Bengaluru Road Rage: ಬೆಂಗಳೂರು ರೋಡ್ ರೇಜ್ ಪ್ರಕರಣ; ಚಾಕು ತೋರಿಸಿ ಬೆದರಿಕೆ ಹಾಕಿದ್ದ ಆರೋಪಿ ಸೆರೆ
Bengaluru Road Rage: ಬೆಂಗಳೂರಿನಲ್ಲಿ ನಡೆದ ರೋಡ್ ರೇಜ್ ಪ್ರಕರಣದ ಡ್ಯಾಶ್ಕ್ಯಾಮ್ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಪೊಲೀಸರು ತ್ವರಿತ ಕಾರ್ಯಾಚರಣೆ ನಡೆಸಿ ಸ್ಕೂಟರ್ ಸವಾರನನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.

- ಬೆಂಗಳೂರಿನಲ್ಲಿ ಮತ್ತೆ ರೋಡ್ ರೇಜ್ ಪ್ರಕರಣ ಬೆಳಕಿಗೆ
- ಡ್ಯಾಶ್ಕ್ಯಾಮ್ ವಿಡಿಯೋ ಮೂಲಕ ರೋಡ್ ರೇಜ್ ಆರೋಪಿ ಪತ್ತೆ
- ಆಯುಧ ಕಾಯ್ದೆಯಡಿ ಬೆಂಗಳೂರು ಪೊಲೀಸರು ಪ್ರಕರಣ ದಾಖಲು
ಬೆಂಗಳೂರು (Bengaluru): ನಗರದಲ್ಲಿ ಹೆಚ್ಚುತ್ತಿರುವ ರೋಡ್ ರೇಜ್ ಪ್ರಕರಣಗಳು ಜನರಲ್ಲಿ ಆತಂಕ ಮೂಡಿಸುತ್ತಿರುವ ನಡುವೆಯೇ, ಮತ್ತೊಂದು ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮಧ್ಯ ರಸ್ತೆಯಲ್ಲೇ ಕಾರನ್ನು ತಡೆದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಚಾಕು ತೋರಿಸಿ ಬೆದರಿಕೆ ಹಾಕಿದ (Bengaluru Road Rage) ಸ್ಕೂಟರ್ ಸವಾರನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಮಾಲ್ ಎದುರು ನಡೆದ ಘಟನೆ
ಶುಕ್ರವಾರ ಸಂಜೆ ಸುಮಾರು 6 ಗಂಟೆ ವೇಳೆಗೆ, ವೈಟ್ಫೀಲ್ಡ್ ಸಮೀಪದ ಪ್ರೆಸ್ಟೀಜ್ ಶಾಂತಿನಿಕೇತನ ಮಾಲ್ ಎದುರು ಈ ಘಟನೆ ನಡೆದಿದೆ. ಸ್ಕೂಟರ್ನಲ್ಲಿ ಬಂದ ವ್ಯಕ್ತಿಯೊಬ್ಬರು ಕಾರಿನ ಚಾಲಕನನ್ನು ಮಧ್ಯರಸ್ತೆಯಲ್ಲೇ ನಿಲ್ಲಿಸಿ, ಅಸಭ್ಯ ಪದಗಳಿಂದ ಬೈದು ಆತಂಕ ಸೃಷ್ಟಿಸಿದ್ದಾನೆ ಎನ್ನಲಾಗಿದೆ. ಕ್ಷಣಾರ್ಧದಲ್ಲಿ ಚಾಕುವನ್ನು ಹೊರತೆಗೆದು ಕಾರಿನೊಳಗಿದ್ದವರಿಗೆ ಬೆದರಿಕೆ ಹಾಕಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಸಂತ್ರಸ್ತರು ದೂರಿದ್ದಾರೆ.
ಡ್ಯಾಶ್ಕ್ಯಾಮ್ ದೃಶ್ಯವೇ ಸುಳಿವು
ಘಟನೆಯ ವೇಳೆ ಕಾರಿನ ಡ್ಯಾಶ್ಬೋರ್ಡ್ ಕ್ಯಾಮೆರಾದಲ್ಲಿ (Car Dashcam Video) ಸಂಪೂರ್ಣ ದೃಶ್ಯಾವಳಿ ಸೆರೆಯಾಗಿತ್ತು. ಇದನ್ನು ಸಂತ್ರಸ್ತರು ಸಾಮಾಜಿಕ ಜಾಲತಾಣ Xನಲ್ಲಿ ಹಂಚಿಕೊಂಡು ಬೆಂಗಳೂರು ಪೊಲೀಸ್ ಇಲಾಖೆಯನ್ನು ಟ್ಯಾಗ್ ಮಾಡಿದ್ದರು. ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ತಕ್ಷಣ ಗಮನಹರಿಸಿ ತನಿಖೆ ಆರಂಭಿಸಿದರು.
ಎಕ್ಸ್ ಪೋಸ್ಟ್ನಿಂದ ಆರೋಪಿಯ ಗುರುತು
ವಿಡಿಯೋದಲ್ಲಿದ್ದ ಸ್ಕೂಟರ್ನ ನೋಂದಣಿ ಸಂಖ್ಯೆ ಆಧರಿಸಿ ಪೊಲೀಸರು ಆರೋಪಿಯನ್ನು ಪತ್ತೆಹಚ್ಚಿದ್ದಾರೆ. ಬಂಧಿತನನ್ನು ಅರ್ಬಾಜ್ ಖಾನ್ ಎಂದು ಗುರುತಿಸಲಾಗಿದ್ದು, ಈ ಸಂಬಂಧ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಾರ್ವಜನಿಕ ರಸ್ತೆಯಲ್ಲಿ ವಾಹನವನ್ನು ಅಕ್ರಮವಾಗಿ ತಡೆದು, ಮಾರಕಾಸ್ತ್ರ ತೋರಿಸಿ ಬೆದರಿಕೆ ಹಾಕಿದ ಆರೋಪದಡಿ ಆಯುಧ ಕಾಯ್ದೆಯ ಅಡಿಯಲ್ಲಿ ತನಿಖೆ ಮುಂದುವರಿದಿದೆ.
ನಗರದಲ್ಲಿ ಶಾಂತಿ ಮತ್ತು ಸಂಚಾರ ಸುರಕ್ಷತೆ ಕಾಪಾಡುವ ದೃಷ್ಟಿಯಿಂದ ಇಂತಹ ಪ್ರಕರಣಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.



