ನಿಯಂತ್ರಣ ತಪ್ಪಿದ ಕಾರು ಪಲ್ಟಿ! ತಂದೆ-ಮಗ ಸಾವು, ಮಗಳಿಗೆ ಗಂಭೀರ ಗಾಯ

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ನಿಯಂತ್ರಣ ತಪ್ಪಿದ ಕಾರು ಪಲ್ಟಿಯಾಗಿ ತಂದೆ ಮತ್ತು ಮಗ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಬಾಲಕಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾಳೆ.

ಮಂಡ್ಯ ಜಿಲ್ಲೆಯ ಕೋಣನಹಳ್ಳಿ ಸಮೀಪದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ನಡೆದ ಭೀಕರ ರಸ್ತೆ ಅಪಘಾತ ಒಂದು ಕುಟುಂಬದ ಸಂತೋಷವನ್ನು ಕ್ಷಣಾರ್ಧದಲ್ಲಿ ಕಸಿದುಕೊಂಡಿದೆ. ಮದುವೆ ಸಮಾರಂಭ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ ವೇಳೆ ಕಾರು ಪಲ್ಟಿಯಾಗಿ ತಂದೆ ಮತ್ತು ಮಗ ಮೃತಪಟ್ಟಿದ್ದಾರೆ.

ಮೃತರನ್ನು ಕಚಿಗೆರೆ ಗ್ರಾಮದ ನಿವಾಸಿ ಕಿರಣ್ (40) ಹಾಗೂ ಅವರ ಪುತ್ರ ಕಿಶೋರ್ (15) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಕಿರಣ್ ಅವರ ಪುತ್ರಿ ಕೀರ್ತನಾ (14) ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪೊಲೀಸರ ಮಾಹಿತಿ ಪ್ರಕಾರ, ಕಾರು ವೇಗವಾಗಿ ಸಾಗುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಸೇತುವೆ ಬಳಿ ಪಲ್ಟಿಯಾಗಿದೆ. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ಜಖಂಗೊಂಡಿದ್ದು, ಸ್ಥಳದಲ್ಲೇ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.

ಮೈಸೂರಿನಲ್ಲಿ ನಡೆದ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಕುಟುಂಬ ತಮ್ಮ ಊರಿಗೆ ಮರಳುತ್ತಿತ್ತು. ಆದರೆ ಮನೆ ತಲುಪುವ ಮುನ್ನವೇ ದುರಂತ ಸಂಭವಿಸಿದ್ದು, ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.

ಅಪಘಾತದ ಬಳಿಕ ಸ್ಥಳಕ್ಕೆ ಧಾವಿಸಿದ ಮಂಡ್ಯ ಕೇಂದ್ರ ಪೊಲೀಸ್ ಠಾಣೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮಂಡ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆ (MIMS) ಆಸ್ಪತ್ರೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಮುಂದುವರಿಸಲಾಗಿದೆ.

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories