ಬೆಂಗಳೂರು ಮಳೆ ಫಜೀತಿ! ಮರಗಳು ಉರುಳಿ ಬಿದ್ದು ಬಸ್, ಟ್ರಕ್, ಬೈಕ್ ಹಾಗೂ ಕಾರುಗಳು ಜಖಂ
Bengaluru Rains: ಬೆಂಗಳೂರಿನಲ್ಲಿ ಸತತ ಮಳೆಯಿಂದ ಹಲವು ಪ್ರದೇಶಗಳಲ್ಲಿ ಮರಗಳು ಉರುಳಿ ಬಿದ್ದು ಬಸ್, ಟ್ರಕ್, ಬೈಕ್ ಹಾಗೂ ಕಾರುಗಳು ಜಖಂಗೊಂಡಿವೆ. ಕೆಲವೆಡೆ ವಿದ್ಯುತ್ ವ್ಯತ್ಯಯ ಉಂಟಾಗಿದ್ದು, ವಾಹನ ಸವಾರರು ಪರದಾಡಿದ್ದಾರೆ.

- ಬೆಂಗಳೂರಿನಲ್ಲಿ ಭಾರೀ ಮಳೆಗೆ ಮರಗಳು ಧರೆಗೆ
- ಬಿಎಂಟಿಸಿ ಬಸ್, ಟ್ರಕ್, ಬೈಕ್ ಹಾಗೂ ಕಾರು ಜಖಂ
- ಹಲವು ಪ್ರದೇಶಗಳಲ್ಲಿ ಮಳೆ ನೀರು, ವಿದ್ಯುತ್ ವ್ಯತ್ಯಯ
ಬೆಂಗಳೂರು (Bengaluru): ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಮಳೆ ಅಬ್ಬರ (Rains) ಮುಂದುವರಿದಿದ್ದು, ಮಂಗಳವಾರ ತಡರಾತ್ರಿ ಹಾಗೂ ಬುಧವಾರ ಸಂಜೆ ಹಲವು ಪ್ರದೇಶಗಳಲ್ಲಿ ಭಾರೀ ಮಳೆಯಾಗಿದೆ. ಮಳೆಯೊಂದಿಗೆ ಹಲವು ಕಡೆ ಮರಗಳು ಉರುಳಿ ಬಿದ್ದ ಪರಿಣಾಮ ವಾಹನಗಳಿಗೆ ಹಾನಿಯಾಗಿದ್ದು, ಸಾರ್ವಜನಿಕರು ತೊಂದರೆ ಅನುಭವಿಸಿದ್ದಾರೆ.
ಯಶವಂತಪುರದ ಎಚ್‌ಎಂಟಿ ಲೇಔಟ್ ಬಳಿಯ ಗಂಗಮ್ಮ ಸರ್ಕಲ್‌ನಲ್ಲಿ ಬಿಎಂಟಿಸಿ ಬಸ್ (BMTC Bus) ಮೇಲೆ ಬೃಹತ್ ಮರವೊಂದು ಉರುಳಿ ಬಿದ್ದಿದೆ. ಮರ ಬಿದ್ದ ರಭಸಕ್ಕೆ ಬಸ್ ಜಖಂಗೊಂಡಿದ್ದರೂ, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಬಸವನಗುಡಿ ಕೆ.ಆರ್. ಮಾರುಕಟ್ಟೆ ಮಾರ್ಗದ ಸಮೀಪವೂ ಮರ ಬಿದ್ದ ಪರಿಣಾಮ ಟ್ರಕ್ (Truck) ನಜ್ಜುಗುಜ್ಜಾಗಿದೆ.
ಅಡುಗೋಡಿ ವ್ಯಾಪ್ತಿಯಲ್ಲಿ ಕಾರಿನ ಮೇಲೆ ಮರ ಬಿದ್ದಿದೆ. ಕೆಂಪೇಗೌಡ ನಗರದ ಗುಟ್ಟಹಳ್ಳಿ ಪ್ರದೇಶದಲ್ಲಿ ಬೈಕ್ (Bike) ಮೇಲೂ ಮರ ಉರುಳಿ ಬಿದ್ದು, ವಾಹನಕ್ಕೆ ಹಾನಿಯಾಗಿದೆ.
ಮಳೆ ಅಬ್ಬರಕ್ಕೆ ಥಣಿಸಂದ್ರ ಮತ್ತು ಸಂಪಿಗೆಹಳ್ಳಿ ರಸ್ತೆಗಳಲ್ಲೂ ಮರಗಳು ರಸ್ತೆಗೆ ಬಿದ್ದಿವೆ. ಮುನೇನಕೊಳಲು ಗಾಂಧೀನಗರದಲ್ಲಿ ಕಟ್ಟಡದ ಮೇಲೆ ದೊಡ್ಡ ಮರವೊಂದು ಬಿದ್ದಿರುವ ಬಗ್ಗೆ ವರದಿಯಾಗಿದೆ. ಹೆಗಡೆನಗರದಲ್ಲೂ ರಸ್ತೆ ಮೇಲೆ ಮರ ಉರುಳಿಬಿದ್ದಿದೆ.
