ಬೀದಿ ಬದಿ ವ್ಯಾಪಾರಿಗಳಿಗೆ ಹೊಸ ಡಿಜಿಟಲ್ ಐಡಿ ಕಾರ್ಡ್ ವಿತರಣೆ! ಜಿಬಿಎ ಸಿದ್ಧತೆ
ಬೆಂಗಳೂರು ನಗರದಲ್ಲಿನ ಸುಮಾರು 23 ಸಾವಿರ ಬೀದಿ ವ್ಯಾಪಾರಿಗಳಿಗೆ ಈ ತಿಂಗಳಲ್ಲೇ ಹೊಸ ಡಿಜಿಟಲ್ ಐಡಿ ಕಾರ್ಡ್ ವಿತರಿಸಲು ಜಿಬಿಎ ಸಿದ್ಧತೆ ನಡೆಸಿದ್ದು, ವ್ಯಾಪಾರಿಗಳ ಸಂಪೂರ್ಣ ಮಾಹಿತಿ ಮೊಬೈಲ್‌ನಲ್ಲೇ ಲಭ್ಯವಾಗಲಿದೆ.

Digital ID Cards For Street Vendors: ಬೆಂಗಳೂರು ನಗರದಲ್ಲಿನ ಬೀದಿ ಬದಿ ವ್ಯಾಪಾರಿಗಳಿಗೆ ಶೀಘ್ರದಲ್ಲೇ ಡಿಜಿಟಲ್ ಸ್ಪರ್ಶ ಸಿಗಲಿದ್ದು, ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಹೊಸ ಐಡಿ ಕಾರ್ಡ್ ವಿತರಣೆ ಮಾಡಲು ಸಕಲ ಸಿದ್ಧತೆ ನಡೆಸಿದೆ. ಈ ಯೋಜನೆಯಡಿ ಮೊದಲ ಹಂತದಲ್ಲಿ ಸುಮಾರು 23 ಸಾವಿರ ವ್ಯಾಪಾರಿಗಳಿಗೆ ಡಿಜಿಟಲ್ ಗುರುತಿನ ಚೀಟಿಗಳನ್ನು ನೀಡಲಾಗುತ್ತದೆ.
ಹೊಸ ಐಡಿ ಕಾರ್ಡ್‌ನಲ್ಲಿ ವ್ಯಾಪಾರಿಗಳ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ವ್ಯಾಪಾರ ನಡೆಸುವ ಸ್ಥಳ ಸೇರಿದಂತೆ ಹಲವು ಮಾಹಿತಿಗಳು ಡಿಜಿಟಲ್ ರೂಪದಲ್ಲಿ ಇರಲಿವೆ. ಇದರಿಂದ ಅಧಿಕಾರಿಗಳಿಗೆ ಮಾಹಿತಿ ಪರಿಶೀಲನೆ ಸುಲಭವಾಗುವುದರ ಜೊತೆಗೆ ವ್ಯಾಪಾರಿಗಳಿಗೂ ಹಲವು ಸೌಲಭ್ಯಗಳು ತ್ವರಿತವಾಗಿ ಸಿಗಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಿಂದೆ ಬಿಬಿಎಂಪಿ ಹೆಸರಿನಲ್ಲಿ ನೀಡಲಾಗಿದ್ದ ಗುರುತಿನ ಚೀಟಿಗಳಿಂದ ಹಲವರಿಗೆ ಸಮಸ್ಯೆಗಳು ಎದುರಾಗಿದ್ದವು. ಕೆಲವೆಡೆ ಪೊಲೀಸರು ಮತ್ತು ಸ್ಥಳೀಯ ಆಡಳಿತದಿಂದ ವ್ಯಾಪಾರಕ್ಕೆ ಅವಕಾಶ ನಿರಾಕರಿಸಿದ ಘಟನೆಗಳೂ ನಡೆದಿದ್ದವು. ಇದೀಗ ಆ ಗೊಂದಲ ತಪ್ಪಿಸಲು ಜಿಬಿಎ ಹೆಸರಿನ ಹೊಸ ಡಿಜಿಟಲ್ ಕಾರ್ಡ್‌ಗಳನ್ನು ವಿತರಿಸಲು ತೀರ್ಮಾನಿಸಲಾಗಿದೆ.
ನಗರ ವ್ಯಾಪ್ತಿಯಲ್ಲಿ ಈಗಾಗಲೇ ಬೀದಿ ವ್ಯಾಪಾರಿಗಳ ಸಮಗ್ರ ಸಮೀಕ್ಷೆ ನಡೆಸಲಾಗಿದ್ದು, ಸುಮಾರು 27 ಸಾವಿರ ಅರ್ಜಿಗಳ ಪೈಕಿ 23 ಸಾವಿರ ಅರ್ಜಿಗಳನ್ನು ಅಂತಿಮಗೊಳಿಸಲಾಗಿದೆ. ವ್ಯಾಪಾರಿಗಳ ಕಲ್ಯಾಣಕ್ಕಾಗಿ ಐದು ನಗರ ಪಾಲಿಕೆಗಳೂ ತಮ್ಮ ಬಜೆಟ್‌ನಲ್ಲಿ ಪ್ರತ್ಯೇಕ ಅನುದಾನ ಮೀಸಲಿಟ್ಟಿವೆ ಎಂದು ಕಲ್ಯಾಣ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪಿಎಂ ಸ್ವನಿಧಿ ಯೋಜನೆ, ಇ-ಮಾರಾಟ ವಾಹನ ಖರೀದಿಗೆ ಸಹಾಯಧನ, ವೈದ್ಯಕೀಯ ವೆಚ್ಚ ಮರುಪಾವತಿ, ಮಕ್ಕಳ ಶಿಕ್ಷಣಕ್ಕೆ ಶುಲ್ಕ ಸಹಾಯಧನ ಸೇರಿದಂತೆ ಹಲವು ಸೌಲಭ್ಯಗಳನ್ನು ಬೀದಿ ವ್ಯಾಪಾರಿಗಳಿಗೆ ನೀಡಲು ಯೋಜಿಸಲಾಗಿದೆ. ಜೊತೆಗೆ ಕೌಶಲ್ಯಾಭಿವೃದ್ಧಿ ತರಬೇತಿಗಳಿಗೂ ಅವಕಾಶ ಕಲ್ಪಿಸಲಾಗುತ್ತಿದೆ.
ಸುಮಾರು 40 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಡಿಜಿಟಲ್ ಐಡಿ ಕಾರ್ಡ್ ಯೋಜನೆ ಜಾರಿಯಾಗುತ್ತಿದ್ದು, ಮೇ ತಿಂಗಳಲ್ಲೇ ವಿತರಣೆ ಪ್ರಕ್ರಿಯೆ ಆರಂಭವಾಗಲಿದೆ. ಕಾರ್ಡ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಭಾವಚಿತ್ರವೂ ಇರಲಿದೆ ಎಂದು ಮೂಲಗಳು ತಿಳಿಸಿವೆ.
ಇದರ ಜೊತೆಗೆ ಪಾದಚಾರಿ ಮಾರ್ಗಗಳಲ್ಲಿ ವ್ಯಾಪಾರ ನಡೆಸುವ ಬಗ್ಗೆ ಹೊಸ ಮಾರ್ಗಸೂಚಿ ರೂಪಿಸಲು ಸರ್ಕಾರ ಮುಂದಾಗಿದೆ. ಸಾರ್ವಜನಿಕರಿಗೆ ತೊಂದರೆ ಆಗದ ರೀತಿಯಲ್ಲಿ ಬೀದಿ ವ್ಯಾಪಾರಕ್ಕೆ ಅವಕಾಶ ಕಲ್ಪಿಸುವ ಹೊಸ ನೀತಿ ಜಾರಿಗೆ ಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.



