ಬೆಂಗಳೂರು ನೈಸ್ ರಸ್ತೆಯಲ್ಲಿ ಡೀಸೆಲ್ ಟ್ಯಾಂಕರ್‌ಗೆ ಬೆಂಕಿ, 4 ಕಿ.ಮೀ. ಟ್ರಾಫಿಕ್ ಜಾಮ್

ಬೆಂಗಳೂರಿನ ನೈಸ್ ರಸ್ತೆಯಲ್ಲಿ ಡೀಸೆಲ್ ಟ್ಯಾಂಕರ್ ಹೊತ್ತಿ ಉರಿದ ಪರಿಣಾಮ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ. ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸಪಡುತ್ತಿದ್ದು, ಪೊಲೀಸರು ಪರ್ಯಾಯ ಮಾರ್ಗ ಕಲ್ಪಿಸಲು ಮುಂದಾಗಿದ್ದಾರೆ.

ಬೆಂಗಳೂರು (Bengaluru): ನಗರದ ನೈಸ್ ರಸ್ತೆಯಲ್ಲಿ ಡೀಸೆಲ್ ಟ್ಯಾಂಕರ್ ಹೊತ್ತಿ ಉರಿದ ಪರಿಣಾಮ ಭಾರೀ ಸಂಚಾರ ದಟ್ಟಣೆ ಉಂಟಾಗಿದೆ. ಕನಕಪುರ ರಸ್ತೆ ಟೋಲ್‌ನಿಂದ ಅಂಜನಾಪುರದ ಕಡೆಗೆ ಬರುತ್ತಿದ್ದ ಟ್ಯಾಂಕರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಬೆಂಕಿಯ ಜ್ವಾಲೆಗಳು ಎತ್ತರಕ್ಕೆ ಚಿಮ್ಮಿವೆ.

ಈ ಘಟನೆಯಿಂದ ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನ ಸವಾರರು ಆತಂಕಕ್ಕೊಳಗಾಗಿದ್ದಾರೆ.

ಘಟನೆ ತಿಳಿಯುತ್ತಿದ್ದಂತೆ ತಲಘಟ್ಟಪುರ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ಆರಂಭಿಸಿದ್ದಾರೆ. ಆದರೆ, ಟ್ಯಾಂಕರ್‌ನಲ್ಲಿ ಬೆಂಕಿ ನಿರಂತರವಾಗಿ ಉರಿಯುತ್ತಿದ್ದ ಹಿನ್ನೆಲೆಯಲ್ಲಿ ಅದನ್ನು ನಿಯಂತ್ರಣಕ್ಕೆ ತರಲು ಸಿಬ್ಬಂದಿ ಹರಸಾಹಸಪಡುತ್ತಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಬೆಳಗ್ಗೆಯಿಂದಲೇ ಮಳೆ ಶುರು; ಕರ್ನಾಟಕ ರಾಜ್ಯದ ಹಲವೆಡೆ ಮಳೆ ಮುನ್ಸೂಚನೆ

ನಾಲ್ಕು ಕಿಲೋಮೀಟರ್‌ವರೆಗೆ ವಾಹನಗಳ ಸಾಲು

ಟ್ಯಾಂಕರ್‌ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಕನಕಪುರ ರಸ್ತೆ ಟೋಲ್ ಸುತ್ತಮುತ್ತ ವಾಹನಗಳು ಸಾಲುಗಟ್ಟಿ ನಿಂತಿವೆ. ನೈಸ್ ರಸ್ತೆಯಲ್ಲಿ ಸುಮಾರು ನಾಲ್ಕು ಕಿಲೋಮೀಟರ್‌ವರೆಗೆ ಸಂಚಾರ ದಟ್ಟಣೆ ಉಂಟಾಗಿದ್ದು, ಹಬ್ಬದ ಪ್ರಯಾಣಕ್ಕೆ ಹೊರಟಿದ್ದ ವಾಹನ ಸವಾರರು ತೀವ್ರ ತೊಂದರೆ ಅನುಭವಿಸುವಂತಾಗಿದೆ.

ದಟ್ಟಣೆ ಹೆಚ್ಚಾಗುತ್ತಿದ್ದಂತೆ ಪೊಲೀಸರು ಸಂಚಾರವನ್ನು ಸರಾಗಗೊಳಿಸಲು ಪರ್ಯಾಯ ವ್ಯವಸ್ಥೆ ಕಲ್ಪಿಸುವ ಪ್ರಯತ್ನ ನಡೆಸಿದ್ದಾರೆ. ಇದೇ ವೇಳೆ, ರಸ್ತೆಯಲ್ಲಿ ಬರುತ್ತಿದ್ದ ಎಂ-ಸ್ಯಾಂಡ್ ಲಾರಿಯನ್ನು ಬಳಸಿಕೊಂಡು ಸುಮಾರು 50 ಸಾವಿರ ರೂಪಾಯಿ ನೀಡಿ ಮರಳನ್ನು ಚರಂಡಿಗೆ ಸುರಿಯುವ ಮೂಲಕ ಬದಲಿ ಮಾರ್ಗ ಸೃಷ್ಟಿಸಲು ಕ್ರಮ ಕೈಗೊಂಡಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಪೆರೋಲ್ ಮೇಲೆ ಹೊರಬಂದು ನಾಪತ್ತೆಯಾಗಿದ್ದ ಕೈದಿ 8 ವರ್ಷಗಳ ಬಳಿಕ ಅರೆಸ್ಟ್

ಸಂಚಾರ ದಟ್ಟಣೆ ತೆರವುಗೊಳಿಸಲು ಪೊಲೀಸರ ಪ್ರಯತ್ನ

ಟ್ಯಾಂಕರ್‌ನಲ್ಲಿನ ಬೆಂಕಿ ನಂದಿಸುವ ಕಾರ್ಯಾಚರಣೆಯ ಜೊತೆಗೆ ರಸ್ತೆಯಲ್ಲಿ ಸಿಲುಕಿರುವ ವಾಹನಗಳನ್ನು ತೆರವುಗೊಳಿಸಿ ಸಂಚಾರ ಪುನಃಸ್ಥಾಪಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಬೆಂಕಿ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬರುವವರೆಗೆ ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ.

ಅವಘಡಕ್ಕೆ ನಿಖರ ಕಾರಣವೇನು ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿದೆಯೇ ಎಂಬ ಬಗ್ಗೆಯೂ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ…

English Summary▼

ಕರ್ನಾಟಕ ರಾಜ್ಯದ ಮೂಲೆಮೂಲೆಗಳ ಕನ್ನಡ ಸುದ್ದಿಗಳ ಜೊತೆಗೆ ದಿನದ ಪ್ರಮುಖ ಬೆಳವಣಿಗೆಗಳನ್ನು Kannada News Today ಮೂಲಕ ತಿಳಿಯಿರಿ.

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories