ಪೊಲೀಸ್ ಸೋಗಿನಲ್ಲಿ ಸುಲಿಗೆ, ಬೆಂಗಳೂರಿನಲ್ಲಿ ನಕಲಿ ಪಿಎಸ್‌ಐ ಸೇರಿ ನಾಲ್ವರ ಬಂಧನ

ಪೊಲೀಸ್ ಸೋಗಿನಲ್ಲಿ ಜನರನ್ನು ಬೆದರಿಸಿ ಹಣ ಕಿತ್ತುಕೊಂಡಿದ್ದ ನಕಲಿ ಪಿಎಸ್‌ಐ ಸೇರಿ ನಾಲ್ವರನ್ನು ಬೆಂಗಳೂರು ವಿದ್ಯಾರಣ್ಯಪುರ ಪೊಲೀಸರು ಬಂಧಿಸಿದ್ದು, ಸುಲಿಗೆ ಪ್ರಕರಣದ ಹಿಂದಿನ ಅಚ್ಚರಿ ಸತ್ಯಗಳು ಬೆಳಕಿಗೆ ಬಂದಿವೆ.

  • ಪೊಲೀಸ್ ಸಮವಸ್ತ್ರದಲ್ಲಿ ಸುಲಿಗೆ ನಡೆಸಿದ್ದ ನಕಲಿ ಪಿಎಸ್‌ಐ ಬಂಧನ
  • ಬೆಂಗಳೂರು ವಿದ್ಯಾರಣ್ಯಪುರ ಠಾಣೆ ಪೊಲೀಸರಿಂದ ನಾಲ್ವರ ಅರೆಸ್ಟ್
  • ಪೊಲೀಸರಿಂದ 45 ಸಾವಿರ ನಗದು ಹಾಗೂ ಕಾರು ಜಪ್ತಿ

ಬೆಂಗಳೂರು (Bengaluru): ಪೊಲೀಸ್ ಸಮವಸ್ತ್ರ ಧರಿಸಿ ಜನರನ್ನು ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ ನಕಲಿ ಪಿಎಸ್‌ಐ ಮಲ್ಲಿಕಾರ್ಜುನ್ ಸೇರಿದಂತೆ ನಾಲ್ವರನ್ನು ಬೆಂಗಳೂರು ನಗರ ವಿದ್ಯಾರಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಐಷಾರಾಮಿ ಜೀವನ ನಡೆಸಬೇಕೆಂಬ ಆಸೆಯೇ ಈ ಅಪರಾಧಕ್ಕೆ ಕಾರಣವಾಗಿದ್ದು, ಮಲ್ಲಿಕಾರ್ಜುನ್‌ಗೆ ಪ್ರಮೋದ್, ವಿನಯ್ ಹಾಗೂ ಋತ್ವಿಕ್ ಸಹಕಾರ ನೀಡಿದ್ದರೆಂದು ತನಿಖೆಯಲ್ಲಿ ತಿಳಿದುಬಂದಿದೆ.

ಮನೆ ಶೋಧದ ಹೆಸರಿನಲ್ಲಿ ದಾಳಿ

ಬಂಧಿತ ಋತ್ವಿಕ್, ನವೀನ್ ಎಂಬುವವರ ಬಗ್ಗೆ ಮಾಹಿತಿ ಕಲೆಹಾಕಿ, ಅವರ ಮನೆಯಲ್ಲಿ ಹಣ ಹಾಗೂ ಚಿನ್ನಾಭರಣ ಇರಬಹುದು ಎಂದು ಮಲ್ಲಿಕಾರ್ಜುನ್‌ಗೆ ತಿಳಿಸಿದ್ದ. ಡಿಸೆಂಬರ್ 7ರಂದು ಆರೋಪಿಗಳು ಪೊಲೀಸ್ ಸಮವಸ್ತ್ರ ಧರಿಸಿ ಕಾರಿನಲ್ಲಿ ನವೀನ್ ಮನೆಗೆ ತೆರಳಿ, ಗಾಂಜಾ ಮಾರಾಟ ಆರೋಪ ಮಾಡಿ ಮನೆ ಶೋಧ ನಡೆಸುವುದಾಗಿ ಬೆದರಿಸಿದ್ದಾರೆ. ಈ ವೇಳೆ ಲಾಠಿ ಹಾಗೂ ಕಬ್ಬಿಣದ ರಾಡ್ ಬಳಸಿ ಹಲ್ಲೆ ನಡೆಸಿ, ಹಣ ನೀಡದಿದ್ದರೆ ಬಂಧಿಸುವುದಾಗಿ ಧಮ್ಕಿ ಹಾಕಿದ್ದಾರೆ.

ಖಾತೆ ಹಣ ಸಹಿತ ನಗದು ಸುಲಿಗೆ

ನವೀನ್ ಅವರ ಖಾತೆಯಿಂದ 87 ಸಾವಿರ ರೂ. ವರ್ಗಾಯಿಸಿಕೊಂಡು, ಮನೆಯಲ್ಲಿದ್ದ 53 ಸಾವಿರ ರೂ. ಹಾಗೂ ಪರ್ಸ್‌ನಲ್ಲಿದ್ದ 2 ಸಾವಿರ ರೂ. ಪಡೆದು ಆರೋಪಿಗಳು ಪರಾರಿಯಾಗಿದ್ದರು. ಬಳಿಕ ನವೀನ್ ವಿದ್ಯಾರಣ್ಯಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದರು.

ಕಾರ್ಯಾಚರಣೆ ಫಲಿತಾಂಶ

ತನಿಖೆ ನಡೆಸಿದ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿ, ಅವರಿಂದ 45 ಸಾವಿರ ರೂಪಾಯಿ ನಗದು ಹಾಗೂ ಕೃತ್ಯಕ್ಕೆ ಬಳಸಿದ್ದ ಕಾರನ್ನು ಜಪ್ತಿ ಮಾಡಿದ್ದಾರೆ. ಆರೋಪಿಗಳು ಪದೇಪದೇ ಇದೇ ರೀತಿಯ ಸುಲಿಗೆ ನಡೆಸಿದ್ದಾರೆಯೇ ಎಂಬ ಬಗ್ಗೆ ತನಿಖೆ ಮುಂದುವರಿದಿದೆ.

ನಕಲಿ ಪಿಎಸ್‌ಐ ನಾಟಕ

ಮಲ್ಲಿಕಾರ್ಜುನ್ ಪಿಎಸ್‌ಐ ಆಗಬೇಕೆಂಬ ಆಸೆಯಿಂದ ಎರಡು ಬಾರಿ ಪರೀಕ್ಷೆ ಬರೆದಿದ್ದರೂ ವಿಫಲನಾಗಿದ್ದ. ಆದರೂ ತಾನು ಪಿಎಸ್‌ಐ ಆಗಿದ್ದೇನೆ ಎಂದು ಊರಿನವರ ಮುಂದೆ ಬಿಂಬಿಸಿಕೊಂಡಿದ್ದ. ಪೊಲೀಸ್ ಸಮವಸ್ತ್ರ, ಲಾಠಿ, ಟೋಪಿ, ಶೂ ಧರಿಸಿ ಫೋಟೋ ಶೂಟ್ ಮಾಡಿಸಿಕೊಂಡು, ಸ್ವಗ್ರಾಮ ಸಿರಗುಪ್ಪದಲ್ಲಿ ಬೆಂಗಳೂರಿನಲ್ಲಿ ಪಿಎಸ್‌ಐ ಆಗಿದ್ದೇನೆ ಎಂದು ಹೇಳಿಕೊಂಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರತ್ಯೇಕ ಪ್ರಕರಣ: ಪೊಲೀಸರ ಸೋಗಿನಲ್ಲಿ ರೂಮ್‌ಗೆ ನುಗ್ಗಿದ ಗ್ಯಾಂಗ್

ಇದೇ ರೀತಿಯ ಮತ್ತೊಂದು ಪ್ರಕರಣದಲ್ಲಿ, ಪೊಲೀಸರ ಸೋಗಿನಲ್ಲಿ ರೂಮ್‌ಗೆ ನುಗ್ಗಿ ಸುಲಿಗೆ ನಡೆಸಿದ್ದ ಆರು ಮಂದಿಯನ್ನು ಇತ್ತೀಚೆಗೆ ಹೆಚ್ಎಎಲ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕೇರಳ ಮೂಲದ ಮುಹಮ್ಮದ್ ನಜಾಶ್ ಸೇರಿದಂತೆ ಆರು ಮಂದಿ, ಯುವತಿಯರ ರೂಮ್‌ಗೆ ನುಗ್ಗಿ ಮೊಬೈಲ್‌ಗಳನ್ನು ಕಿತ್ತುಕೊಂಡು, 5 ಲಕ್ಷ ರೂಪಾಯಿ ನೀಡದಿದ್ದರೆ ಮತ್ತೆ ಬರುವುದಾಗಿ ಬೆದರಿಸಿದ್ದರು. ತನಿಖೆಯಲ್ಲಿ ಈ ಕೃತ್ಯದಲ್ಲಿ ಯುವತಿಯ ಪರಿಚಿತನ ಕೈವಾಡವಿದ್ದದ್ದು ಬಹಿರಂಗವಾಗಿದೆ.

TRENDING ARTICLES1 / 7
Show More

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories