ಬೆಂಗಳೂರು, ಹೊಸಕೋಟೆ: ಉಚಿತ ಬ್ಯೂಟಿ ಪಾರ್ಲರ್ ತರಬೇತಿ ಶಿಬಿರಕ್ಕೆ ಅರ್ಜಿ ಆಹ್ವಾನ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನಲ್ಲಿ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯಿಂದ ನಿರುದ್ಯೋಗಿ ಮಹಿಳೆಯರಿಗೆ 35 ದಿನಗಳ ಉಚಿತ ಬ್ಯೂಟಿ ಪಾರ್ಲರ್ ತರಬೇತಿ ಶಿಬಿರಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

- ಉಚಿತ ಬ್ಯೂಟಿ ಪಾರ್ಲರ್ ತರಬೇತಿ
- ನಿರುದ್ಯೋಗಿ ಮಹಿಳೆಯರಿಗೆ ಅವಕಾಶ
- ಊಟ, ವಸತಿ, ತರಬೇತಿ ಸಂಪೂರ್ಣ ಉಚಿತ
ಬೆಂಗಳೂರು (Bengaluru): ಸ್ವಯಂ ಉದ್ಯೋಗದ ಮೂಲಕ ಜೀವನದಲ್ಲಿ ಮುಂದುವರೆಯಲು ಬಯಸುವ ಮಹಿಳೆಯರಿಗೆ ಉತ್ತಮ ಅವಕಾಶ ಲಭ್ಯವಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ಸೊಣ್ಣಹಳ್ಳಿಪುರದಲ್ಲಿರುವ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ನಿರುದ್ಯೋಗಿ ಮಹಿಳೆಯರಿಗಾಗಿ ಉಚಿತ ಬ್ಯೂಟಿ ಪಾರ್ಲರ್ ತರಬೇತಿ (Free Beauty Parlour Training) ಶಿಬಿರವನ್ನು ಆಯೋಜಿಸಿದೆ.
ಈ ತರಬೇತಿ ಶಿಬಿರವು 2026 ಏಪ್ರಿಲ್ 1ರಿಂದ 35 ದಿನಗಳ ಕಾಲ ನಡೆಯಲಿದೆ. ತರಬೇತಿಯ ಅವಧಿಯಲ್ಲಿ ಭಾಗವಹಿಸುವ ಮಹಿಳೆಯರಿಗೆ ತರಬೇತಿಯ ಜೊತೆಗೆ ಊಟ ಮತ್ತು ವಸತಿ ಸೌಲಭ್ಯಗಳನ್ನೂ ಉಚಿತವಾಗಿ ಒದಗಿಸಲಾಗುತ್ತದೆ. ತರಬೇತಿಯ ಬಳಿಕ ಕೇಂದ್ರ ಸರ್ಕಾರದ ಗ್ರಾಮೀಣ ಅಭಿವೃದ್ಧಿ ಸಚಿವಾಲಯದಿಂದ ಪ್ರಮಾಣಪತ್ರ ನೀಡಲಾಗುತ್ತದೆ.
ಈ ಶಿಬಿರದಲ್ಲಿ 18 ರಿಂದ 45 ವರ್ಷದೊಳಗಿನ ಕರ್ನಾಟಕದ ಯಾವುದೇ ಜಿಲ್ಲೆಯ ನಿರುದ್ಯೋಗಿ ಮಹಿಳೆಯರು ಭಾಗವಹಿಸಬಹುದು. ವಿಶೇಷವಾಗಿ ಗ್ರಾಮೀಣ ಪ್ರದೇಶದ ಬಿಪಿಎಲ್ ವರ್ಗದ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಅಭ್ಯರ್ಥಿಗಳು ಸ್ಥಳೀಯ ಭಾಷೆ ತಿಳಿದಿರಬೇಕು ಹಾಗೂ ಕನ್ನಡ ಓದಲು ಮತ್ತು ಬರೆಯಲು ತಿಳಿದಿರಬೇಕು ಎಂಬುದು ಅನಿವಾರ್ಯವಾಗಿದೆ.
ಆಸಕ್ತ ಮಹಿಳೆಯರು ಮಾರ್ಚ್ 23, 2026 ರಂದು ಬೆಳಿಗ್ಗೆ 10 ಗಂಟೆಗೆ ಸೊಣ್ಣಹಳ್ಳಿಪುರದಲ್ಲಿರುವ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಗೆ ಅಗತ್ಯ ದಾಖಲೆಗಳೊಂದಿಗೆ ನೇರವಾಗಿ ಹಾಜರಾಗಬಹುದು.
ಯಾವುದೇ ಕಾರಣದಿಂದ ಸಂದರ್ಶನಕ್ಕೆ ಹಾಜರಾಗಲು ಸಾಧ್ಯವಾಗದಿದ್ದಲ್ಲಿ, ಅಭ್ಯರ್ಥಿಗಳು 23 ಮಾರ್ಚ್ 2026 ರೊಳಗೆ ಸಂಸ್ಥೆಯ ದೂರವಾಣಿ ಸಂಖ್ಯೆಗಳಾದ 8970476050, 9591514154, 9686248369, 6363139123, 9505894247ಗಳಿಗೆ ಸಂಪರ್ಕಿಸಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು ಎಂದು ಸಂಸ್ಥೆಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



