ಬೆಂಗಳೂರು ಗೋವಾ ವಂದೇ ಭಾರತ್ ಪ್ರಯಾಣ ಸಮಯ ವಿವಾದ

ಬೆಂಗಳೂರು–ಗೋವಾ ವಂದೇ ಭಾರತ್ ಎಕ್ಸ್‌ಪ್ರೆಸ್ 13 ಗಂಟೆಗಳ ಪ್ರಯಾಣ ಸಮಯದ ಅಂದಾಜು ಹಿನ್ನೆಲೆ ಪ್ರಯಾಣಿಕರಲ್ಲಿ ಅಸಮಾಧಾನ ವ್ಯಕ್ತವಾಗಿದ್ದು, ವೇಳಾಪಟ್ಟಿ ಬದಲಾವಣೆ ಹಾಗೂ ಸ್ಲೀಪರ್ ಕೋಚ್ ಸೇರಿಸುವಂತೆ ತಜ್ಞರು ಒತ್ತಾಯಿಸಿದ್ದಾರೆ.

ಬೆಂಗಳೂರು (Bengaluru): ಬೆಂಗಳೂರು ಮತ್ತು ಗೋವಾ ನಡುವೆ ಸಂಚರಿಸಲಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat) ಆರಂಭಕ್ಕೂ ಮುನ್ನವೇ ವಿವಾದದ ಸಿಡಿಲು ಎದ್ದಿದೆ. ನೈಋತ್ಯ ರೈಲ್ವೆ ಪ್ರಸ್ತಾಪಿಸಿರುವ ಈ ಪ್ರೀಮಿಯಂ ರೈಲು ಸುಮಾರು 13 ಗಂಟೆಗಳಲ್ಲಿ ಮಡ್ಗಾಂವ್ ತಲುಪಬಹುದು ಎಂಬ ಅಂದಾಜು ಹೊರಬಂದಿದ್ದು, ಇದೇ ವಿಚಾರ ಈಗ ದೊಡ್ಡ ಚರ್ಚೆಗೆ ಕಾರಣವಾಗಿದೆ.

13 ಗಂಟೆ ಹೆಚ್ಚು ಎಂಬ ಆಕ್ಷೇಪ

ತಜ್ಞರ ಅಭಿಪ್ರಾಯದಲ್ಲಿ, ಪ್ರೀಮಿಯಂ ವರ್ಗದ ರೈಲಿಗೆ 12–13 ಗಂಟೆಗಳ ಪ್ರಯಾಣ ಅವಧಿ ದೀರ್ಘವಾಗಿದೆ. ಬೆಳಿಗ್ಗೆ ಬಹಳ ಬೇಗ ಹೊರಟರೆ ಪ್ರಯಾಣಿಕರಿಗೆ ತೊಂದರೆ ಆಗಲಿದೆ. ಹಗಲು ಪೂರ್ತಿ ರೈಲಿನಲ್ಲಿ ಕಳೆಯಬೇಕಾದ ಪರಿಸ್ಥಿತಿ ಪ್ರವಾಸಿಗರಿಗೆ ನಿರಾಸೆ ತರುವ ಸಾಧ್ಯತೆ ಇದೆ.

ಕೆಲವರು ಸಂಜೆ ವೇಳೆ ರೈಲು ಹೊರಟು ಬೆಳಿಗ್ಗೆ ಗೋವಾ ತಲುಪುವಂತೆ ವೇಳಾಪಟ್ಟಿ ರೂಪಿಸಿದರೆ ಅನುಕೂಲಕರವಾಗುತ್ತದೆ ಎಂದು ಸಲಹೆ ನೀಡಿದ್ದಾರೆ. ಇದರಿಂದ ಪ್ರವಾಸಿಗರು ದಿನದ ಸಮಯವನ್ನು ವ್ಯರ್ಥ ಮಾಡಿಕೊಳ್ಳಬೇಕಾಗುವುದಿಲ್ಲ ಎಂಬ ಮಾತು ಕೇಳಿಬರುತ್ತಿದೆ.

ಸ್ಲೀಪರ್ ಕೋಚ್ ಬೇಡಿಕೆ

ವಂದೇ ಭಾರತ್ ಎಕ್ಸ್‌ಪ್ರೆಸ್ ಪ್ರೀಮಿಯಂ ರೈಲು ಆದ್ದರಿಂದ ಟಿಕೆಟ್ ದರ ಎಲ್ಲರಿಗೂ ಕೈಗೆಟುಕುವಂತಿರಲಿಕ್ಕಿಲ್ಲ. 13 ಗಂಟೆಗಳ ಕಾಲ ಕುಳಿತುಕೊಂಡೇ ಪ್ರಯಾಣಿಸುವುದು ಸಹ ಸುಲಭವಲ್ಲ. ಹೀಗಾಗಿ ಸ್ಲೀಪರ್ ವ್ಯವಸ್ಥೆ ಹೊಂದಿದ ರೈಲು ಈ ಮಾರ್ಗಕ್ಕೆ ಹೆಚ್ಚು ಉಪಯುಕ್ತ ಎಂದು ರೈಲ್ವೆ ಹೋರಾಟಗಾರರು ಅಭಿಪ್ರಾಯಪಟ್ಟಿದ್ದಾರೆ.

ಪ್ರಯಾಣ ಸಮಯವನ್ನು ಕನಿಷ್ಠ 11 ಗಂಟೆಯೊಳಗೆ ಇಳಿಸಬೇಕು ಎಂಬ ಒತ್ತಾಯವೂ ಹೆಚ್ಚಾಗಿದೆ. ಈಗಾಗಲೇ ಬೆಂಗಳೂರು–ಬೆಳಗಾವಿ ಮಾರ್ಗದಲ್ಲಿ ಸಂಚರಿಸುವ ವಂದೇ ಭಾರತ್ ರೈಲನ್ನು ಲೊಂಡಾ ಮಾರ್ಗವಾಗಿ ಗೋವಾಕ್ಕೆ ವಿಸ್ತರಿಸುವ ಸಾಧ್ಯತೆಗಳ ಬಗ್ಗೆ ಚರ್ಚೆ ನಡೆದಿದೆ.

ಈ ಪ್ರಸ್ತಾವನೆ ಈಗ ರೈಲ್ವೆ ಮಂಡಳಿಯ ಅನುಮೋದನೆಗಾಗಿ ಕಾಯುತ್ತಿದೆ. ಸಾರ್ವಜನಿಕರ ಆಕ್ಷೇಪಣೆಗಳು ಮತ್ತು ತಜ್ಞರ ಸಲಹೆಗಳನ್ನು ಮಂಡಳಿ ಪರಿಗಣಿಸಬಹುದೇ ಎಂಬುದು ಕುತೂಹಲ ಹುಟ್ಟಿಸಿದೆ. ಅಂತಿಮ ವೇಳಾಪಟ್ಟಿ ಪ್ರಕಟವಾದ ನಂತರವೇ ಪ್ರಯಾಣಿಕರ ನಿರೀಕ್ಷೆಗೆ ಉತ್ತರ ಸಿಗಲಿದೆ.

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories