ಬೆಂಗಳೂರು ಘಟನೆ! ಅಂತ್ಯಸಂಸ್ಕಾರದ ವೇಳೆ ಬಯಲಾಯ್ತು ಬೆಚ್ಚಿಬೀಳಿಸುವ ಕೊಲೆ ರಹಸ್ಯ

ಬೆಂಗಳೂರಿನಲ್ಲಿ ಮನೆ ಖಾಲಿ ಮಾಡುವ ವಿಚಾರದಲ್ಲಿ ನಡೆದ ಹಲ್ಲೆಯಿಂದ ಅಂಗವಿಕಲ ವ್ಯಕ್ತಿ ಸಾವಿಗೀಡಾದ ಪ್ರಕರಣ ಅಂತ್ಯಸಂಸ್ಕಾರದ ವೇಳೆ ಬಯಲಾಗಿದೆ. ಬಾಯಿಯಿಂದ ರಕ್ತ ಹರಿದಿದ್ದರಿಂದ ಅನುಮಾನಗೊಂಡ ಸಂಬಂಧಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಬೆಂಗಳೂರು (Bengaluru): ಬೆಂಗಳೂರು ನಗರದಲ್ಲಿ ಮನೆ ಖಾಲಿ ಮಾಡುವ ವಿಚಾರಕ್ಕೆ ಸಂಬಂಧಿಸಿದ ಗಲಾಟೆ ಕೊನೆಗೆ ಹತ್ಯೆಯಲ್ಲಿ ಅಂತ್ಯಗೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಆರಂಭದಲ್ಲಿ ಸಹಜ ಸಾವು ಎಂದು ಭಾವಿಸಿದ್ದ ಪ್ರಕರಣ, ಅಂತ್ಯಸಂಸ್ಕಾರದ ಸಮಯದಲ್ಲಿ ಬಯಲಾಗಿ ಪೊಲೀಸರ ತನಿಖೆಗೆ ಕಾರಣವಾಯಿತು.

ಆಸ್ಟಿನ್‌ಟೌನ್ ನಿವಾಸಿ ಇನಾಯತ್ ಪಾಷಾ (52) ಎಂಬ ಅಂಗವಿಕಲ ವ್ಯಕ್ತಿ ಈ ಘಟನೆದಲ್ಲಿ ಸಾವನ್ನಪ್ಪಿದ್ದಾರೆ. ಪ್ರಕರಣ ಸಂಬಂಧ ಮಸೂರ್ ಅಹ್ಮದ್ (22) ಎಂಬಾತನನ್ನು ವಿವೇಕನಗರ ಪೊಲೀಸರು ಬಂಧಿಸಿದ್ದಾರೆ. ಇನಾಯತ್ ಪಾಷಾ ದ್ವಿಚಕ್ರ ವಾಹನ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದು, ಬಾಲ್ಯದಿಂದಲೇ ಪೋಲಿಯೊ ಕಾರಣದಿಂದ ಎಡ ಕಾಲಿನಲ್ಲಿ ಅಂಗವೈಕಲ್ಯ ಹೊಂದಿದ್ದರು.

ಮಾರ್ಚ್ 1ರಂದು ಸಂಜೆ ಪಾಷಾ ಅವರ ಮಗ ಸೈಯದ್ ಮೊಹಮ್ಮದ್ ಅಲಿ ಮನೆಗೆ ಬಂದಾಗ ತಂದೆ ಕಾಣಿಸದಿರುವುದನ್ನು ಗಮನಿಸಿದರು. ಈ ವೇಳೆ ಆರೋಪಿ ಮಸೂರ್ ಅಹ್ಮದ್ ಮನೆಗೆ ಬಂದಿದ್ದು, ಪಾಷಾ ಮದ್ಯಪಾನ ಮಾಡಿದ ನಂತರ ಹಾಸಿಗೆಯಿಂದ ಬಿದ್ದು ಸಾವನ್ನಪ್ಪಿರಬಹುದು ಎಂದು ಕುಟುಂಬ ಸದಸ್ಯರಿಗೆ ಹೇಳಿದ್ದಾನೆ. ಅವರ ಮಾತುಗಳನ್ನು ನಂಬಿದ ಕುಟುಂಬಸ್ಥರು ಇದನ್ನು ಸಹಜ ಸಾವು ಎಂದು ಭಾವಿಸಿದ್ದರು.

ಆದರೆ ಅಂತ್ಯಸಂಸ್ಕಾರದ ತಯಾರಿ ವೇಳೆ ಮೃತದೇಹವನ್ನು ಸ್ನಾನಕ್ಕೆ ತೆಗೆದುಕೊಂಡು ಹೋಗುವಾಗ ಪಾಷಾ ಅವರ ಬಾಯಿಂದ ರಕ್ತದ ಹನಿ ಹರಿಯುತ್ತಿರುವುದು ಸಂಬಂಧಿಕರ ಗಮನಕ್ಕೆ ಬಂದಿದೆ. ಇದರಿಂದ ಅನುಮಾನಗೊಂಡ ಅವರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಧಾವಿಸಿದ ಪೊಲೀಸರು ಅನೈಸರ್ಗಿಕ ಸಾವು ಪ್ರಕರಣ ದಾಖಲಿಸಿ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು. ಪರೀಕ್ಷಾ ವರದಿಯಲ್ಲಿ ಮುಖ ಮತ್ತು ಎದೆಯ ಭಾಗದಲ್ಲಿ ಹಲ್ಲೆ ನಡೆಸಿರುವುದು ಸ್ಪಷ್ಟವಾಗಿದ್ದು, ಇದೇ ಸಾವಿಗೆ ಕಾರಣ ಎಂದು ತಿಳಿದುಬಂದಿದೆ.

ಪ್ರಾಥಮಿಕ ತನಿಖೆಯಲ್ಲಿ ಪಾಷಾ ವಾಸಿಸುತ್ತಿದ್ದ ಮನೆ ಖಾಲಿ ಮಾಡುವಂತೆ ಆರೋಪಿಯ ಕುಟುಂಬ ನಿರಂತರವಾಗಿ ಒತ್ತಡ ಹಾಕುತ್ತಿದ್ದ ವಿಚಾರವೂ ಬೆಳಕಿಗೆ ಬಂದಿದೆ. ವಿಚಾರಣೆ ವೇಳೆ ಮಸೂರ್ ಅಹ್ಮದ್ ಮಾರ್ಚ್ 1ರಂದು ಸಂಜೆ ಪಾಷಾ ಅವರ ಮನೆಗೆ ತೆರಳಿ ಮನೆ ಖಾಲಿ ಮಾಡುವಂತೆ ಹೇಳಿದ್ದಾಗಿ ಒಪ್ಪಿಕೊಂಡಿದ್ದಾನೆ.

ಈ ವೇಳೆ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದೆ. ಗಲಾಟೆ ಹೆಚ್ಚಾಗುತ್ತಿದ್ದಂತೆ ಅಹ್ಮದ್ ಪಾಷಾ ಅವರ ಮುಖ ಮತ್ತು ಕಣ್ಣಿನ ಭಾಗಕ್ಕೆ ಹೊಡೆದು, ಎದೆಯ ಮೇಲೂ ಹಲ್ಲೆ ನಡೆಸಿದ್ದಾನೆ. ಈ ದಾಳಿಯಿಂದ ಪಾಷಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಹತ್ಯೆಯ ನಂತರ ಪ್ರಕರಣವನ್ನು ಮುಚ್ಚಿಹಾಕಲು ಸ್ಥಳವನ್ನು ಸ್ವಚ್ಛಗೊಳಿಸಿ, ಹಾಸಿಗೆಯಿಂದ ಬಿದ್ದು ಸಾವಾಗಿದೆ ಎಂದು ತೋರಿಸಲು ಆರೋಪಿ ಪ್ರಯತ್ನಿಸಿದ್ದ ಎನ್ನಲಾಗಿದೆ. ಆದರೆ ಅಂತ್ಯಸಂಸ್ಕಾರದ ಸಮಯದಲ್ಲಿ ಕಂಡ ಅನುಮಾನದಿಂದ ಕೊಲೆ ರಹಸ್ಯ ಬಯಲಾಗಿದ್ದು, ಇದೀಗ ಪೊಲೀಸರು ಪ್ರಕರಣದ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories