ಬೆಂಗಳೂರು: 6 ತಿಂಗಳ ಪ್ಲ್ಯಾನ್, 1 ಕೆಜಿ ಚಿನ್ನ ಕಳ್ಳತನ; ನಾಲ್ವರು ನೇಪಾಳಿ ಗ್ಯಾಂಗ್‌ ಅರೆಸ್ಟ್

ಕಟ್ಟಿಗೆನಹಳ್ಳಿಯಲ್ಲಿ ಖಾಸಗಿ ಕಂಪನಿ ಉದ್ಯೋಗಿಯ ಮನೆಯಿಂದ ಚಿನ್ನಾಭರಣ ಕದ್ದು ನೇಪಾಳಕ್ಕೆ ಪರಾರಿಯಾಗಲು ಯತ್ನಿಸಿದ್ದ ನಾಲ್ವರನ್ನು ಯಲಹಂಕ ಪೊಲೀಸರು ಬಂಧಿಸಿ 55 ಲಕ್ಷದ ವಸ್ತು ವಶಪಡಿಸಿಕೊಂಡಿದ್ದಾರೆ.

ಬೆಂಗಳೂರು (Bengaluru), ಆಗಸ್ಟ್ 25: ನಗರದಲ್ಲಿ ಮನೆಗಳ್ಳತನ ನಡೆಸಿ ನೇಪಾಳಕ್ಕೆ ಪರಾರಿಯಾಗಲು ಯತ್ನಿಸಿದ್ದ ಆರೋಪಿಗಳ ತಂಡವೊಂದನ್ನು ಯಲಹಂಕ ಪೊಲೀಸರು ಪತ್ತೆಹಚ್ಚಿದ್ದಾರೆ. ಕಟ್ಟಿಗೆನಹಳ್ಳಿಯ (Kattigenahalli) ಖಾಸಗಿ ಕಂಪನಿ ಉದ್ಯೋಗಿ ಚಂದ್ರಮೌಳಿ ಅವರ ಮನೆಯಲ್ಲಿ ಸುಮಾರು ಒಂದು ಕೆಜಿ ಚಿನ್ನಾಭರಣ ಕಳ್ಳತನವಾಗಿದ್ದ ಪ್ರಕರಣದ ತನಿಖೆ ನಡೆಸಿದ ಪೊಲೀಸರು, ನಾಲ್ವರು ಆರೋಪಿಗಳನ್ನು ನೇಪಾಳ ಗಡಿಯಲ್ಲೇ ಬಂಧಿಸಿದ್ದಾರೆ.

ಧೀರೇಂದ್ರ ಪ್ರೇಮ್, ಅಭಿಷೇಕ್, ಅಂಬರೆ ಧಮೈ ಮತ್ತು ದೀಪಕ್ ಶಾಹಿ ಬಂಧಿತ ಆರೋಪಿಗಳು. ಆರೋಪಿಗಳು ಭದ್ರತಾ ಸಿಬ್ಬಂದಿಯಾಗಿ (Security Guard) ಕೆಲಸ ಮಾಡುತ್ತಿದ್ದವರು ಎನ್ನಲಾಗಿದೆ. ಪ್ರಕರಣದ ಪ್ರಮುಖ ಆರೋಪಿಗಳಾದ ಸಂಜಯ್ ಮತ್ತು ಆತನ ಪತ್ನಿ ಕಳ್ಳತನದ ಬಳಿಕ ಪರಾರಿಯಾಗಿದ್ದು, ಅವರಿಗಾಗಿ ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ.

ಕಳ್ಳತನ ನಡೆದ ಬಳಿಕ ಆರೋಪಿಗಳು ಬೇರೆ ಬೇರೆ ಮಾರ್ಗಗಳಲ್ಲಿ ನೇಪಾಳದತ್ತ ತೆರಳಿದ್ದರು. ಯಲಹಂಕ ಪೊಲೀಸರು ತನಿಖೆ ವೇಳೆ ಸಾಮಾಜಿಕ ಜಾಲತಾಣದ (Facebook) ಮೂಲಕ ಆರೋಪಿಗಳ ಚಲನವಲನದ ಸುಳಿವು ಪಡೆದುಕೊಂಡಿದ್ದರು. ಆದರೆ ಅಷ್ಟರಲ್ಲಾಗಲೇ ಆರೋಪಿಗಳು ನೇಪಾಳ ಗಡಿ ತಲುಪಿದ್ದರು.

ಆರು ತಿಂಗಳಿಂದಲೇ ಕಳ್ಳತನಕ್ಕೆ ಪ್ಲ್ಯಾನ್?

ಪೊಲೀಸರ ತನಿಖೆಯಲ್ಲಿ ಕಳ್ಳತನದ ಹಿಂದೆ ದೀರ್ಘ ಸಮಯದ ಯೋಜನೆ ನಡೆದಿರುವುದು ಬೆಳಕಿಗೆ ಬಂದಿದೆ ಎನ್ನಲಾಗಿದೆ. ಸುಮಾರು ಆರು ತಿಂಗಳಿನಿಂದಲೇ ಮನೆ ಮತ್ತು ಅಲ್ಲಿದ್ದ ಚಿನ್ನಾಭರಣಗಳ ಬಗ್ಗೆ ಆರೋಪಿಗಳು ಮಾಹಿತಿ ಕಲೆಹಾಕುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಮುಖ ಆರೋಪಿ ಸಂಜಯ್ ಮತ್ತು ಆತನ ಪತ್ನಿ ಚಂದ್ರಮೌಳಿ ಅವರ ಮನೆಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು ಎನ್ನಲಾಗಿದೆ. ಕಳೆದ ವರ್ಷ ನಡೆದ ವರಮಹಾಲಕ್ಷ್ಮೀ ಪೂಜೆಯ ಸಂದರ್ಭದಲ್ಲಿ ಮನೆಯಲ್ಲಿ ಇದ್ದ ಚಿನ್ನಾಭರಣಗಳನ್ನು ಸಂಜಯ್ ಪತ್ನಿ ಗಮನಿಸಿದ್ದಳು ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಆಗಸ್ಟ್ 16ರಂದು ಚಂದ್ರಮೌಳಿ ಕುಟುಂಬದವರು ಸಂಬಂಧಿಯ ತಿಥಿ ಕಾರ್ಯಕ್ರಮಕ್ಕೆ ತೆರಳಿದ್ದರು. ಇದೇ ಅವಕಾಶವನ್ನು ಬಳಸಿಕೊಂಡ ಸಂಜಯ್, ರಾತ್ರಿ ಸುಮಾರು 2 ಗಂಟೆ ವೇಳೆಗೆ ಮನೆಗೆ ನುಗ್ಗಿ ಚಿನ್ನಾಭರಣ ಕದ್ದಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ. ಬಳಿಕ ಕದ್ದ ಚಿನ್ನವನ್ನು ಸಂಬಂಧಿಕರ ಬಳಿ ಇಟ್ಟು, ದಂಪತಿ ವಿಮಾನದಲ್ಲಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಇತ್ತ ತಂಡದ ಇತರ ಆರೋಪಿಗಳು ಕದ್ದ ವಸ್ತುಗಳೊಂದಿಗೆ ಬಸ್‌ನಲ್ಲಿ ನೇಪಾಳದತ್ತ ತೆರಳಿದ್ದರು. ಈ ಮಾಹಿತಿ ಪೊಲೀಸರಿಗೆ ಸಿಕ್ಕ ಬಳಿಕ ತಕ್ಷಣವೇ ಎಸ್‌ಎಸ್‌ಬಿ (SSB) ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ನೇಪಾಳ ಗಡಿಯ ಬಳಿ ಬಸ್ ತಡೆದು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.

ಬಂಧಿತರಿಂದ ಸುಮಾರು 55 ಲಕ್ಷ ರೂ. ಮೌಲ್ಯದ 360 ಗ್ರಾಂ ಚಿನ್ನ ಮತ್ತು 960 ಗ್ರಾಂ ಬೆಳ್ಳಿ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಯುತ್ತಿದ್ದು, ಪರಾರಿಯಾಗಿರುವ ಸಂಜಯ್ ಹಾಗೂ ಆತನ ಪತ್ನಿಯ ಪತ್ತೆಗೆ ಕಾರ್ಯಾಚರಣೆ ಮುಂದುವರಿದಿದೆ.

ಪ್ರಮುಖ ಆರೋಪಿಗೆ ಹಳೆಯ ಕ್ರೈಂ ಕನೆಕ್ಷನ್?

ಪ್ರಕರಣದ ಪ್ರಮುಖ ಆರೋಪಿ ಸಂಜಯ್‌ಗೆ ಈ ಹಿಂದೆಯೂ ಅಪರಾಧ ಪ್ರಕರಣದ ಹಿನ್ನೆಲೆ ಇತ್ತು ಎಂಬ ಮಾಹಿತಿ ತನಿಖೆಯಲ್ಲಿ ಹೊರಬಂದಿದೆ. 2021ರಲ್ಲಿ ಕೆ.ಜಿ.ಹಳ್ಳಿ ಪೊಲೀಸರು ಮನೆಗಳ್ಳತನ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಆತನನ್ನು ಬಂಧಿಸಿದ್ದರು ಎನ್ನಲಾಗಿದೆ.

ಜೈಲಿನಿಂದ ಹೊರಬಂದ ಬಳಿಕವೂ ಮತ್ತೆ ಕಳ್ಳತನದ ಕೃತ್ಯದಲ್ಲಿ ಭಾಗಿಯಾಗಿರುವ ಆರೋಪ ಕೇಳಿಬಂದಿದೆ. ಇದೀಗ ಯಲಹಂಕ ಪೊಲೀಸರು ಬಂಧಿತ ನಾಲ್ವರನ್ನು ವಿಚಾರಣೆ ನಡೆಸುತ್ತಿದ್ದು, ಈ ತಂಡ ಬೆಂಗಳೂರಿನಲ್ಲಿ ಇನ್ನೂ ಎಷ್ಟು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿತ್ತು ಎಂಬುದನ್ನು ಪತ್ತೆಹಚ್ಚಲು ತನಿಖೆ ಮುಂದುವರಿಸಿದ್ದಾರೆ.

English Summary▼

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories