ಬೆಂಗಳೂರು ಹೊಸ ಟ್ರಾಫಿಕ್ ರೂಲ್ಸ್: 5 ಪ್ರಮುಖ ಫ್ಲೈಓವರ್‌ಗಳಲ್ಲಿ ವಾಹನಗಳಿಗೆ ಬ್ರೇಕ್!
ಅಪಘಾತ ನಿಯಂತ್ರಣ ಮತ್ತು ಸಂಚಾರ ಸುರಕ್ಷತೆಗಾಗಿ ಬೆಂಗಳೂರಿನ ಐದು ಪ್ರಮುಖ ಫ್ಲೈಓವರ್‌ಗಳಲ್ಲಿ ಕೆಲವು ವಾಹನಗಳ ಸಂಚಾರಕ್ಕೆ ಸಮಯದ ಆಧಾರದ ಮೇಲೆ ಹೊಸ ನಿರ್ಬಂಧಗಳನ್ನು ಜಾರಿಗೊಳಿಸಲು ಸಂಚಾರ ಪೊಲೀಸರು ಮುಂದಾಗಿದ್ದಾರೆ.

ಬೆಂಗಳೂರಿನಲ್ಲಿ ಹೊಸ ಟ್ರಾಫಿಕ್ ನಿಯಮ
ಬೆಂಗಳೂರು (Bengaluru), ಆಗಸ್ಟ್ 31: ನಗರದಲ್ಲಿ ವಾಹನಗಳ ದಟ್ಟಣೆ ಹೆಚ್ಚುತ್ತಿರುವ ಬೆನ್ನಲ್ಲೇ ಅಪಘಾತ ನಿಯಂತ್ರಣ ಮತ್ತು ಸಂಚಾರ ಸುರಕ್ಷತೆಗೆ (Traffic Safety) ಬೆಂಗಳೂರು ಸಂಚಾರ ಪೊಲೀಸರು ಹೊಸ ಕ್ರಮ (Traffic Rules) ಕೈಗೊಂಡಿದ್ದಾರೆ. ನಗರದ ಐದು ಪ್ರಮುಖ ಫ್ಲೈಓವರ್‌ಗಳಲ್ಲಿ ನಿರ್ದಿಷ್ಟ ವಾಹನಗಳ ಸಂಚಾರಕ್ಕೆ ಸಮಯ ಆಧಾರಿತ ನಿರ್ಬಂಧ ವಿಧಿಸಲಾಗಿದೆ.
ಈ ಹೊಸ ನಿಯಮಗಳು ಬಿಜಿಎಸ್ ಫ್ಲೈಓವರ್, ಪೀಣ್ಯ ಎಲಿವೇಟೆಡ್ ಕಾರಿಡಾರ್, ಎಲೆಕ್ಟ್ರಾನಿಕ್ ಸಿಟಿ ಎಲಿವೇಟೆಡ್ ಕಾರಿಡಾರ್, ಸಿಲ್ಕ್ ಬೋರ್ಡ್‌ನಿಂದ ರಾಗಿಗುಡ್ಡದವರೆಗಿನ ಡಬಲ್ ಡೆಕ್ಕರ್ ಫ್ಲೈಓವರ್ ಹಾಗೂ ಏರ್‌ಪೋರ್ಟ್ ಫ್ಲೈಓವರ್‌ಗೆ ಅನ್ವಯಿಸಲಿವೆ. ಕೆಲವು ಕಡೆ ನಿಯಮಗಳು ಸೆಪ್ಟೆಂಬರ್ 4ರಿಂದ ಜಾರಿಗೆ ಬರಲಿದ್ದು, ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್‌ನಲ್ಲಿ ಸೆಪ್ಟೆಂಬರ್ 11ರಿಂದ ಜಾರಿಯಾಗಲಿದೆ.
ವಾಹನ ಸವಾರರು ಪ್ರಮುಖವಾಗಿ ಗಮನಿಸಬೇಕಾದ ಅಂಶವೆಂದರೆ, ಎಲೆಕ್ಟ್ರಾನಿಕ್ ಸಿಟಿ ಮತ್ತು ಏರ್‌ಪೋರ್ಟ್ ಫ್ಲೈಓವರ್‌ಗಳಲ್ಲಿ ಬೈಕ್‌ಗಳ ಸಂಚಾರಕ್ಕೂ ನಿರ್ಬಂಧ ಹೇರಲಾಗಿದೆ. ಇನ್ನು ಇತರ ಫ್ಲೈಓವರ್‌ಗಳಲ್ಲಿ ಸರಕು ಸಾಗಣೆ ವಾಹನ, ಆಟೋ ಹಾಗೂ ತ್ರಿಚಕ್ರ ವಾಹನಗಳ ಸಂಚಾರಕ್ಕೆ ಪ್ರತ್ಯೇಕ ಸಮಯ ನಿಗದಿಪಡಿಸಲಾಗಿದೆ.
ಯಾವ ಫ್ಲೈಓವರ್‌ನಲ್ಲಿ ಯಾವ ವಾಹನಗಳಿಗೆ ನಿರ್ಬಂಧ?
