ಗಂಡನ ಬೈಗುಳಕ್ಕೆ ಬೆಂಗಳೂರು ಮಹಿಳೆ ಮನನೊಂದು ದುರಂತ ಅಂತ್ಯ

ಬೆಂಗಳೂರು ಗೃಹಿಣಿ ಕಾವ್ಯ ಜೀವನ ದುರಂತ ಅಂತ್ಯ ಕಂಡಿದೆ. ಮೂರು ದಿನ ಒಂದೇ ಸಾಂಬಾರು ವಿಚಾರಕ್ಕೆ ಪತಿಯೊಂದಿಗೆ ಜಗಳ ಉಂಟಾಗಿ ಮನನೊಂದು ವಿಷ ಸೇವಿಸಿದ ಘಟನೆ ಕುಟುಂಬವನ್ನು ಶೋಕಸಾಗರದಲ್ಲಿ ಮುಳುಗಿಸಿದೆ.

ಬೆಂಗಳೂರು (Bengaluru): ಕ್ಷುಲ್ಲಕ ಕಾರಣಕ್ಕೂ ಕೆಲವೊಮ್ಮೆ ಕುಟುಂಬಗಳಲ್ಲಿ ಉಂಟಾಗುವ ಜಗಳಗಳು ಎಂತಹ ಭೀಕರ ಪರಿಣಾಮಗಳಿಗೆ ದಾರಿ ಮಾಡಿಕೊಡುತ್ತವೆ ಎಂಬುದಕ್ಕೆ ಬೆಂಗಳೂರಿನಲ್ಲಿ ನಡೆದ ಈ ಘಟನೆ ದುಃಖಕರ ಉದಾಹರಣೆಯಾಗಿದೆ. ಅಡುಗೆ ಮಾಡಿದ ಸಾಂಬಾರು ವಿಚಾರವಾಗಿ ಉಂಟಾದ ಜಗಳವೊಂದು ಗೃಹಿಣಿಯೊಬ್ಬರ ಜೀವವನ್ನೇ ಕಸಿದುಕೊಂಡಿದೆ.

ಮೃತ ಮಹಿಳೆಯನ್ನು ಕಾವ್ಯ (27) ಎಂದು ಗುರುತಿಸಲಾಗಿದೆ. ಐದು ವರ್ಷಗಳ ಹಿಂದೆ ರಂಗಸ್ವಾಮಿ ಎಂಬುವವರೊಂದಿಗೆ ವಿವಾಹವಾಗಿದ್ದ ಕಾವ್ಯಗೆ ನಾಲ್ಕು ವರ್ಷದ ಮಗು ಇದೆ. ಈಗ ತಾಯಿ ಕಳೆದುಕೊಂಡ ಆ ಪುಟ್ಟ ಮಗು ಅನಾಥದಂತಾಗಿದೆ ಎಂಬುದು ಕುಟುಂಬದವರನ್ನು ಮತ್ತಷ್ಟು ದುಃಖಕ್ಕೆ ತಳ್ಳಿದೆ.

ಒಂದೇ ಸಾಂಬಾರು ವಿಚಾರಕ್ಕೆ ಜಗಳ

ಮನೆಯಲ್ಲಿದ್ದ ಸಾಂಬಾರನ್ನು ಫ್ರಿಡ್ಜ್‌ನಲ್ಲಿ ಇಟ್ಟು ಮತ್ತೆ ಬಿಸಿ ಮಾಡಿ ಮೂರು ದಿನಗಳಿಂದ ಅದೇ ಆಹಾರವನ್ನು ಪತಿಗೆ ಬಡಿಸಿದ್ದಾಳೆ ಎಂದು ತಿಳಿದುಬಂದಿದೆ. ಮೊದಲ ಎರಡು ದಿನ ಅದನ್ನು ಗಮನಿಸದೇ ಇದ್ದ ಪತಿ, ಮೂರನೇ ದಿನ ಇದೇ ವಿಚಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾನೆ.

ಈ ವೇಳೆ ಪತಿ ಕೋಪಗೊಂಡು ಪತ್ನಿಗೆ ಕಠಿಣವಾಗಿ ಮಾತಾಡಿದ್ದು, ಬೈಯುತ್ತಿದ್ದಂತೆ ದಂಪತಿ ನಡುವೆ ಜಗಳ ತೀವ್ರಗೊಂಡಿದೆ. ಪತಿಯ ಮಾತುಗಳಿಂದ ಮನನೊಂದು ಕಾವ್ಯ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾಳೆ ಎಂದು ತಿಳಿದುಬಂದಿದೆ.

ಜಗಳದ ನಂತರ ಮನಸ್ಸಿಗೆ ತೀವ್ರವಾಗಿ ಹೊಡೆತ ಬಿದ್ದ ಕಾವ್ಯ ವಿಷ ಸೇವಿಸಿದ್ದಾಳೆ ಎನ್ನಲಾಗಿದೆ. ಕೆಲ ಸಮಯದ ಬಳಿಕ ಕಾವ್ಯ ಅಸ್ವಸ್ಥಗೊಂಡು ವಾಂತಿ ಮಾಡುತ್ತಿರುವುದನ್ನು ಕುಟುಂಬದವರು ಗಮನಿಸಿದ್ದಾರೆ. ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲು ಯತ್ನಿಸಿದರೂ, ಮಾರ್ಗಮಧ್ಯದಲ್ಲೇ ಕಾವ್ಯ ಕೊನೆಯುಸಿರೆಳೆದಿದ್ದಾರೆ.

ಘಟನೆಯ ನಂತರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಪತಿ ರಂಗಸ್ವಾಮಿಯನ್ನು ವಿಚಾರಣೆ ನಡೆಸುತ್ತಿದ್ದಾರೆ.

ಈ ಘಟನೆ ಕುಟುಂಬದಲ್ಲಿ ಮಾತ್ರವಲ್ಲದೆ ಸುತ್ತಮುತ್ತಲಿನ ಪ್ರದೇಶದಲ್ಲಿಯೂ ಆಘಾತ ಮೂಡಿಸಿದೆ. ಕ್ಷುಲ್ಲಕ ವಿಚಾರದಿಂದ ಆರಂಭವಾದ ಜಗಳ ಕೊನೆಗೆ ಒಂದು ಕುಟುಂಬದ ಬದುಕನ್ನೇ ತಲೆಕೆಳಗಾಗಿಸಿದೆ.

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories