Bengaluru: ಬೆಂಗಳೂರು ಭಾಗದ ಈ ಏರಿಯಾಗಳಲ್ಲಿ 2 ದಿನ ಕಾವೇರಿ ನೀರು ವ್ಯತ್ಯಯ

ತುರ್ತು ಪೈಪ್‌ಲೈನ್ ನಿರ್ವಹಣಾ ಕಾಮಗಾರಿಯಿಂದ ಫೆಬ್ರವರಿ 5 ಮತ್ತು 6ರಂದು ಬೆಂಗಳೂರು ನಗರದ ಹಲವು ಪ್ರದೇಶಗಳಲ್ಲಿ ಕಾವೇರಿ ನೀರು ಪೂರೈಕೆ ಸ್ಥಗಿತವಾಗಲಿದ್ದು, ಮುನ್ನೆಚ್ಚರಿಕೆ ವಹಿಸುವಂತೆ ಜಲಮಂಡಳಿ ಮನವಿ ಮಾಡಿದೆ

  • ಕಾವೇರಿ ನೀರು ಎರಡು ದಿನ ಸ್ಥಗಿತ
  • ಪೈಪ್‌ಲೈನ್ ಕಾಮಗಾರಿ ಕಾರಣ
  • ಹಲವೆಡೆ ನೀರು ಪೂರೈಕೆ ಅಸ್ತವ್ಯಸ್ತ

ಬೆಂಗಳೂರು (Bengaluru): ಬೆಂಗಳೂರು ನಗರದಲ್ಲಿ ಮುಂದಿನ ಎರಡು ದಿನ ಕಾವೇರಿ ನೀರು (Cauvery Water) ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಜಲಮಂಡಳಿಯ ಮಾಹಿತಿ ಪ್ರಕಾರ, ಫೆಬ್ರವರಿ 5ರಂದು ಬೆಳಗ್ಗೆ 6 ಗಂಟೆಯಿಂದ ಫೆಬ್ರವರಿ 6ರಂದು ಬೆಳಗ್ಗೆ 6 ಗಂಟೆಯವರೆಗೆ ಕಾವೇರಿ ನೀರು ಯೋಜನೆಯ ಮೊದಲ ಮತ್ತು ಎರಡನೇ ಹಂತದ ಜಲರೇಚಕ ಯಂತ್ರಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತದೆ.

ಈ ಅವಧಿಯಲ್ಲಿ 1200 ಎಂಎಂ, 900 ಎಂಎಂ ಹಾಗೂ 700 ಎಂಎಂ ವ್ಯಾಸದ ನೀರು ಸರಬರಾಜು ಪೈಪ್‌ಲೈನ್‌ ಅಳವಡಿಕೆ ಮತ್ತು ನಿರ್ವಹಣಾ ಕಾಮಗಾರಿ ನಡೆಯಲಿದೆ.

ಈ ಹಿನ್ನೆಲೆಯಲ್ಲಿ ಮಾಗಡಿ ರಸ್ತೆ, ಕುಮಾರಸ್ವಾಮಿ ಲೇಔಟ್‌, ಬನಶಂಕರಿ, ಜಯನಗರ, ಜೆಪಿ ನಗರ, ಯಲಚೇನಹಳ್ಳಿ, ಉತ್ತರಹಳ್ಳಿ, ಕೋರಮಂಗಲ, ಮಡಿವಾಳ, ಶಾಂತಿನಗರ, ವಿಲ್ಸನ್ ಗಾರ್ಡನ್‌, ಆಸ್ಟಿನ್ ಟೌನ್‌, ಈಜಿಪುರ, ಚಾಮರಾಜಪೇಟೆ ಸೇರಿದಂತೆ ನಗರದ ಹಲವು ಪ್ರಮುಖ ಬಡಾವಣೆಗಳು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರು ಪೂರೈಕೆ ವ್ಯತ್ಯಯವಾಗಲಿದೆ.

ನೀರಿನ ಕೊರತೆಯಿಂದ ಜನಸಾಮಾನ್ಯರಿಗೆ ತೊಂದರೆ ಆಗುವ ಸಾಧ್ಯತೆ ಇರುವುದರಿಂದ, ನಾಗರಿಕರು ಮುಂಚಿತವಾಗಿಯೇ ಅಗತ್ಯ ಪ್ರಮಾಣದ ನೀರನ್ನು ಸಂಗ್ರಹಿಸಿಟ್ಟುಕೊಳ್ಳಬೇಕು ಎಂದು ಜಲಮಂಡಳಿ ಅಧ್ಯಕ್ಷ ಡಾ. ವಿ. ರಾಮ್ ಪ್ರಸಾದ್ ಮನೋಹರ್ ಮನವಿ ಮಾಡಿದ್ದಾರೆ. ಕಾಮಗಾರಿ ಪೂರ್ಣಗೊಂಡ ಬಳಿಕ ನೀರು ಸರಬರಾಜು ಸಹಜ ಸ್ಥಿತಿಗೆ ಮರಳಲಿದೆ ಎಂದು BWSSB ಸ್ಪಷ್ಟಪಡಿಸಿದೆ.

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories