ಬೆಂಗಳೂರು ನಗರದಲ್ಲಿ ಟೋಯಿಂಗ್ ಮತ್ತೆ ಶುರು! ನಿಯಮ ಮೀರಿದರೆ ಭಾರೀ ದಂಡ
ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಅಕ್ರಮ ಪಾರ್ಕಿಂಗ್ ವಿರುದ್ಧ ಸಂಚಾರ ಪೊಲೀಸರು ಮತ್ತೆ ಟೋಯಿಂಗ್ ಕಾರ್ಯಾಚರಣೆ ಆರಂಭಿಸಿದ್ದು, ನಿಯಮ ಮೀರಿ ವಾಹನ ನಿಲ್ಲಿಸಿದರೆ ಭಾರಿ ದಂಡ ಕಟ್ಟಬೇಕಾಗಿದೆ.

ಬೆಂಗಳೂರು (Bengaluru) ನಗರದಲ್ಲಿ ಎಲ್ಲೆಂದರಲ್ಲಿ ವಾಹನ ನಿಲ್ಲಿಸುವವರಿಗೆ ಸಂಚಾರ ಪೊಲೀಸರು (Traffic Police) ಮತ್ತೆ ಬಿಸಿ ಮುಟ್ಟಿಸಿದ್ದಾರೆ. ಅಕ್ರಮ ಪಾರ್ಕಿಂಗ್ (Illegal Parking) ವಿರುದ್ಧ ಟೋಯಿಂಗ್ ಕಾರ್ಯಾಚರಣೆ ಪುನರಾರಂಭವಾಗಿದ್ದು, ನಿಯಮ ಉಲ್ಲಂಘಿಸುವ ವಾಹನ ಸವಾರರಿಗೆ ದಂಡ ವಿಧಿಸಲಾಗುತ್ತಿದೆ.
ಕಳೆದ ಒಂದು ವಾರದಿಂದ ನಗರದ ಹಲವು ಭಾಗಗಳಲ್ಲಿ ಈ ಕಾರ್ಯಾಚರಣೆ ಚುರುಕುಗೊಂಡಿದೆ. ಅದರಲ್ಲೂ ಶಾಂತಿನಗರ ಸುತ್ತಮುತ್ತ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದಾರೆ. ಸೇಂಟ್ ಜೋಸೆಫ್ ಕಾಲೇಜು ಹಾಗೂ ದಿವ್ಯಶ್ರೀ ಚೇಂಬರ್ಸ್ ಬಳಿ ನೋ ಪಾರ್ಕಿಂಗ್ (No Parking) ಸೂಚನಾ ಫಲಕಗಳನ್ನು ಅಳವಡಿಸಲಾಗಿದ್ದು, ನಿಯಮ ಮೀರಿ ನಿಲ್ಲಿಸುವ ವಾಹನಗಳನ್ನು ಸ್ಥಳದಿಂದಲೇ ತೆರವುಗೊಳಿಸಲಾಗುತ್ತಿದೆ.
ವಾಹನ ಸವಾರರು ಕೆಲವೇ ನಿಮಿಷಗಳಿಗಾಗಿ ರಸ್ತೆಬದಿಯಲ್ಲಿ ವಾಹನ ನಿಲ್ಲಿಸಿದರೂ ಕ್ರಮದಿಂದ ತಪ್ಪಿಸಿಕೊಳ್ಳುವುದು ಕಷ್ಟವಾಗಲಿದೆ. ಟೋಯಿಂಗ್ (Towing) ಬಳಿಕ ದ್ವಿಚಕ್ರ ವಾಹನಗಳಿಗೆ ₹1,150 ಹಾಗೂ ನಾಲ್ಕು ಚಕ್ರದ ವಾಹನಗಳಿಗೆ ₹1,500 ದಂಡ ವಿಧಿಸಲಾಗುತ್ತಿದೆ.
ಶಾಂತಿನಗರ ವ್ಯಾಪ್ತಿಯಲ್ಲಿ ಅಕ್ರಮವಾಗಿ ವಾಹನ ನಿಲ್ಲಿಸುವ ಕುರಿತು ಪೊಲೀಸರಿಗೆ ಸಾಕಷ್ಟು ದೂರುಗಳು ಬಂದಿದ್ದವು. ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿರುವುದು ಹಾಗೂ ಪಾರ್ಕಿಂಗ್ ನಿಯಮಗಳನ್ನು ಉಲ್ಲಂಘಿಸಲಾಗುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ ಎನ್ನಲಾಗಿದೆ.
ನಗರದ ಪ್ರಮುಖ ರಸ್ತೆಗಳಲ್ಲಿ ವಾಹನಗಳ ದಟ್ಟಣೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಿಯಮಬಾಹಿರ ಪಾರ್ಕಿಂಗ್ ಸಮಸ್ಯೆ ಕೂಡ ಸವಾರರಿಗೆ ತಲೆನೋವಾಗಿ ಪರಿಣಮಿಸಿದೆ. ಹೀಗಾಗಿ, ಇನ್ಮುಂದೆ ವಾಹನ ನಿಲ್ಲಿಸುವ ಮುನ್ನ ನೋ ಪಾರ್ಕಿಂಗ್ ಸೂಚನೆಗಳಿರುವುದನ್ನು ಪರಿಶೀಲಿಸುವುದು ಉತ್ತಮ. ಇಲ್ಲವಾದರೆ ವಾಹನ ಟೋಯಿಂಗ್ ಆಗುವುದರ ಜೊತೆಗೆ ಜೇಬಿಗೂ ದೊಡ್ಡ ಹೊಡೆತ ಬೀಳುವ ಸಾಧ್ಯತೆ ಇದೆ.



