಮಾರು 7.11 ಕೋಟಿ ರೂಪಾಯಿ ಇದ್ದ ಹಣವನ್ನು ಇನ್ನೋವಾ ಕಾರಿಗೆ ವರ್ಗಾಯಿಸಿ ಕ್ಷಣಾರ್ಧದಲ್ಲಿ ಪರಾರಿಯಾಗಿದ್ದಾರೆ.

ಇದನ್ನೂ ಓದಿ: ಇಂತಹ ಬಿಪಿಎಲ್ ಕಾರ್ಡ್ ಕುಟುಂಬಕ್ಕೆ ಮನೆ ಬಾಗಿಲಿಗೆ ಇನ್ಮುಂದೆ ರೇಷನ್! ಹೊಸ ರೂಲ್ಸ್

ಈ ಗ್ಯಾಂಗ್ ಬಳಸಿದ ಇನ್ನೋವಾ ಕಾರಿನ ನಂಬರ್ ಪ್ಲೇಟ್ ಕೂಡ ನಕಲಿ ಎಂಬುದು ತನಿಖೆಯಲ್ಲಿ ಗೊತ್ತಾಗಿದೆ. KA 03 NC 8052 ಎಂದು ಬರೆದಿದ್ದರೂ, ಅದೇ ನಂಬರ್‌ನ ಅಸಲಿ ವಾಹನ ಮಾರುತಿ ಸುಜುಕಿ ಆಗಿರುವುದು ಪೊಲೀಸ್ ಪರಿಶೀಲನೆಯಲ್ಲಿ ಸ್ಪಷ್ಟವಾಗಿದೆ. ಇದರರ್ಥ, ಈ ದರೋಡೆ ಸಂಪೂರ್ಣ ಪೂರ್ವಯೋಜನೆಯೊಂದಿಗೆ ನಡೆದಿದೆ ಎನ್ನುವುದಕ್ಕೆ ಸಾಕ್ಷಿ.

ಘಟನೆಯ ನಂತರ ಸಿದ್ಧಾಪುರ ಹಾಗೂ ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ಆರಂಭಿಸಿದ್ದಾರೆ. ಫಿಂಗರಪ್ರಿಂಟ್ ತಂಡ, ಡಾಗ್ ಸ್ಕ್ವಾಡ್ ಕೂಡ ಸ್ಥಳಕ್ಕೆ ಕರೆತರಲಾಗಿದ್ದು, ತನಿಖೆ ವೇಗವಾಗಿ ಸಾಗುತ್ತಿದೆ. ಪ್ರಸ್ತುತ CMS ಸಿಬ್ಬಂದಿಯ ವಿಚಾರಣೆ ಮುಂದುವರಿದಿದೆ.

ದರೋಡೆಕೋರರು ಡೇರಿ ಸರ್ಕಲ್, ಸೋನಿ ವರ್ಲ್ಡ್, ದೊಮ್ಮಲೂರು, ವೈಟ್‌ಫಿಲ್ಡ್ ಮಾರ್ಗವಾಗಿ ಹೊಸಕೋಟೆ ದಿಕ್ಕಿಗೆ ಹೊರಟಿರುವ ಮಾಹಿತಿ ಪೊಲೀಸರಿಗೆ ಸಿಕ್ಕಿದೆ. ಇದರಿಂದ ನಗರದ ಹೊರವಲಯಗಳಲ್ಲಿ ಈಗ ತೀವ್ರ ನಿಗಾ ಜಾರಿಯಾಗಿದೆ.

ಇಷ್ಟೊಂದು ದೊಡ್ಡ ಮೊತ್ತದ ಹಣ ದೋಚಲ್ಪಟ್ಟ ಹಿನ್ನೆಲೆಯಲ್ಲಿ, ಬೆಂಗಳೂರು ಪೊಲೀಸ್ ಆಯುಕ್ತರು ಸಂಪೂರ್ಣ ನಗರಕ್ಕೆ ಹೈಅಲರ್ಟ್ ಘೋಷಿಸಿದ್ದಾರೆ. ಎಲ್ಲಾ ಗಡಿ ಪ್ರದೇಶಗಳಲ್ಲಿ ವಾಹನ ಪರಿಶೀಲನೆ ಹೆಚ್ಚಿಸಲಾಗಿದೆ. ಆರೋಪಿಗಳು ನಗರ ಮೀರದಂತೆ ವಿಶೇಷ ದಳವನ್ನೂ ನಿಯೋಜಿಸಲಾಗಿದೆ.

Bengaluru Daylight Heist, 7.11 Crore Looted from ATM Cash Van

English Summary▼

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories