ಅಪ್ರಾಪ್ತ ಮಗನನ್ನು ಜೊತೆಯಲ್ಲಿ ಸೇರಿಸಿಕೊಂಡು ಕಳ್ಳತನ ಮಾಡುತ್ತಿದ್ದ ಅಪ್ಪ ಅರೆಸ್ಟ್!
ಬೆಂಗಳೂರಿನಲ್ಲಿ ಅಪ್ರಾಪ್ತ ಪುತ್ರನನ್ನು ಜೊತೆಯಲ್ಲಿ ಸೇರಿಸಿಕೊಂಡು ಬೀಗ ಹಾಕಿದ ಮನೆಗಳನ್ನು ಗುರುತಿಸಿ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆತನಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

- ಅಪ್ಪ-ಮಗನ ಕಳ್ಳತನ ಪ್ರಕರಣ: ಆರೋಪಿ ಬಂಧನ
- 18 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಪೊಲೀಸರ ವಶಕ್ಕೆ
- 161 ಗ್ರಾಂ ಚಿನ್ನ, 150 ಗ್ರಾಂ ಬೆಳ್ಳಿ ಜಪ್ತಿ
ಬೆಂಗಳೂರು (Bengaluru) ನಗರದ ಒಳ್ಳಗಾನಹಳ್ಳಿ ಹಾಗೂ ಕೃಷ್ಣಪ್ಪ ಲೇಔಟ್ನಲ್ಲಿ ನಡೆದಿದ್ದ ಮನೆಗಳ್ಳತನ ಪ್ರಕರಣಗಳ ತನಿಖೆ ನಡೆಸಿದ ಕೋಣನಕುಂಟೆ ಠಾಣೆ ಪೊಲೀಸರು, ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಹರಿನಗರ ನಿವಾಸಿ ಬಾಬಾಜಾನ್ನನ್ನು ಬಂಧಿಸಿದ್ದಾರೆ. ಆರೋಪಿಯಿಂದ ಒಟ್ಟು 18 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪೊಲೀಸರ ಪ್ರಕಾರ, ಬಾಬಾಜಾನ್ (Babajan) ತನ್ನ ಅಪ್ರಾಪ್ತ ಪುತ್ರನನ್ನು ಕೂಡ ಕಳ್ಳತನಕ್ಕೆ (Theft With Minor Son) ಬಳಸಿಕೊಂಡಿದ್ದಾನೆ ಎನ್ನಲಾಗಿದೆ. ಮನೆ ಮಾಲೀಕರು ಹೊರಗೆ ಹೋಗಿರುವುದನ್ನು ಗಮನಿಸಿ, ಬೀಗ ಹಾಕಿರುವ ಮನೆಗಳನ್ನು ಗುರುತಿಸುತ್ತಿದ್ದ ಆರೋಪಿಗಳು ಬಳಿಕ ಕಿಟಕಿ ಅಥವಾ ಹಿಂಬಾಗಿಲು ಮುರಿದು ಒಳನುಗ್ಗುತ್ತಿದ್ದರು. ಮನೆಯಲ್ಲಿದ್ದ ಚಿನ್ನಾಭರಣ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ಕದ್ದೊಯ್ಯುತ್ತಿದ್ದರು.
ಇತ್ತೀಚೆಗೆ ಒಳ್ಳಗಾನಹಳ್ಳಿ ಮತ್ತು ಕೃಷ್ಣಪ್ಪ ಲೇಔಟ್ನಲ್ಲಿ ಎರಡು ಪ್ರತ್ಯೇಕ ಮನೆಗಳಲ್ಲಿ ಕಳ್ಳತನ ನಡೆದಿತ್ತು. ಈ ಕುರಿತು ದೂರು ದಾಖಲಾಗುತ್ತಿದ್ದಂತೆ ಕೋಣನಕುಂಟೆ ಪೊಲೀಸರು (Konanakunte Police) ತನಿಖೆ ಚುರುಕುಗೊಳಿಸಿದ್ದರು. ತಾಂತ್ರಿಕ ಮಾಹಿತಿ (Technical Investigation) ಆಧರಿಸಿ ಆರೋಪಿಯ ಚಲನವಲನದ ಬಗ್ಗೆ ಸುಳಿವು ಪಡೆದು, ಹರಿನಗರದಲ್ಲಿರುವ ಆತನ ನಿವಾಸದ ಮೇಲೆ ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ.
ವಿಚಾರಣೆ ವೇಳೆ ಬಾಬಾಜಾನ್ ತನ್ನ ಅಪ್ರಾಪ್ತ ಮಗನೊಂದಿಗೆ ಸೇರಿ ಕಳ್ಳತನ ನಡೆಸಿರುವುದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ ಎನ್ನಲಾಗಿದೆ. ಆತ ನೀಡಿದ ಸುಳಿವಿನ ಮೇರೆಗೆ ಹರಿನಗರದ ಮನೆ, ವೀವರ್ಸ್ ಕಾಲೋನಿ ಹಾಗೂ ಹಬ್ಬಗೋಡಿ-ಹರಿನಗರದಲ್ಲಿರುವ ಜ್ಯುವೆಲ್ಲರಿ ಅಂಗಡಿಗಳಲ್ಲಿ ಅಡವಿಟ್ಟಿದ್ದ ಕದ್ದ ವಸ್ತುಗಳನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.
ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ 161 ಗ್ರಾಂ ಚಿನ್ನಾಭರಣ (Gold Jewellery) ಮತ್ತು 150 ಗ್ರಾಂ ಬೆಳ್ಳಿ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಕದ್ದ ಆಭರಣಗಳನ್ನು ವಿವಿಧೆಡೆ ಅಡವಿಟ್ಟು ಹಣ ಮಾಡಿಕೊಂಡಿರುವ ಸಾಧ್ಯತೆಯ ಹಿನ್ನೆಲೆಯಲ್ಲಿ ತನಿಖೆ ಮುಂದುವರಿದಿದೆ.



