ದೇವನಹಳ್ಳಿ: ವಿದ್ಯುತ್ ಕಂಬ ಹತ್ತಿದ್ದ ಲೈನ್‌ಮೆನ್ ವಿದ್ಯುತ್ ಸ್ಪರ್ಶಿಸಿ ಕಂಬದಲ್ಲೇ ಸಾವು
ದೇವನಹಳ್ಳಿಯಲ್ಲಿ ವಿದ್ಯುತ್ ತಂತಿ ದುರಸ್ತಿ ಮಾಡಲು ಕಂಬ ಹತ್ತಿದ್ದ ಹೊರಗುತ್ತಿಗೆ ಲೈನ್‌ಮೆನ್ ವಿದ್ಯುತ್ ಸ್ಪರ್ಶದಿಂದ ಸ್ಥಳದಲ್ಲೇ ಮೃತಪಟ್ಟಿದ್ದು, ಘಟನೆ ಕುರಿತು ಪ್ರಕರಣ ದಾಖಲಾಗಿದೆ.

ದೇವನಹಳ್ಳಿ (Devanahalli): ವಿದ್ಯುತ್ ತಂತಿ ದುರಸ್ತಿ ಮಾಡಲು ಕಂಬ ಹತ್ತಿದ್ದ ಲೈನ್‌ಮೆನ್ ವಿದ್ಯುತ್ ಸ್ಪರ್ಶದಿಂದ ಸ್ಥಳದಲ್ಲೇ ಮೃತಪಟ್ಟಿರುವ (Lineman Dies) ದಾರುಣ ಘಟನೆ ದೇವನಹಳ್ಳಿಯಲ್ಲಿ ನಡೆದಿದೆ. ಚಳ್ಳಕೆರೆ ಮೂಲದ ಪಾಲಯ್ಯ (42) ಮೃತರು.
ಪಾಲಯ್ಯ ಕಳೆದ ಎರಡು ವರ್ಷಗಳಿಂದ ದೇವನಹಳ್ಳಿಯ ಬೆಸ್ಕಾಂ ಕಚೇರಿಯಲ್ಲಿ (BESCOM) ಹೊರಗುತ್ತಿಗೆ ಲೈನ್‌ಮೆನ್ ಆಗಿ ಕೆಲಸ ಮಾಡುತ್ತಿದ್ದರು. ಎಂದಿನಂತೆ ವಿದ್ಯುತ್ ದುರಸ್ತಿ ಕಾರ್ಯಕ್ಕೆ ತೆರಳಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ಬೊಮ್ಮನಹಳ್ಳಿ ರಸ್ತೆಯ ಐಶ್ವರ್ಯ ಬಡಾವಣೆ ಸಮೀಪದ ವಿದ್ಯುತ್ ಕಂಬದಲ್ಲಿ ಜಂಪ್ ಕಟ್ಟಾಗಿರುವ ಬಗ್ಗೆ ದೂರು ಬಂದಿತ್ತು. ಈ ಹಿನ್ನೆಲೆಯಲ್ಲಿ ಮೇಸ್ತ್ರಿ ನೀಡಿದ ಸೂಚನೆಯಂತೆ ಪಾಲಯ್ಯ ಸ್ಥಳಕ್ಕೆ ತೆರಳಿ ದುರಸ್ತಿ ಕಾರ್ಯಕ್ಕೆ ಮುಂದಾಗಿದ್ದರು ಎನ್ನಲಾಗಿದೆ.
ವಿದ್ಯುತ್ ತಂತಿ ಸರಿಪಡಿಸುವ ವೇಳೆ ಪಾಲಯ್ಯ ಅವರಿಗೆ ವಿದ್ಯುತ್ ಸ್ಪರ್ಶ (Electric Shock)ವಾಗಿದೆ. ತೀವ್ರ ವಿದ್ಯುತ್ ಆಘಾತಕ್ಕೆ ಒಳಗಾದ ಅವರು ಕಂಬದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ದುರಸ್ತಿ ಕಾರ್ಯ ಆರಂಭಿಸುವ ಮುನ್ನ ವಿದ್ಯುತ್ ಸಂಪರ್ಕ ಕಡಿತಗೊಂಡಿರುವುದನ್ನು ಖಚಿತಪಡಿಸಿಕೊಳ್ಳಲಾಗಿತ್ತೇ ಎಂಬ ವಿಚಾರವೂ ಇದೀಗ ಗಮನ ಸೆಳೆದಿದೆ. ವಿದ್ಯುತ್ ಮಾರ್ಗದಲ್ಲಿ ಕೆಲಸ ಮಾಡುವ ಸಿಬ್ಬಂದಿ ಸುರಕ್ಷತಾ ಕ್ರಮಗಳನ್ನು (Safety Measures) ಪಾಲಿಸುವುದು ಎಷ್ಟು ಮುಖ್ಯ ಎಂಬುದನ್ನು ಈ ಘಟನೆ ಮತ್ತೊಮ್ಮೆ ನೆನಪಿಸಿದೆ.
ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಪಾಲಯ್ಯ ಅವರ ಸಾವಿನಿಂದ ಕುಟುಂಬಸ್ಥರು ಹಾಗೂ ಸಹೋದ್ಯೋಗಿಗಳಲ್ಲಿ ಆಘಾತದ ವಾತಾವರಣ ನಿರ್ಮಾಣವಾಗಿದೆ.



