ಬೈಕ್ ತಪ್ಪಿಸಲು ಹೋಗಿ ದೇವಸ್ಥಾನಕ್ಕೆ ಗುದ್ದಿದ ಬಿಎಂಟಿಸಿ ಬಸ್! ತಪ್ಪಿದ ಭಾರೀ ಅನಾಹುತ

ಎದುರಿನಿಂದ ಬಂದ ಬೈಕ್‌ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಯತ್ನಿಸಿದ ಬಿಎಂಟಿಸಿ ಬಸ್ ನಿಯಂತ್ರಣ ತಪ್ಪಿ ದೇವಸ್ಥಾನದ ಕಾಂಪೌಂಡ್‌ಗೆ ಡಿಕ್ಕಿ ಹೊಡೆದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರು ನಗರದ ಬೃಂದಾವನ ಬಸ್ ನಿಲ್ದಾಣದ ಸಮೀಪ ಇಂದು ಮಧ್ಯಾಹ್ನ ನಡೆದ ಅಪಘಾತ ಒಂದು ಕ್ಷಣ ಆತಂಕ ಸೃಷ್ಟಿಸಿತು. ಬೈಕ್ ಸವಾರನನ್ನು ತಪ್ಪಿಸಲು ಯತ್ನಿಸಿದ ಬಿಎಂಟಿಸಿ ಬಸ್ ನೇರವಾಗಿ ಶಿವ ದೇವಸ್ಥಾನದ ಕಾಂಪೌಂಡ್‌ಗೆ ಡಿಕ್ಕಿ ಹೊಡೆದಿದೆ.

ಘಟನೆ ಮಧ್ಯಾಹ್ನ ಸುಮಾರು 1 ಗಂಟೆ ವೇಳೆಗೆ ನಡೆದಿದೆ. ಘಟಕ 9ಕ್ಕೆ ಸೇರಿದ ಬಿಎಂಟಿಸಿ ಬಸ್ 8ನೇ ಮೈಲಿಯಿಂದ ಹೇರೋಹಳ್ಳಿ ಕ್ರಾಸ್ ಕಡೆಗೆ ಸಂಚರಿಸುತ್ತಿದ್ದಾಗ ಎದುರಿನಿಂದ ಬೈಕ್ ಏಕಾಏಕಿ ಬಂದಿತ್ತು ಎಂದು ತಿಳಿದುಬಂದಿದೆ.

ಬೈಕ್‌ಗೆ ಡಿಕ್ಕಿ ಹೊಡೆಯಬಾರದೆಂದು ಚಾಲಕ ತಕ್ಷಣ ಬಸ್ ತಿರುಗಿಸಲು ಯತ್ನಿಸಿದ್ದಾನೆ. ಆದರೆ ನಿಯಂತ್ರಣ ತಪ್ಪಿದ ಬಸ್ ರಸ್ತೆ ಬದಿಯಲ್ಲಿದ್ದ ಶಿವ ದೇವಸ್ಥಾನದ ಕಾಂಪೌಂಡ್ ಹಾಗೂ ಗ್ರಿಲ್‌ಗೆ ಗುದ್ದಿದೆ. ಡಿಕ್ಕಿಯ ತೀವ್ರತೆಗೆ ದೇವಸ್ಥಾನದ ಭಾಗಶಃ ಗೋಡೆ ಮತ್ತು ಕಬ್ಬಿಣದ ಗ್ರಿಲ್ ಹಾನಿಗೊಂಡಿವೆ.

ಅಪಘಾತದಲ್ಲಿ ಬೈಕ್ ಸವಾರನ ಬಲಗೈಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳದಲ್ಲೇ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಬಸ್‌ನಲ್ಲಿದ್ದ ಪ್ರಯಾಣಿಕರು ಹಾಗೂ ಚಾಲಕ ಯಾವುದೇ ಅಪಾಯದಿಂದ ಪಾರಾಗಿದ್ದಾರೆ.

ಘಟನೆಯ ಬಳಿಕ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೆಲ ಹೊತ್ತು ಸಂಚಾರದಲ್ಲಿ ವ್ಯತ್ಯಯ ಉಂಟಾಗಿದ್ದು, ನಂತರ ಪರಿಸ್ಥಿತಿ ಸಹಜಗೊಂಡಿತು.

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories