Bengaluru: ರಿವರ್ಸ್ ವೇಳೆ ರೈಲಿಗೆ ಡಿಕ್ಕಿ ಹೊಡೆದ ಬೆಂಗಳೂರು ಬಿಎಂಟಿಸಿ ಬಸ್

ಸಾದರಮಂಗಲದಲ್ಲಿ ರಿವರ್ಸ್ ತೆಗೆದುಕೊಳ್ಳುವ ವೇಳೆ ಬಿಎಂಟಿಸಿ ಬಸ್ ರೈಲಿಗೆ ಡಿಕ್ಕಿ ಹೊಡೆದು ಹಿಂಭಾಗ ಸಂಪೂರ್ಣ ಜಖಂಗೊಂಡಿತು, ಪ್ರಯಾಣಿಕರು ಇಲ್ಲದ ಕಾರಣ ಭಾರೀ ದುರಂತ ತಪ್ಪಿದ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ

  • ರಿವರ್ಸ್ ವೇಳೆ ಬಿಎಂಟಿಸಿ ಬಸ್ ರೈಲಿಗೆ ಡಿಕ್ಕಿ
  • ಸಾದರಮಂಗಲದಲ್ಲಿ ಬಸ್ ಹಿಂಭಾಗ ಜಖಂ
  • ಪ್ರಯಾಣಿಕರು ಇಲ್ಲದ ಕಾರಣ ತಪ್ಪಿದ ಅಪಾಯ

ಬೆಂಗಳೂರು (Bengaluru): ನಗರದ ಸಾದರಮಂಗಲದಲ್ಲಿ ಸೋಮವಾರ ಬೆಳಗ್ಗೆ ಸಂಭವಿಸಿದ ಅಪಘಾತ ಒಂದು ಕ್ಷಣ ಆತಂಕ ಮೂಡಿಸಿದರೂ, ಭಾರೀ ದುರಂತ ತಪ್ಪಿದಂತೆ ಆಯಿತು. ರಿವರ್ಸ್ ತೆಗೆದುಕೊಳ್ಳುತ್ತಿದ್ದ ಬಿಎಂಟಿಸಿ ಬಸ್ ನೇರವಾಗಿ ರೈಲು ಹಳಿಯತ್ತ ಸರಿದ ಪರಿಣಾಮ, ಬರುತ್ತಿದ್ದ ರೈಲಿಗೆ ಡಿಕ್ಕಿ ಹೊಡೆದಿದೆ.

ಘಟಕ 51ರ ಕಾಡುಗೋಡಿ ಡಿಪೋಗೆ ಸೇರಿದ ಬಿಎಂಟಿಸಿ ಬಸ್ ಬೆಳಗ್ಗೆ ಸುಮಾರು 9.15ರ ವೇಳೆಗೆ ಸಾದರಮಂಗಲ ಡಿಪೋದಿಂದ ಹೊರಟಿತ್ತು. ಮಾರ್ಗ ಮಧ್ಯೆ ರಸ್ತೆ ಕಾಮಗಾರಿ ನಡೆಯುತ್ತಿದ್ದ ಕಾರಣ ಚಾಲಕ ಬಸ್ ಅನ್ನು ಹಿಂದಕ್ಕೆ ತೆಗೆದುಕೊಳ್ಳಲು ಮುಂದಾಗಿದ್ದಾನೆ. ಇದೇ ವೇಳೆ ಚಾಲಕನ ಅಜಾಗರೂಕತೆಯಿಂದ ಬಸ್ ಹಳಿ ಭಾಗದತ್ತ ಹೆಚ್ಚು ಹಿಂದಕ್ಕೆ ಸರಿದಿದೆ.

ಅದೇ ಸಮಯದಲ್ಲಿ ಎಸ್‌ಎಂವಿಟಿ ಬೆಂಗಳೂರು–ಟಾಟಾನಗರ (ಜಾರ್ಖಂಡ್) ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲು ವೇಗವಾಗಿ ಆಗಮಿಸಿದ್ದು, ಬಸ್‌ನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಬಸ್ ಹಿಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.

ಬಸ್‌ನಲ್ಲಿ ಯಾವುದೇ ಪ್ರಯಾಣಿಕರು ಇರಲಿಲ್ಲ. ಇದರಿಂದಾಗಿ ದೊಡ್ಡ ಪ್ರಮಾಣದ ಜೀವಹಾನಿ ತಪ್ಪಿದಂತಾಗಿದೆ. ಮಾಹಿತಿ ಪಡೆದ ತಕ್ಷಣ ಬಿಎಂಟಿಸಿ ವಿಭಾಗೀಯ ನಿರ್ವಾಹಕ ಇಂಜಿನಿಯರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಘಟನೆ ಸುರಕ್ಷತೆಗೆ ಗಂಭೀರ ಅಪಾಯ ಉಂಟುಮಾಡುವ ರೀತಿಯದ್ದೆಂದು ಪರಿಗಣಿಸಿರುವ ನೈರುತ್ಯ ರೈಲ್ವೆ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಆರಂಭಿಸಿದ್ದಾರೆ.

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories