Sabarimala Gold Theft: ಶಬರಿಮಲೆ ಚಿನ್ನ ಕಳವು; ಬೆಂಗಳೂರು ಬಳ್ಳಾರಿ ಸೇರಿ ಹಲವು ಕಡೆ ಇಡಿ ದಾಳಿ
Sabarimala Gold Theft Case: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲದ 4.5 ಕೆಜಿ ಚಿನ್ನ ಕಳವು ಪ್ರಕರಣದಲ್ಲಿ ಹಣಕಾಸು ಅಕ್ರಮ ಶಂಕೆ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ ಬೆಂಗಳೂರು, ಬಳ್ಳಾರಿ ಹಾಗೂ ಕೇರಳದಲ್ಲಿ ಏಕಕಾಲಕ್ಕೆ ಶೋಧ ಕಾರ್ಯಾಚರಣೆ ನಡೆಸಿದೆ.

- ಶಬರಿಮಲೆ ಚಿನ್ನ ಕಳವು ಪ್ರಕರಣದಲ್ಲಿ ಇಡಿ ಎಂಟ್ರಿ
- ಬೆಂಗಳೂರು ಮತ್ತು ಬಳ್ಳಾರಿಯಲ್ಲಿ ಏಕಕಾಲಕ್ಕೆ ಇಡಿ ದಾಳಿ
- ಚಿನ್ನ ಕಳವು ಪ್ರಕರಣ ಮನಿ ಲಾಂಡರಿಂಗ್ ತನಿಖೆ ಗಂಭೀರ
ಬೆಂಗಳೂರು (Bengaluru): ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಸಂಬಂಧಿಸಿದ 4.5 ಕೆಜಿ ಚಿನ್ನ ಕಳವು ಪ್ರಕರಣ ಹೊಸ (Sabarimala Gold Theft Case) ತಿರುವು ಪಡೆದಿದ್ದು, ಜಾರಿ ನಿರ್ದೇಶನಾಲಯ (ED) ಮಂಗಳವಾರ ಮುಂಜಾನೆ ವಿವಿಧ ರಾಜ್ಯಗಳಲ್ಲಿ ದಾಳಿ ನಡೆಸಿದೆ.
ಕರ್ನಾಟಕದ ಬೆಂಗಳೂರು ಮತ್ತು ಬಳ್ಳಾರಿ, ಕೇರಳದ ತಿರುವನಂತಪುರ ಸೇರಿದಂತೆ ಹಲವೆಡೆ ಏಕಕಾಲಕ್ಕೆ ಶೋಧ ಕಾರ್ಯಾಚರಣೆ ಆರಂಭವಾಗಿದೆ.
ಬೆಂಗಳೂರು ನಗರದ ಶ್ರೀರಾಂಪುರ ಪ್ರದೇಶದಲ್ಲಿರುವ ಅಯ್ಯಪ್ಪ ದೇವಸ್ಥಾನ, ಈ ಪ್ರಕರಣದ ಪ್ರಮುಖ ಆರೋಪಿ ಎನ್ನಲಾದ ಉನ್ನಿಕೃಷ್ಣನ್ ಪೊಟ್ಟಿಗೆ ಸೇರಿದ ಮನೆ ಹಾಗೂ ಟ್ರಸ್ಟಿಗಳ ನಿವಾಸಗಳ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಖಲೆಗಳು, ಹಣಕಾಸು ವ್ಯವಹಾರಗಳು ಹಾಗೂ ಚಿನ್ನದ ಸಾಗಣೆ ಸಂಬಂಧಿತ ಮಾಹಿತಿ ಸಂಗ್ರಹಿಸಲಾಗುತ್ತಿದೆ.
ಬಳ್ಳಾರಿಯಲ್ಲಿ ಜ್ಯುವೆಲ್ಲರಿ ಅಂಗಡಿ ಮೇಲೆ ಶೋಧ
ಚಿನ್ನ ಕಳವು ಪ್ರಕರಣದಲ್ಲಿ ಕರ್ನಾಟಕದ ಲಿಂಕ್ ಬಲವಾಗುತ್ತಿದ್ದು, ಬಳ್ಳಾರಿಯ ಪ್ರತಿಷ್ಠಿತ ರೊದ್ದಂ ಜ್ಯುವೆಲ್ಲರಿ ಅಂಗಡಿ ಮತ್ತು ಅದರ ಮಾಲೀಕ ಗೋವರ್ಧನ್ ನಿವಾಸದ ಮೇಲೂ ಇಡಿ ದಾಳಿ ನಡೆಸಿದೆ. ಸುಮಾರು 9 ಮಂದಿ ಅಧಿಕಾರಿಗಳ ತಂಡ ದಾಖಲೆಗಳ ಪರಿಶೀಲನೆ ಮತ್ತು ವಿಚಾರಣೆಯಲ್ಲಿ ತೊಡಗಿದೆ.
ಗೋವರ್ಧನ್ ಈ ಪ್ರಕರಣದಲ್ಲಿ ಪ್ರಮುಖ ಪಾತ್ರವಹಿಸಿದ್ದಾನೆ ಎಂಬ ಆರೋಪಗಳು ಈಗಾಗಲೇ ಕೇಳಿಬಂದಿದ್ದು, ಅಕ್ರಮವಾಗಿ 470 ಗ್ರಾಂ ಚಿನ್ನ ಖರೀದಿ ಮಾಡಿದ ಆರೋಪದ ಮೇಲೆ ಕೇರಳ ಎಸ್ಐಟಿ ಪೊಲೀಸರು ಗೋವರ್ಧನ್ನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು.
ಮನಿ ಲಾಂಡರಿಂಗ್ ಶಂಕೆ ಏಕೆ?
ಈ ಪ್ರಕರಣ ಕೇವಲ ಚಿನ್ನ ಕಳುವಿಗೆ ಸೀಮಿತವಾಗಿಲ್ಲ ಎಂಬ ಅನುಮಾನ ತನಿಖಾಧಿಕಾರಿಗಳಲ್ಲಿ ಬಲವಾಗಿದೆ. ಅಕ್ರಮ ಹಣ ವರ್ಗಾವಣೆ, ಚಿನ್ನದ ಮಾರಾಟದಿಂದ ಬಂದ ಹಣದ ಹಾದಿ ಮತ್ತು ಪ್ರಭಾವಿಗಳ ಕೈವಾಡದ ಬಗ್ಗೆ ಗಂಭೀರ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಇಡಿ ಮನಿ ಲಾಂಡರಿಂಗ್ ಕಾಯ್ದೆ (PMLA) ಅಡಿಯಲ್ಲಿ ತನಿಖೆ ಆರಂಭಿಸಿದೆ.
ಮುಖ್ಯ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ ದೇಗುಲದಿಂದ ಕಳವು ಮಾಡಿದ್ದ ಚಿನ್ನವನ್ನು ಬಳ್ಳಾರಿಯ ವ್ಯಾಪಾರಿಗಳಿಗೆ ಮಾರಾಟ ಮಾಡಿದ್ದಾನೆ ಎಂಬ ಆರೋಪಗಳು ತನಿಖೆಯ ಕೇಂದ್ರಬಿಂದುವಾಗಿವೆ.
ಶಬರಿಮಲೆ ಚಿನ್ನ ಕಳವು ಪ್ರಕರಣದ ಹಿನ್ನೆಲೆ
2019ರಲ್ಲಿ ಶಬರಿಮಲೆ ಅಯ್ಯಪ್ಪ ದೇಗುಲದ ದ್ವಾರಪಾಲಕ ವಿಗ್ರಹಗಳಿಗೆ ಚಿನ್ನದ ಲೇಪನ ಮಾಡುವ ವೇಳೆ ಸುಮಾರು 4.5 ಕೆಜಿ ಚಿನ್ನ ನಾಪತ್ತೆ ಆಗಿತ್ತು. ಈ ಘಟನೆ ದೊಡ್ಡ ವಿವಾದಕ್ಕೆ ಕಾರಣವಾಗಿ, ಕೇರಳ ಹೈಕೋರ್ಟ್ ತನಿಖೆಗೆ ಆದೇಶ ನೀಡಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಬರಿಮಲೆಯ ಮಾಜಿ ಮುಖ್ಯ ಅರ್ಚಕ (ತಂತ್ರಿ) ಕಂದರಾರು ರಾಜೀವ್, ತಿರುವಾಂಕೂರು ದೇವಸ್ವಂ ಮಂಡಳಿಯ ಮಾಜಿ ಅಧ್ಯಕ್ಷರು ಸೇರಿದಂತೆ 12ಕ್ಕೂ ಹೆಚ್ಚು ಮಂದಿಯನ್ನು ಈಗಾಗಲೇ ಬಂಧಿಸಲಾಗಿದೆ. ಇದೀಗ ಇಡಿ ತನಿಖೆಯಿಂದ ಪ್ರಕರಣ ಇನ್ನಷ್ಟು ವ್ಯಾಪಕವಾಗುವ ಸಾಧ್ಯತೆ ಇದೆ.



