ತಮ್ಮನ ಮೇಲಿನ ಸೇಡಿಗೆ ಅಣ್ಣನ ಕಿಡ್ನಾಪ್! ಕೈಕಾಲು ಕಟ್ಟಿ ಥಳಿಸಿದ ಆಘಾತಕಾರಿ ಘಟನೆ

ತಮ್ಮ ಪ್ರೀತಿಸಿ ಮನೆ ಬಿಟ್ಟು ಹೋದ ಹಿನ್ನೆಲೆಯಲ್ಲಿ ಕೋಪಗೊಂಡ ಯುವತಿಯ ಮನೆಯವರು ಪ್ರಿಯಕರನ ಅಣ್ಣನನ್ನು ಅಪಹರಿಸಿ, ಕೈಕಾಲು ಕಟ್ಟಿ ಹಲ್ಲೆ ನಡೆಸಿದ ಘಟನೆ ಬೆಂಗಳೂರಿನಲ್ಲಿ ಆತಂಕ ಮೂಡಿಸಿದೆ.

ಬೆಂಗಳೂರು ಹೊರವಲಯದ ಬ್ಯಾಡರಹಳ್ಳಿಯಲ್ಲಿ ನಡೆದ ಘಟನೆ ಒಂದು ಕುಟುಂಬವನ್ನು ಬೆಚ್ಚಿಬೀಳಿಸಿದೆ. ತಮ್ಮ ಪ್ರೀತಿಸಿ ಯುವತಿಯೊಂದಿಗೆ ಮನೆ ಬಿಟ್ಟು ಹೋದ ವಿಚಾರಕ್ಕೆ ಕೋಪಗೊಂಡ ಯುವತಿಯ ಕುಟುಂಬಸ್ಥರು, ಆತನ ಅಣ್ಣನನ್ನೇ ಗುರಿಯಾಗಿಸಿಕೊಂಡು ಅಪಹರಿಸಿ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಘಟನೆ ಸಂಬಂಧ ಇದೀಗ ಬ್ಯಾಡರಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಶಿವಕುಮಾರ್ ಎಂಬ ಯುವಕ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದನು. ಆದರೆ ಈ ಸಂಬಂಧಕ್ಕೆ ಯುವತಿಯ ಮನೆಯವರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಕೆಲ ದಿನಗಳ ಹಿಂದೆ ಇಬ್ಬರೂ ಮನೆ ಬಿಟ್ಟು ತೆರಳಿದ್ದರಿಂದ ಯುವತಿಯ ಕುಟುಂಬ ಆಕ್ರೋಶಗೊಂಡಿತ್ತು. ಶಿವಕುಮಾರ್ ಸಿಗದ ಹಿನ್ನೆಲೆಯಲ್ಲಿ ಆತನ ಅಣ್ಣ ಕೊಟ್ರೇಶ್ ಮೇಲೆ ಸೇಡು ತೀರಿಸಿಕೊಳ್ಳಲು ಸಂಚು ರೂಪಿಸಲಾಗಿದೆ ಎನ್ನಲಾಗಿದೆ.

ಕೊಟ್ರೇಶ್ ಸ್ಥಳೀಯ ದೇವಸ್ಥಾನದಲ್ಲಿ ಅರ್ಚಕರಾಗಿ ಕೆಲಸ ಮಾಡುತ್ತಿದ್ದರು. “ಪೊಲೀಸ್ ಸ್ಟೇಷನ್‌ಗೆ ಬರಬೇಕು” ಎಂದು ನಂಬಿಸಿ ಆರೋಪಿಗಳು ಅವರನ್ನು ಕಾರಿನಲ್ಲಿ ಕರೆದೊಯ್ದಿದ್ದಾರೆ. ಬಳಿಕ ಅಜ್ಞಾತ ಸ್ಥಳದಲ್ಲಿ ಕೈಕಾಲು ಕಟ್ಟಿ ಹಾಕಿ ಹಲ್ಲೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಹಲ್ಲೆ ವೇಳೆ ಕೊಟ್ರೇಶ್ ಜೀವಭಯದಿಂದ ಕಿರುಚಿಕೊಂಡಿರುವ ದೃಶ್ಯಗಳು ವಿಡಿಯೋದಲ್ಲೂ ದಾಖಲಾಗಿವೆ.

ಆರೋಪಿಗಳು ಕೊಟ್ರೇಶ್ ಕೈಯಲ್ಲಿ “ಶಿವು ಎಲ್ಲಿದ್ದರೂ ಹುಡುಗಿಯನ್ನು ಕರೆದುಕೊಂಡು ಬರಲಿ” ಎಂದು ಹೇಳಿಸಿ ವಿಡಿಯೋ ಮಾಡಿದ್ದು, ಅದನ್ನು ಸಂಬಂಧಿಕರಿಗೆ ಕಳುಹಿಸಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ವಿಡಿಯೋ ನೋಡಿದ ಕುಟುಂಬಸ್ಥರು ತಕ್ಷಣ ಪೊಲೀಸರನ್ನು ಸಂಪರ್ಕಿಸಿದ್ದಾರೆ.

ಪ್ರಕರಣದ ಮಾಹಿತಿ ಸಿಗುತ್ತಿದ್ದಂತೆಯೇ ಪೊಲೀಸರು ತನಿಖೆ ಆರಂಭಿಸಿದ್ದರು. ತನಿಖೆ ನಡೆಯುತ್ತಿರುವ ವಿಚಾರ ಆರೋಪಿಗಳಿಗೆ ತಿಳಿಯುತ್ತಿದ್ದಂತೆ ಕೊಟ್ರೇಶ್ ಅವರನ್ನು ಬಿಟ್ಟು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಸದ್ಯ ಪೊಲೀಸರು ಆರೋಪಿಗಳ ಪತ್ತೆಗೆ ಶೋಧ ಕಾರ್ಯ ಮುಂದುವರಿಸಿದ್ದಾರೆ.

ಈ ಘಟನೆ ಪ್ರೇಮ ವಿವಾಹದ ವಿಚಾರದಲ್ಲಿ ಕುಟುಂಬಗಳ ಮಧ್ಯೆ ಉಂಟಾಗುತ್ತಿರುವ ಉದ್ವಿಗ್ನತೆಯ ಮತ್ತೊಂದು ಉದಾಹರಣೆಯಾಗಿ ಪರಿಣಮಿಸಿದೆ. ಸಮಯಕ್ಕೆ ಸರಿಯಾಗಿ ಮಾಹಿತಿ ಸಿಕ್ಕಿದ್ದರಿಂದ ಕೊಟ್ರೇಶ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories