ಬೆಂಗಳೂರು ವ್ಯಕ್ತಿ 40 ಪುಟಗಳ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ
ಬೆಂಗಳೂರಿನ ಮಾರತ್ತಹಳ್ಳಿ ಮಂಜುನಾಥ ಲೇಔಟ್ ನಲ್ಲಿ ವ್ಯಕ್ತಿ 40 ಪುಟಗಳ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ
ಬೆಂಗಳೂರು (Bengaluru): ಪತ್ನಿ ತನ್ನ ವಿರುದ್ಧ ಪ್ರಕರಣ ದಾಖಲಿಸಿದ್ದಾಳೆಂದು ಪತಿ 40 ಪುಟಗಳ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಘಟನೆ ಸೋಮವಾರ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.
ಮಾರತ್ತಹಳ್ಳಿ ಮಂಜುನಾಥ ಲೇಔಟ್ ನಲ್ಲಿ ಉತ್ತರ ಪ್ರದೇಶದ ಅತುಲ್ ಸುಭಾಷ್ (35) ವಾಸವಿದ್ದ. ಆತ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಎಂದು ವರದಿಯಾಗಿದೆ. ಆತನ ಪತ್ನಿ ಜಗಳವಾಡಿಕೊಂಡು ಯುಪಿಯಲ್ಲಿರುವ ತನ್ನ ಹುಟ್ಟೂರಿಗೆ ಹೋಗಿ ಅಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಅಂದಿನಿಂದ, ಈತ ತೀವ್ರವಾಗಿ ಮನ ನೊಂದಿದ್ದ ಎನ್ನಲಾಗಿದೆ.
ಭಾನುವಾರ ಮಧ್ಯರಾತ್ರಿ 40 ಪುಟಗಳ ಡೆತ್ ನೋಟ್ ಬರೆದು ವಿವಿಧ ದಾಖಲೆಗಳನ್ನು ಲಗತ್ತಿಸಿ ಸೇವಾ ಸಂಸ್ಥೆಯೊಂದರ ವಾಟ್ಸ್ ಆ್ಯಪ್ ಗ್ರೂಪ್ ನಲ್ಲಿ ಹಾಕಿದ್ದ. ಈ ಡೆತ್ ನೋಟ್ ಅನ್ನು ಸುಪ್ರೀಂ ಕೋರ್ಟ್‌ಗೆ ಕಳುಹಿಸುವಂತೆ ಕೋರಿದ್ದಾನೆ.
ಕಳೆದ ಮೂರು ದಿನಗಳಿಂದ ಆತ್ಮಹತ್ಯೆಗೆ ಸಿದ್ಧತೆ ನಡೆಸಿದ್ದನಂತೆ. ದಿನ 1, ದಿನ 2 ಮತ್ತು 3 ನೇ ದಿನ ಏನು ಮಾಡಬೇಕು ಎಂದು ಮನೆಯಲ್ಲಿ ಬೋರ್ಡ್ ಮೇಲೆ ಬರೆದು ಅಂಟಿಸಿಕೊಂಡಿದ್ದ.
ಬೆಳಗ್ಗೆ ಎದ್ದಾಗಿನಿಂದ ಆತ್ಮಹತ್ಯೆ ಮಾಡಿಕೊಳ್ಳುವವರೆಗೂ ಏನು ಮಾಡಬೇಕೆಂದು ನೆನಪಿಸಿಕೊಂಡಿದ್ದಾನೆ, ನಂತರ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಾಹಿತಿ ತಿಳಿದ ತಕ್ಷಣ ಮಾರತ್ತಹಳ್ಳಿ ಪೊಲೀಸರು ಆಗಮಿಸಿ ಡೆತ್ ನೋಟ್ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Bengaluru Man Writes 40-Page Death Note After Wife Files Case, Dies by Suicide