ಬೆಂಗಳೂರು ಟ್ರಾಫಿಕ್ಗೆ ದೇಶದಲ್ಲೇ ನಂಬರ್ 1 ಪಟ್ಟ! 10 ಕಿಮೀಗೆ 35 ನಿಮಿಷ
ಬೆಂಗಳೂರು ಟ್ರಾಫಿಕ್ ಸಮಸ್ಯೆ ಮತ್ತೆ ಚರ್ಚೆಗೆ ಬಂದಿದೆ; 10 ಕಿಲೋಮೀಟರ್ ದೂರ ಕ್ರಮಿಸಲು ಸರಾಸರಿ 35 ನಿಮಿಷ ಬೇಕಾಗುತ್ತಿದ್ದು, ವಾಹನಗಳ ಹೆಚ್ಚಳದಿಂದ ಪರಿಸ್ಥಿತಿ ಮತ್ತಷ್ಟು ಕಠಿಣವಾಗುತ್ತಿದೆ.
ಬೆಂಗಳೂರು ಟ್ರಾಫಿಕ್ಗೆ ಕಡಿವಾಣ ಯಾವಾಗ?
ಬೆಂಗಳೂರು ಅಂದಾಕ್ಷಣ ಐಟಿ, ಸ್ಟಾರ್ಟ್ಅಪ್, ಉದ್ಯೋಗ ಅಂತ ನೆನಪಾಗುತ್ತೆ. ಆದರೆ ಬೆಂಗಳೂರಿಗರಿಗೆ ಮಾತ್ರ ಇನ್ನೊಂದು ವಿಚಾರ ಪ್ರತಿದಿನ ನೆನಪಾಗುತ್ತಲೇ ಇರುತ್ತೆ. ಅದೇ ಟ್ರಾಫಿಕ್! ಮನೆಯಿಂದ ಹೊರಟ ಮೇಲೆ ಗಮ್ಯಸ್ಥಾನ ತಲುಪೋಕೆ ಎಷ್ಟು ಸಮಯ ಬೇಕು ಅನ್ನೋದಕ್ಕಿಂತ, ಟ್ರಾಫಿಕ್ನಲ್ಲಿ ಎಷ್ಟು ಹೊತ್ತು ಸಿಲುಕಬೇಕು ಅನ್ನೋದೇ ದೊಡ್ಡ ಪ್ರಶ್ನೆಯಾಗಿದೆ.
ಇದೀಗ ಈ ಸಮಸ್ಯೆಗೆ ಸಂಬಂಧಿಸಿದ ಮತ್ತೊಂದು ಅಂಕಿ-ಅಂಶ ಹೊರಬಂದಿದ್ದು, ಬೆಂಗಳೂರಿನ ವಾಹನ ಸವಾರರಿಗೆ ಅಚ್ಚರಿ ಮೂಡಿಸಿದೆ. 2025ರ ಟ್ರಾಫಿಕ್ ಇಂಡೆಕ್ಸ್ ವರದಿ ಪ್ರಕಾರ, ದೇಶದ ಪ್ರಮುಖ ನಗರಗಳ ಪೈಕಿ ಬೆಂಗಳೂರು ಅತಿ ಹೆಚ್ಚು ಸಂಚಾರ ದಟ್ಟಣೆ ಹೊಂದಿರುವ ನಗರವಾಗಿ ಗುರುತಿಸಿಕೊಂಡಿದೆ. ಅಷ್ಟೇ ಅಲ್ಲ, ವಿಶ್ವದ ಟ್ರಾಫಿಕ್ ದಟ್ಟಣೆ ಹೊಂದಿರುವ ನಗರಗಳ ಪಟ್ಟಿಯಲ್ಲೂ ಬೆಂಗಳೂರು ಎರಡನೇ ಸ್ಥಾನದಲ್ಲಿದೆ.
ಅಂದಹಾಗೆ, ಬೆಂಗಳೂರಿನಲ್ಲಿ 10 ಕಿಲೋಮೀಟರ್ ದೂರ ಹೋಗಬೇಕು ಅಂದ್ರೆ ಸರಾಸರಿ 35.18 ನಿಮಿಷ ಬೇಕಾಗುತ್ತದೆ. ದೇಶದ ಪಟ್ಟಿಯಲ್ಲಿ ನಂತರದ ಸ್ಥಾನದಲ್ಲಿರುವ ಕೊಲ್ಕತ್ತಾದಲ್ಲಿ ಇದೇ ದೂರ ಕ್ರಮಿಸಲು ಸುಮಾರು 33.20 ನಿಮಿಷ ಬೇಕಾಗುತ್ತದೆ. ಪುಣೆಯಲ್ಲೂ ಸಂಚಾರದ ಒತ್ತಡ ಹೆಚ್ಚಿದ್ದು, 10 ಕಿಲೋಮೀಟರ್ ಪ್ರಯಾಣಕ್ಕೆ ಸುಮಾರು 33.20 ನಿಮಿಷ ಸಮಯ ಬೇಕಾಗುತ್ತದೆ ಎಂದು ವರದಿ ತಿಳಿಸಿದೆ.
