Bengaluru Airport: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬ್ರೆಜಿಲಿಯನ್ ಬಂಧನ! ಕೊಕೇನ್ ವಶ
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎನ್‌ಸಿಬಿ ದಾಳಿ; ಬ್ರೆಜಿಲಿಯನ್ ಪ್ರಜೆಯ ಬಳಿ ಸುಮಾರು 24 ಕೋಟಿ ರೂ ಮೌಲ್ಯದ 4.776 ಕೆಜಿ ಕೊಕೇನ್ ವಶ, ಡ್ರಗ್ಸ್ ಕಳ್ಳಸಾಗಣೆ ಜಾಲ ಕುರಿತು ತನಿಖೆ ಆರಂಭ.

- ಬೆಂಗಳೂರಿಲ್ಲಿ ಬ್ರೆಜಿಲಿಯನ್ ಪ್ರಜೆ ಬಂಧನ
- 24 ಕೋಟಿ ರೂ ಮೌಲ್ಯದ ಕೊಕೇನ್ ವಶ
- ಎನ್‌ಸಿಬಿ ತನಿಖೆ, NDPS ಕಾಯ್ದೆಯಡಿ ಕ್ರಮ
ಬೆಂಗಳೂರು (Bengaluru): ಬೆಂಗಳೂರು ನಗರದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIA) ಮಾದಕ ದ್ರವ್ಯ ನಿಯಂತ್ರಣ ಬ್ಯೂರೋ (NCB) ಅಧಿಕಾರಿಗಳು ನಡೆಸಿದ ಕಟ್ಟುನಿಟ್ಟಿನ ತಪಾಸಣೆಯಲ್ಲಿ ಬ್ರೆಜಿಲಿಯನ್ ಪ್ರಜೆಯೊಬ್ಬರು ಸಿಕ್ಕಿಬಿದ್ದಿದ್ದಾರೆ.
ಫೆಬ್ರವರಿ 17ರ ಬೆಳಗಿನ ಕಾರ್ಯಾಚರಣೆಯಲ್ಲಿ ಸುಮಾರು 4.776 ಕೆಜಿ ಕೊಕೇನ್ ವಶಪಡಿಸಿಕೊಂಡಿದ್ದು, ಇದರ ಅಂದಾಜು ಮೌಲ್ಯ 23.88 ಕೋಟಿ ರೂಪಾಯಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಯಾಣ ಮಾರ್ಗ ಏನು?
ಬಂಧಿತ ಆರೋಪಿ ಬ್ರೆಜಿಲ್‌ನ ಸಾವೊ ಪಾಲೊ ನಗರದಿಂದ ಕತಾರ್‌ನ ದೋಹಾಗೆ ಪ್ರಯಾಣಿಸಿ, ಅಲ್ಲಿಂದ ಬೆಂಗಳೂರಿಗೆ ವಿಮಾನ ಹತ್ತಿದ್ದರು. ಅನುಮಾನಾಸ್ಪದ ಚಲನವಲನದ ಹಿನ್ನೆಲೆ ಅಧಿಕಾರಿಗಳು ಚೆಕ್-ಇನ್ ಸಾಮಾನುಗಳನ್ನು ಪರಿಶೀಲಿಸಿದಾಗ ನಾಲ್ಕು ಮಹಿಳೆಯರ ಕೈಚೀಲಗಳಲ್ಲಿ ಮರೆಮಾಡಿದ್ದ ಕೊಕೇನ್ ಪತ್ತೆಯಾಯಿತು.
ಮುಂದಿನ ಕ್ರಮ
ಈ ಡ್ರಗ್ಸ್ ಕಳ್ಳಸಾಗಣೆ ಯತ್ನದ ಹಿಂದೆ ಇರುವ ಮೂಲ ಹಾಗೂ ಗಮ್ಯಸ್ಥಾನದ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಲು ಆರೋಪಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ.
ಮಾದಕ ದ್ರವ್ಯ ಮತ್ತು ಮನೋವಿಕೃತ ವಸ್ತುಗಳ ನಿಯಂತ್ರಣ ಕಾಯ್ದೆ (NDPS Act) ಅಡಿಯಲ್ಲಿ ಪ್ರಕರಣ ದಾಖಲಿಸಿ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಎನ್‌ಸಿಬಿ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.
ನಗರದ ವಿಮಾನ ನಿಲ್ದಾಣಗಳಲ್ಲಿ ಡ್ರಗ್ಸ್ ಸಾಗಣೆ ವಿರುದ್ಧ ಜಾಗೃತಿ ಮತ್ತು ಕಟ್ಟುನಿಟ್ಟಿನ ನಿಗಾವಹಿಸುವ ಕ್ರಮಗಳು ಮತ್ತಷ್ಟು ಬಲಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.



