Bengaluru Crime: ಬೆಂಗಳೂರು ವೇಶ್ಯಾವಾಟಿಕೆ ಜಾಲ ಭೇದಿಸಿದ ಸಿಸಿಬಿ! ನಾಲ್ವರ ಬಂಧನ, ಮೂವರು ಮಹಿಳೆಯರ ರಕ್ಷಣೆ
Bengaluru Crime: ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ಬಾಡಿಗೆ ಮನೆಗಳನ್ನು ಬಳಸಿ ನಡೆಯುತ್ತಿದ್ದ ವೇಶ್ಯಾವಾಟಿಕೆ ದಂಧೆ ಮೇಲೆ ಸಿಸಿಬಿ ದಾಳಿ ನಡೆಸಿದ್ದು, ನಾಲ್ವರನ್ನು ಬಂಧಿಸಿ ಮೂವರು ಮಹಿಳೆಯರನ್ನು ರಕ್ಷಿಸಿರುವ ಘಟನೆ ಬೆಳಕಿಗೆ ಬಂದಿದೆ.
Bengaluru Crime: ಬೆಂಗಳೂರು ನಗರದಲ್ಲಿ ಗುಪ್ತವಾಗಿ ನಡೆಯುತ್ತಿದ್ದ ವೇಶ್ಯಾವಾಟಿಕೆ ದಂಧೆಯ ವಿರುದ್ಧ ಸಿಸಿಬಿ ಮಹಿಳಾ ಸಂರಕ್ಷಣಾ ದಳ ಯಶಸ್ವಿ ಕಾರ್ಯಾಚರಣೆ ನಡೆಸಿದೆ. ವಿವಿಧ ಪ್ರದೇಶಗಳ ಬಾಡಿಗೆ ಮನೆಗಳನ್ನು ಕೇಂದ್ರವನ್ನಾಗಿ ಮಾಡಿಕೊಂಡು ನಡೆಸಲಾಗುತ್ತಿದ್ದ ಅಕ್ರಮ ಚಟುವಟಿಕೆಯನ್ನು ಪತ್ತೆಹಚ್ಚಿ ನಾಲ್ವರನ್ನು ಬಂಧಿಸಲಾಗಿದೆ.
ಪೊಲೀಸರಿಗೆ ದೊರೆತ ಖಚಿತ ಮಾಹಿತಿಯ ಆಧಾರದ ಮೇಲೆ ಟಿ.ದಾಸರಹಳ್ಳಿ, ಜರಗನಹಳ್ಳಿ ಹಾಗೂ ಮೂಡಲಪಾಳ್ಯ ಭಾಗಗಳಲ್ಲಿರುವ ಮನೆಗಳ ಮೇಲೆ ದಾಳಿ ನಡೆಸಲಾಯಿತು. ಈ ವೇಳೆ ವೇಶ್ಯಾವಾಟಿಕೆಗೆ ಮಹಿಳೆಯರನ್ನು ಬಳಸಲಾಗುತ್ತಿದ್ದ ವಿಚಾರ ಬಹಿರಂಗಗೊಂಡಿದೆ.
ಕಾರ್ಯಾಚರಣೆಯ ವೇಳೆ ಹೊರರಾಜ್ಯದ ಇಬ್ಬರು ಮಹಿಳೆಯರು ಹಾಗೂ ಸ್ಥಳೀಯ ಮಹಿಳೆಯೊಬ್ಬರನ್ನು ರಕ್ಷಿಸಲಾಗಿದೆ. ಅವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿ ಅಗತ್ಯ ನೆರವು ಒದಗಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ಆರೋಪಿಗಳು ಹೆಚ್ಚಿನ ಹಣ ಗಳಿಸುವ ಉದ್ದೇಶದಿಂದ ದೂರವಾಣಿ ಮೂಲಕ ಗ್ರಾಹಕರನ್ನು ಸಂಪರ್ಕಿಸಿ, ಬಾಡಿಗೆ ಮನೆಗಳಿಗೆ ಕರೆಸಿ ಅಕ್ರಮ ಚಟುವಟಿಕೆ ನಡೆಸುತ್ತಿದ್ದರು ಎಂಬ ಮಾಹಿತಿ ಹೊರಬಿದ್ದಿದೆ. ಈ ಸಂಬಂಧ ಒಬ್ಬ ಪುರುಷ ಹಾಗೂ ಮೂವರು ಮಹಿಳೆಯರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಬಾಗಲಗುಂಟೆ, ಪುಟ್ಟೇನಹಳ್ಳಿ ಹಾಗೂ ಚಂದ್ರಲೇಔಟ್ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಪ್ರಕರಣದ ಮತ್ತೊಬ್ಬ ಮಹಿಳಾ ಆರೋಪಿತೆ ತಲೆಮರೆಸಿಕೊಂಡಿದ್ದು, ಆಕೆಯ ಪತ್ತೆಗೆ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.
ಸಿಸಿಬಿ ಅಧಿಕಾರಿಗಳ ಪ್ರಕಾರ, ಮಹಿಳೆಯರ ಶೋಷಣೆಯನ್ನು ತಡೆಯುವ ಉದ್ದೇಶದಿಂದ ಇಂತಹ ಅಕ್ರಮ ಚಟುವಟಿಕೆಗಳ ವಿರುದ್ಧ ಮುಂದೆಯೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.