ಈ ಅಂಕಿ-ಅಂಶಗಳನ್ನು ನೋಡಿದ್ರೆ ಬೆಂಗಳೂರಿನ ರಸ್ತೆಗಳ ಮೇಲೆ ವಾಹನಗಳ ಒತ್ತಡ ಎಷ್ಟಿದೆ ಅನ್ನೋದು ಅರ್ಥವಾಗುತ್ತೆ. ನ್ಯಾವಿಗೇಷನ್ ಟೆಕ್ನಾಲಜಿ ಕಂಪನಿಯಾದ ಟಾಮ್ಟಾಮ್ (TomTom) ಪ್ರತಿ ವರ್ಷ ವಿವಿಧ ನಗರಗಳ ಸಂಚಾರ ಪರಿಸ್ಥಿತಿಯನ್ನು ಅಧ್ಯಯನ ಮಾಡಿ ಟ್ರಾಫಿಕ್ ಇಂಡೆಕ್ಸ್ ಬಿಡುಗಡೆ ಮಾಡುತ್ತದೆ.
ಬೆಂಗಳೂರಿನ ಪರಿಸ್ಥಿತಿ ಇಷ್ಟೊಂದು ಕಠಿಣವಾಗಲು ಪ್ರಮುಖ ಕಾರಣಗಳಲ್ಲಿ ವಾಹನಗಳ ನಿರಂತರ ಹೆಚ್ಚಳವೂ ಒಂದು. ಪ್ರತಿದಿನ ನಗರದಲ್ಲಿ ಸಾವಿರಾರು ಹೊಸ ವಾಹನಗಳು ರಸ್ತೆಗೆ ಇಳಿಯುತ್ತಿವೆ ಎನ್ನಲಾಗುತ್ತಿದ್ದು, ಈಗಾಗಲೇ ಬೆಂಗಳೂರಿನಲ್ಲಿ ವಾಹನಗಳ ಸಂಖ್ಯೆ ಕೋಟಿಗೂ ಅಧಿಕವಾಗಿದೆ. ಹೀಗಾಗಿ ರಸ್ತೆ ವಿಸ್ತರಣೆ, ಸಾರ್ವಜನಿಕ ಸಾರಿಗೆ ಮತ್ತು ಸಂಚಾರ ನಿರ್ವಹಣೆ ಮೇಲೆ ಇನ್ನಷ್ಟು ಒತ್ತಡ ಬೀಳುತ್ತಿದೆ.
ಇದನ್ನು ಗಮನದಲ್ಲಿಟ್ಟುಕೊಂಡು ನಗರದಲ್ಲಿ ಅನಧಿಕೃತವಾಗಿ ರಸ್ತೆ ಮತ್ತು ಫುಟ್ಪಾತ್ ಆಕ್ರಮಿಸಿರುವ ಜಾಗಗಳನ್ನು ತೆರವುಗೊಳಿಸುವುದು ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ರಸ್ತೆಯಲ್ಲಿ ಬಹುಕಾಲದಿಂದ ನಿಂತಿರುವ ಅನಾಥ ವಾಹನಗಳ ವಿರುದ್ಧವೂ ಕ್ರಮಕ್ಕೆ ಮುಂದಾಗಿದ್ದು, ನೋಟಿಸ್ ನೀಡಿದ ಬಳಿಕ ತೆರವು ಮಾಡದ ವಾಹನಗಳನ್ನು ವಶಕ್ಕೆ ಪಡೆಯುವಂತಹ ಕ್ರಮಗಳು ನಡೆಯುತ್ತಿವೆ.
ಆದ್ರೆ ಬೆಂಗಳೂರಿಗರ ಪ್ರಶ್ನೆ ಮಾತ್ರ ಒಂದೇ — ಇಷ್ಟೆಲ್ಲಾ ಕ್ರಮಗಳ ನಡುವೆಯೂ ಟ್ರಾಫಿಕ್ ಯಾವಾಗ ಕಡಿಮೆಯಾಗುತ್ತೆ? ಪ್ರತಿದಿನ ಕಚೇರಿಗೆ, ಶಾಲೆಗೆ, ಆಸ್ಪತ್ರೆಗೆ ಅಥವಾ ಬೇರೆ ಕೆಲಸಕ್ಕೆ ಹೋಗುವ ಜನರು ಗಂಟೆಗಟ್ಟಲೆ ರಸ್ತೆಯಲ್ಲೇ ಕಳೆಯಬೇಕಾದ ಪರಿಸ್ಥಿತಿ ಬದಲಾಗಬೇಕಿದೆ. ವಾಹನಗಳ ಸಂಖ್ಯೆ ಇದೇ ವೇಗದಲ್ಲಿ ಹೆಚ್ಚುತ್ತಾ ಹೋದರೆ ಮುಂದಿನ ದಿನಗಳಲ್ಲಿ ಸಮಸ್ಯೆ ಇನ್ನಷ್ಟು ಗಂಭೀರವಾಗುವ ಆತಂಕವೂ ಇದೆ.
ಒಟ್ಟಿನಲ್ಲಿ, ಬೆಂಗಳೂರು ದೇಶದ ಟೆಕ್ ಹಬ್ ಆಗಿ ಬೆಳೆದಿರುವ ವೇಗಕ್ಕೆ ತಕ್ಕಂತೆ ಸಾರಿಗೆ ವ್ಯವಸ್ಥೆಯೂ ಬೆಳೆಯಬೇಕಿದೆ. ಇಲ್ಲವಾದರೆ ವಿಶ್ವದ ಟ್ರಾಫಿಕ್ ದಟ್ಟಣೆ ಪಟ್ಟಿಯಲ್ಲಿ ಈಗಾಗಲೇ ಎರಡನೇ ಸ್ಥಾನದಲ್ಲಿರುವ ನಗರ ಇನ್ನಷ್ಟು ಮೇಲಕ್ಕೆ ಹೋಗುವ ಪರಿಸ್ಥಿತಿ ಎದುರಾಗಬಹುದು.



