ಬೆಂಗಳೂರು: ವರ್ತೂರು ಜಾತ್ರೆ ಹಿನ್ನೆಲೆ 3 ದಿನ ಸಂಚಾರ ನಿರ್ಬಂಧ; ವಾಹನ ಸವಾರರಿಗೆ ಸೂಚನೆ
Bengaluru Traffic Advisory: ವರ್ತೂರು ಶ್ರೀ ಚನ್ನರಾಯಸ್ವಾಮಿ ಜಾತ್ರೆ ಹಿನ್ನೆಲೆ ಜನವರಿ 25ರಿಂದ 27ರವರೆಗೆ ಮೂರು ದಿನ ಸಂಚಾರ ನಿಯಂತ್ರಣ ಜಾರಿಯಾಗಿದ್ದು, ವೈಟ್ಫೀಲ್ಡ್ ಗುಂಜೂರು ಮತ್ತು ಸುತ್ತಮುತ್ತಲ ರಸ್ತೆಗಳಿಗೆ ಪರ್ಯಾಯ ಮಾರ್ಗ ಬಳಸಿ ಸಹಕರಿಸಬೇಕು ಎಂದು ಬೆಂಗಳೂರು ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ

- ವರ್ತೂರು ಜಾತ್ರೆ ಹಿನ್ನೆಲೆ ಬೆಂಗಳೂರು ಸಂಚಾರದಲ್ಲಿ ಬದಲಾವಣೆ
- ವೈಟ್ಫೀಲ್ಡ್–ಗುಂಜೂರು ಮಾರ್ಗದಲ್ಲಿ ಸಂಚಾರ ನಿರ್ಬಂಧ
- ಪರ್ಯಾಯ ಮಾರ್ಗ ಬಳಸುವಂತೆ ಸಂಚಾರ ಪೊಲೀಸರ ಮನವಿ
ಬೆಂಗಳೂರು (Bengaluru): ವರ್ತೂರಿನಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಶ್ರೀ ಚನ್ನರಾಯಸ್ವಾಮಿ ಜಾತ್ರಾ ರಥೋತ್ಸವ (Varthur Jatre), ದೀಪೋತ್ಸವ ಮತ್ತು ಪಲ್ಲಕ್ಕಿ ಕರಗ ಮಹೋತ್ಸವದ ಹಿನ್ನೆಲೆಯಲ್ಲಿ ಸಂಚಾರ ನಿಯಂತ್ರಣ (Bengaluru Traffic Advisory) ಜಾರಿಗೊಳಿಸಲಾಗಿದೆ. ಜನವರಿ 25ರಿಂದ 27ರವರೆಗೆ ಜಾತ್ರಾ ಸ್ಥಳದ ಸುತ್ತಮುತ್ತ ವಾಹನಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.
ಪೊಲೀಸರ ಸೂಚನೆ
ವೈಟ್ಫೀಲ್ಡ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಬದಲಾವಣೆಗಳನ್ನು ಮಾಡಲಾಗಿದ್ದು, ಸಾರ್ವಜನಿಕರ ಸುರಕ್ಷತೆ ಹಾಗೂ ಸುಗಮ ಸಂಚಾರಕ್ಕಾಗಿ ವಾಹನ ಸವಾರರು ಸಹಕರಿಸಬೇಕು ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರು ನಗರ ಸಂಚಾರ ಪೂರ್ವ ವಿಭಾಗದ ಉಪ ಪೊಲೀಸ್ ಆಯುಕ್ತ ಸಾಹಿಲ್ ಬಾಗ್ಲಾ ಅವರು ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಪರ್ಯಾಯ ಮಾರ್ಗಗಳ ವಿವರ
ವೈಟ್ಫೀಲ್ಡ್ನಿಂದ ಗುಂಜೂರು ಕಡೆಗೆ ತೆರಳುವ ಲಘು ವಾಹನಗಳು ಇಮ್ಮಡಿಹಳ್ಳಿ, ವಾಲೇಪುರ–ಸೂರಹುಣಸೆ ರಸ್ತೆ ಮೂಲಕ ಮಧುರನಗರ ದಾಟಿ ಹಲಸಹಳ್ಳಿ–ಗುಂಜೂರು ಕಡೆಗೆ ಸಂಚರಿಸಬಹುದು.
ಗುಂಜೂರಿನಿಂದ ವೈಟ್ಫೀಲ್ಡ್ ಕಡೆಗೆ ಬರುವವರು ಶ್ರೀರಾಮ ದೇವಾಲಯದ ಬಳಿ ಬಲ ತಿರುವು ಪಡೆದು ಹಲಸಹಳ್ಳಿ ರಸ್ತೆ, ಮಧುರನಗರ, ಸೂರಹುಣಸೆ ಮತ್ತು ವಾಲೇಪುರ ಮಾರ್ಗವಾಗಿ ಸಾಗಬಹುದು.
ಇದೇ ವೇಳೆ ಗುಂಜೂರಿನಿಂದ ಕುಂದಲಹಳ್ಳಿ ಹಾಗೂ ಮಾರತ್ಹಳ್ಳಿ ಕಡೆಗೆ ಹೋಗುವ ವಾಹನಗಳು ಗುಂಜೂರು ಕೆಎಫ್ಸಿ ರಸ್ತೆ, ಪಣತ್ತೂರು ರೈಲ್ವೆ ಬ್ರಿಜ್ ಮತ್ತು ವಿಬ್ ಗಯಾರ್ ರಸ್ತೆ ಬಳಸುವಂತೆ ಸಂಚಾರ ಪೊಲೀಸರು ಕೋರಿದ್ದಾರೆ.



