ಮಾನವೀಯತೆ ಮರೆತ ಬೆಂಗಳೂರು ಜನ: ರಸ್ತೆಯಲ್ಲೇ ಕೊನೆಯುಸಿರೆಳೆದ ವ್ಯಕ್ತಿ! ಜೀವಕ್ಕಿಲ್ವಾ ಬೆಲೆ
ಬೆಂಗಳೂರು ನಗರದಲ್ಲಿ ಹೃದಯಾಘಾತದಿಂದ ಬಳಲುತ್ತಿದ್ದ ವ್ಯಕ್ತಿಗೆ ರಸ್ತೆಯಲ್ಲಿ ಯಾರೂ ನೆರವಾಗದೆ ಸಾವಿಗೀಡಾದ ಘಟನೆ ಮಾನವೀಯತೆಯ ಮೇಲೆ ಪ್ರಶ್ನೆ ಎಬ್ಬಿಸಿದ್ದು, ಸಮಯಕ್ಕೆ ಸಹಾಯ ದೊರೆತಿದ್ದರೆ ಜೀವ ಉಳಿಯಬಹುದಿತ್ತು.
- ಬೆಂಗಳೂರು ರಸ್ತೆಯಲ್ಲಿ ಹೃದಯಾಘಾತ, ನೆರವಾಗದ ಜನ
- ಜೀವ ಕಳೆದುಕೊಂಡ ವ್ಯಕ್ತಿ, ಕೈಜೋಡಿಸಿ ಬೇಡಿಕೊಂಡ ಪತ್ನಿ
- ಸಾವಿನ ನಡುವೆಯೂ ಕಣ್ಣು ದಾನ ಮಾಡಿ ಮಾನವೀಯತೆ
ಬೆಂಗಳೂರು (Bengaluru): ಬೆಂಗಳೂರು ನಗರದಲ್ಲಿ ಮಂಗಳವಾರ ಬೆಳಗಿನ ಜಾವ ಮಾನವೀಯತೆಯನ್ನು ಪ್ರಶ್ನಿಸುವ ಹೃದಯವಿದ್ರಾವಕ ಘಟನೆ ನಡೆದಿದೆ. ರಸ್ತೆಯ ಮಧ್ಯೆ ವ್ಯಕ್ತಿಯೊಬ್ಬ ಜೀವ ಉಳಿಸಿಕೊಳ್ಳಲು ಹೋರಾಡುತ್ತಿದ್ದರೂ, ಸುತ್ತಲಿದ್ದವರು ಕಣ್ಣು ಮುಚ್ಚಿಕೊಂಡಂತೆ ನಡೆದುಕೊಂಡರು.
ಆಸ್ಪತ್ರೆಯಿಂದ ಆಸ್ಪತ್ರೆ ಹುಡುಕಾಟ
ಬನಶಂಕರಿ ಮೂರನೇ ಹಂತದ (Banashankari 3rd State) ಬಾಲಾಜಿನಗರದ ನಿವಾಸಿ ವೆಂಕಟರಾಮನ್ (34) ಅವರಿಗೆ ತೀವ್ರ ಅಸ್ವಸ್ಥತೆ ಕಾಣಿಸಿಕೊಂಡಿತ್ತು. ಆತಂಕಗೊಂಡ ಪತ್ನಿ ರೂಪಾ ತಕ್ಷಣ ಸ್ಕೂಟಿಯಲ್ಲಿ ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ವೈದ್ಯರು ಹೃದಯಾಘಾತ ಎಂದು ದೃಢಪಡಿಸಿ, ತಕ್ಷಣ ಜಯದೇವ ಹೃದಯರೋಗ ಆಸ್ಪತ್ರೆಗೆ ಸಾಗಿಸಲು ಸಲಹೆ ನೀಡಿದರು.
ರಸ್ತೆಯಲ್ಲಿ ಕುಸಿದ ಜೀವ
ಅಂಬುಲೆನ್ಸ್ ಲಭ್ಯವಿಲ್ಲದ ಕಾರಣ, ರೂಪಾ ತಮ್ಮ ಪತಿಯನ್ನು ಮತ್ತೆ ಸ್ಕೂಟಿಯಲ್ಲಿ ಕರೆದೊಯ್ಯಲು ಹೊರಟರು. ಕದಿರೇನಹಳ್ಳಿ ಬ್ರಿಡ್ಜ್ ಬಳಿ ಬಂದಾಗಲೇ ವೆಂಕಟರಾಮನ್ ಸ್ಕೂಟಿಯಿಂದ ಕೆಳಗೆ ಬಿದ್ದು ಅಚೇತನರಾದರು. ಜೀವ ಉಳಿಸಲು ರೂಪಾ ಕೈಜೋಡಿಸಿ ವಾಹನಗಳ ಮುಂದೆ ನಿಂತು ಬೇಡಿಕೊಂಡರೂ, ಯಾರೂ ಸಹಾಯಕ್ಕೆ ನಿಲ್ಲಲಿಲ್ಲ.
ಇದನ್ನೂ ಓದಿ: ಬೆಂಗಳೂರು ಟು ಸೇಲಂ ಸಾಗುತ್ತಿದ್ದ ಬೈಕ್ ಹಾಗೂ ಕಾರಿಗೆ ಲಾರಿ ಡಿಕ್ಕಿ, ನಾಲ್ವರು ಸ್ಥಳದಲ್ಲೇ ಸಾವು
ಕೊನೆಯ ಪ್ರಯತ್ನವೂ ವಿಫಲ
ಸ್ವಲ್ಪ ಸಮಯದ ಬಳಿಕ ವೆಂಕಟರಾಮನ್ ಸಹೋದರಿ ಸ್ಥಳಕ್ಕೆ ಬಂದರು. ಇಬ್ಬರೂ ಸೇರಿ ಕ್ಯಾಬ್ ಮೂಲಕ ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನ ಮಾಡಿದರೂ, ದಾರಿ ಮಧ್ಯೆಯೇ ವೆಂಕಟರಾಮನ್ ಕೊನೆಯುಸಿರೆಳೆದರು.
ಸಾವಿನಲ್ಲೂ ಮಾನವೀಯತೆ
ಸಮಾಜ ಮೌನವಾಗಿದ್ದರೂ, ರೂಪಾ ಮಹತ್ವದ ನಿರ್ಧಾರ ಕೈಗೊಂಡರು. ತಮ್ಮ ಪತಿಯ ಕಣ್ಣುಗಳನ್ನು ದಾನ ಮಾಡುವ ಮೂಲಕ ನೋವಿನ ನಡುವೆಯೂ ಮಾನವೀಯತೆಯ ಬೆಳಕು ಚೆಲ್ಲಿದರು. ಈ ಘಟನೆ ಬೆಂಗಳೂರು ನಗರದಲ್ಲಿ ಜನಸಾಮಾನ್ಯರ ಸ್ಪಂದನೆ ಕುರಿತು ಗಂಭೀರ ಚರ್ಚೆಗೆ ಕಾರಣವಾಗಿದೆ.