ಬಿಜಿಎಸ್ ಫ್ಲೈಓವರ್: ಮೈಸೂರು ರಸ್ತೆಯ ಬಿಜಿಎಸ್ ಫ್ಲೈಓವರ್‌ನಲ್ಲಿ ಭಾರಿ ಸರಕು ಸಾಗಣೆ ವಾಹನಗಳಿಗೆ (Heavy Goods Vehicles) 24 ಗಂಟೆಯೂ ನಿರ್ಬಂಧ ಇರಲಿದೆ. ಉಳಿದ ಸರಕು ಸಾಗಣೆ ವಾಹನಗಳಿಗೆ ಬೆಳಗ್ಗೆ 7ರಿಂದ 11ರವರೆಗೆ ಹಾಗೂ ಸಂಜೆ 4ರಿಂದ ರಾತ್ರಿ 10ರವರೆಗೆ ಸಂಚಾರಕ್ಕೆ ಅವಕಾಶ ಇರುವುದಿಲ್ಲ.
ಪೀಣ್ಯ ಎಲಿವೇಟೆಡ್ ಕಾರಿಡಾರ್: ಪ್ರಯಾಣಿಕರ ಆಟೋ ಮತ್ತು ತ್ರಿಚಕ್ರ ಗೂಡ್ಸ್ ಆಟೋಗಳಿಗೆ ದಿನದ 24 ಗಂಟೆಯೂ ನಿರ್ಬಂಧವಿದೆ. ಭಾರಿ ಮತ್ತು ಮಧ್ಯಮ ಸರಕು ಸಾಗಣೆ ವಾಹನಗಳಿಗೆ ಬೆಳಗ್ಗೆ 7ರಿಂದ 11ರವರೆಗೆ ಹಾಗೂ ಸಂಜೆ 4ರಿಂದ ರಾತ್ರಿ 10ರವರೆಗೆ ಸಂಚಾರ ನಿರ್ಬಂಧಿಸಲಾಗಿದೆ.
ಎಲೆಕ್ಟ್ರಾನಿಕ್ ಸಿಟಿ ಎಲಿವೇಟೆಡ್ ಕಾರಿಡಾರ್: ಇಲ್ಲಿ ಬೆಳಗ್ಗೆ 6ರಿಂದ ರಾತ್ರಿ 10ರವರೆಗೆ ಸರಕು ಸಾಗಣೆ ವಾಹನಗಳ ಸಂಚಾರಕ್ಕೆ ಬ್ರೇಕ್ ಹಾಕಲಾಗಿದೆ. ಬೈಕ್, ಆಟೋರಿಕ್ಷಾ ಹಾಗೂ ತ್ರಿಚಕ್ರ ಗೂಡ್ಸ್ ಆಟೋಗಳಿಗೆ 24 ಗಂಟೆಯೂ ನಿರ್ಬಂಧ ಅನ್ವಯಿಸಲಿದೆ.
ಡಬಲ್ ಡೆಕ್ಕರ್ ಫ್ಲೈಓವರ್: ಸಿಲ್ಕ್ ಬೋರ್ಡ್‌ನಿಂದ ರಾಗಿಗುಡ್ಡದವರೆಗಿನ ಡಬಲ್ ಡೆಕ್ಕರ್ ಫ್ಲೈಓವರ್‌ನಲ್ಲಿ ಭಾರಿ ಸರಕು ಸಾಗಣೆ ವಾಹನಗಳಿಗೆ ದಿನದ 24 ಗಂಟೆಯೂ ಸಂಚಾರ ನಿರ್ಬಂಧಿಸಲಾಗಿದೆ.
ಏರ್‌ಪೋರ್ಟ್ ಫ್ಲೈಓವರ್: ವಿಮಾನ ನಿಲ್ದಾಣ ರಸ್ತೆಯ ಫ್ಲೈಓವರ್‌ನಲ್ಲಿ ಬೈಕ್ ಮತ್ತು ಆಟೋರಿಕ್ಷಾಗಳಿಗೆ 24 ಗಂಟೆಯೂ ಸಂಚಾರ ನಿರ್ಬಂಧವಿದೆ. ಅಲ್ಲದೆ, ಬೆಳಗ್ಗೆ 6ರಿಂದ ರಾತ್ರಿ 10ರವರೆಗೆ ಎಲ್ಲ ರೀತಿಯ ಸರಕು ಸಾಗಣೆ ವಾಹನಗಳ ಸಂಚಾರಕ್ಕೂ ಬ್ರೇಕ್ ಹಾಕಲಾಗಿದೆ.
ನಗರದ ಪ್ರಮುಖ ಮಾರ್ಗಗಳಲ್ಲಿ ವಾಹನ ಸಂಚಾರವನ್ನು ಸುರಕ್ಷಿತ ಹಾಗೂ ಸುಗಮಗೊಳಿಸುವ ಉದ್ದೇಶದಿಂದ ಈ ನಿಯಮಗಳನ್ನು ಜಾರಿಗೊಳಿಸಲಾಗುತ್ತಿದೆ. ಹೀಗಾಗಿ ಫ್ಲೈಓವರ್ ಬಳಸುವ ವಾಹನ ಸವಾರರು ತಮ್ಮ ವಾಹನಕ್ಕೆ ಅನ್ವಯಿಸುವ ನಿಯಮ ಹಾಗೂ ಸಮಯವನ್ನು ಗಮನಿಸಿಕೊಂಡು ಪರ್ಯಾಯ ಮಾರ್ಗ ಬಳಸುವುದು ಉತ್ತಮ.