ಸಿಂಗಸಂದ್ರದಲ್ಲಿ ಬೃಹತ್ ಮರ ವಿದ್ಯುತ್ ತಂತಿಗಳ ಮೇಲೆ ಬಿದ್ದಿದ್ದರಿಂದ ವಿದ್ಯುತ್ ಪೂರೈಕೆಗೆ ಅಡಚಣೆ ಉಂಟಾಯಿತು. ಮಹದೇವಪುರ ಸೇರಿದಂತೆ ಹಲವು ಪ್ರದೇಶಗಳಲ್ಲಿ ವಿದ್ಯುತ್ ತಂತಿಗಳ ಮೇಲೆ ಮರಗಳು ಬಿದ್ದಿರುವ ಘಟನೆಗಳು ವರದಿಯಾಗಿವೆ. ಕಲ್ಯಾಣನಗರ ಹಾಗೂ ಸೆಂಟ್ರಲ್ ಜೈಲು ಸಮೀಪದ ಶ್ರೀಸಾಯಿ ಲೇಔಟ್‌ನಲ್ಲೂ ದೊಡ್ಡ ಮರಗಳು ಉರುಳಿ ಬಿದ್ದಿವೆ.
ಬುಧವಾರ ಸಂಜೆ ಬಸವನಗುಡಿ, ಯಲಹಂಕ, ಜಕ್ಕೂರು, ದಾಸರಹಳ್ಳಿ, ಪೀಣ್ಯ ಕೈಗಾರಿಕಾ ಪ್ರದೇಶ, ಕೊಡಿಗೆಹಳ್ಳಿ, ಕಾಡುಗೊಂಡನಹಳ್ಳಿ, ಕುಶಾಲ್‌ನಗರ, ವರ್ತೂರು, ಈಜೀಪುರ, ಮಹದೇವಪುರ, ಕಾವಲ್ ಬೈರಸಂದ್ರ, ದೊಡ್ಡಬಿದರಕಲ್ಲು, ಶೆಟ್ಟಿಹಳ್ಳಿ, ಕೋರಮಂಗಲ, ಆಡುಗೋಡಿ ಹಾಗೂ ಸಿಂಗಸಂದ್ರ ಸೇರಿದಂತೆ ಹಲವು ಭಾಗಗಳಲ್ಲಿ ಮಳೆ ಸುರಿದಿದೆ.
ಮಳೆಯ ಕಾರಣ ಕಚೇರಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದವರಿಗೆ ಸಂಚಾರ ದಟ್ಟಣೆ ಹಾಗೂ ರಸ್ತೆಗಳಲ್ಲಿ ಉಂಟಾದ ಅಡಚಣೆಗಳು ಕಿರಿಕಿರಿ ತಂದವು. ಕೆಲವು ಕಡೆ ಮರಗಳು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದರಿಂದ ವಾಹನಗಳ ಸಂಚಾರಕ್ಕೂ ತೊಂದರೆಯಾಯಿತು.
ಇದರ ನಡುವೆ ಮಂಗಳವಾರ ತಡರಾತ್ರಿ ಸುರಿದ ಭಾರೀ ಮಳೆಯಿಂದ ಸದಾಶಿವನಗರದ ಲೋ ಲೆವೆಲ್ ಪಾರ್ಕ್ ಸಂಪೂರ್ಣ ಜಲಾವೃತವಾಗಿದೆ. ಅರಮನೆ ನಗರದ ವಾರ್ಡ್‌ನಲ್ಲಿರುವ ಪಾರ್ಕ್‌ನಲ್ಲಿ ನೀರು ತುಂಬಿಕೊಂಡ ಪರಿಣಾಮ ಮಕ್ಕಳ ಆಟದ ಸಾಮಗ್ರಿಗಳು ಸೇರಿದಂತೆ ಹಲವು ವಸ್ತುಗಳು ನೀರಿನಲ್ಲಿ ತೇಲುತ್ತಿದ್ದ ದೃಶ್ಯ ಕಂಡುಬಂದಿದೆ.
ಕರ್ನಾಟಕ ರಾಜ್ಯದ ಮೂಲೆಮೂಲೆಗಳ ಕನ್ನಡ ಸುದ್ದಿಗಳ ಜೊತೆಗೆ ದಿನದ ಪ್ರಮುಖ ಬೆಳವಣಿಗೆಗಳನ್ನು Kannada News Today ಮೂಲಕ ತಿಳಿಯಿರಿ.



