ಮೈಸೂರು ದಸರಾ ಮಾದರಿಯಲ್ಲಿ ಬೆಂಗಳೂರು ಕರಗ ಆಚರಣೆಗೆ ಭರ್ಜರಿ ಸಿದ್ಧತೆ
ಐತಿಹಾಸಿಕ ಧರ್ಮರಾಯಸ್ವಾಮಿ ದೇವಾಲಯದಲ್ಲಿ ನಡೆಯುವ ಬೆಂಗಳೂರು ಕರಗ ಶಕ್ತ್ಯೋತ್ಸವ ಈ ಬಾರಿ ಮೈಸೂರು ದಸರಾ ಶೈಲಿಯಲ್ಲಿ ಅದ್ಧೂರಿಯಾಗಿ ನಡೆಯಲಿದೆ. ನಗರದ ಪ್ರಮುಖ ರಸ್ತೆಗಳಲ್ಲಿ ದೀಪಾಲಂಕಾರ ಮತ್ತು ವೈಭವಯುತ ಆಚರಣೆಗೆ ಸಕಲ ಸಿದ್ಧತೆಗಳು ನಡೆಯುತ್ತಿವೆ.

- ಬೆಂಗಳೂರು ಕರಗ ಶಕ್ತ್ಯೋತ್ಸವ
- ಮೈಸೂರು ದಸರಾ ಶೈಲಿಯಲ್ಲಿ ಆಚರಣೆ
- ಕರಗ ಉತ್ಸವಕ್ಕೆ 39 ಲಕ್ಷ ರೂ. ವೆಚ್ಚ
ಬೆಂಗಳೂರು (Bengaluru): ಐತಿಹಾಸಿಕ ಹಾಗೂ ಸಂಪ್ರದಾಯಿಕ ಮಹತ್ವ ಹೊಂದಿರುವ ಬೆಂಗಳೂರು ಕರಗ ಶಕ್ತ್ಯೋತ್ಸವ (Bengaluru Karaga) ಈ ಬಾರಿ ಇನ್ನಷ್ಟು ವೈಭವದಿಂದ ನಡೆಯಲು ಸಿದ್ಧವಾಗಿದೆ. ಕೇವಲ ಒಂಬತ್ತು ದಿನಗಳು ಬಾಕಿ ಇರುವ ಹಿನ್ನೆಲೆ ನಗರದಲ್ಲಿ ಉತ್ಸವದ ಸಿದ್ಧತೆಗಳು ಜೋರಾಗಿವೆ.
ಧರ್ಮರಾಯಸ್ವಾಮಿ ದೇವಾಲಯದಲ್ಲಿ ನಡೆಯುವ ಈ ಪುರಾತನ ಉತ್ಸವವನ್ನು ಈ ಬಾರಿ ಮೈಸೂರು ದಸರಾ ಶೈಲಿಯಲ್ಲಿ ಆಚರಿಸಲು ಯೋಜನೆ ರೂಪಿಸಲಾಗಿದೆ. ನಗರದ ಪ್ರಮುಖ ರಸ್ತೆಗಳನ್ನು ಆಕರ್ಷಕ ದೀಪಾಲಂಕಾರದಿಂದ ಅಲಂಕರಿಸುವ ಮೂಲಕ ಉತ್ಸವಕ್ಕೆ ವಿಶೇಷ ಕಳೆ ತರಲು ನಿರ್ಧರಿಸಲಾಗಿದೆ.
ಲಕ್ಷಾಂತರ ರೂ. ವೆಚ್ಚದಲ್ಲಿ ದೀಪಾಲಂಕಾರ
ಬೆಂಗಳೂರು ನಗರವನ್ನು ಹಬ್ಬದ ಸಂಭ್ರಮದಲ್ಲಿ ಮಿಂಚಿಸುವ ಉದ್ದೇಶದಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಸುಮಾರು 39 ಲಕ್ಷ ರೂಪಾಯಿ ವೆಚ್ಚದಲ್ಲಿ ಲೈಟಿಂಗ್ ವ್ಯವಸ್ಥೆ ಮಾಡಲು ಮುಂದಾಗಿದೆ.
ಮೊದಲ ಹಂತದಲ್ಲಿ ಸುಮಾರು 10.14 ಲಕ್ಷ ರೂಪಾಯಿ ವೆಚ್ಚದಲ್ಲಿ ಧರ್ಮರಾಯಸ್ವಾಮಿ ದೇವಾಲಯ, ಸಂಪಂಗಿ ಕೆರೆ ಮತ್ತು ಕರಗ ಸಾಗುವ ಪ್ರಮುಖ ಮಾರ್ಗಗಳಲ್ಲಿ ದೀಪಾಲಂಕಾರ ಅಳವಡಿಸಲಾಗುತ್ತದೆ.
ಇದರ ನಂತರ ಎರಡನೇ ಹಂತದಲ್ಲಿ 28.92 ಲಕ್ಷ ರೂಪಾಯಿ ವೆಚ್ಚದಲ್ಲಿ ಜಿಬಿಎ ಪ್ರಧಾನ ಕಚೇರಿ, ಪ್ರಮುಖ ವೃತ್ತಗಳು ಮತ್ತು ಪ್ರಮುಖ ರಸ್ತೆಗಳನ್ನು ಬೆಳಗಿಸಲು ಯೋಜನೆ ರೂಪಿಸಲಾಗಿದೆ. ಈ ಬೆಳಕು ಅಲಂಕಾರದಿಂದ ನಗರವೇ ಹಬ್ಬದ ಸಂಭ್ರಮದಲ್ಲಿ ಕಂಗೊಳಿಸಲಿದೆ.
ಯಾವಾಗ ನಡೆಯಲಿದೆ ಕರಗ?
ಬೆಂಗಳೂರು ಕರಗ ಉತ್ಸವಕ್ಕೆ ಮಾರ್ಚ್ 24ರಂದು ಧರ್ಮರಾಯಸ್ವಾಮಿ ದೇವಾಲಯದಲ್ಲಿ ಧ್ವಜಾರೋಹಣ ಮಾಡುವ ಮೂಲಕ ಅಧಿಕೃತ ಚಾಲನೆ ದೊರೆಯಲಿದೆ.
ಉತ್ಸವದ ಅಂಗವಾಗಿ ಮಾರ್ಚ್ 30ರಂದು ಹಸಿ ಕರಗ ನಡೆಯಲಿದ್ದು, ಏಪ್ರಿಲ್ 1ರಂದು ಮುಖ್ಯ ಕರಗ ಶಕ್ತ್ಯೋತ್ಸವ ನಡೆಯಲಿದೆ. ಈ ದಿನ ಲಕ್ಷಾಂತರ ಭಕ್ತರು ಭಾಗವಹಿಸುವ ನಿರೀಕ್ಷೆ ಇದೆ.
ಭಕ್ತರಿಗೆ ಮನರಂಜನೆ ಕಾರ್ಯಕ್ರಮ
ಕರಗ ಉತ್ಸವದ ವೇಳೆ ಭಕ್ತರು ಮತ್ತು ಪ್ರವಾಸಿಗರಿಗೆ ವಿಶೇಷ ಅನುಭವ ನೀಡುವ ಉದ್ದೇಶದಿಂದ ಕೆಲವು ಸಾಂಸ್ಕೃತಿಕ ಮತ್ತು ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸುವ ಬಗ್ಗೆ ಕೂಡ ಚರ್ಚೆ ನಡೆಯುತ್ತಿದೆ.
ಕಳೆದ ವರ್ಷ ಸುಮಾರು 40 ಲಕ್ಷ ರೂಪಾಯಿ ವೆಚ್ಚದಲ್ಲಿ ಕರಗ ಉತ್ಸವ ಆಯೋಜಿಸಲಾಗಿತ್ತು. ಆದರೆ ಈ ಬಾರಿ ಕೇವಲ ದೀಪಾಲಂಕಾರಕ್ಕೇ ಸುಮಾರು 39 ಲಕ್ಷ ರೂ. ಮೀಸಲಾಗಿರುವುದು, ಈ ವರ್ಷದ ಉತ್ಸವ ಇನ್ನಷ್ಟು ಅದ್ಧೂರಿಯಾಗಿ ನಡೆಯಲಿದೆ ಎಂಬ ನಿರೀಕ್ಷೆಯನ್ನು ಹೆಚ್ಚಿಸಿದೆ.



