Bengaluru: ಬೆಂಗಳೂರು ಬೀದಿ ನಾಯಿಗಳ ಉಪಟಳಕ್ಕೆ ಕಡಿವಾಣ! ಸೆರೆಗೆ ಜಿಬಿಎ ಸಜ್ಜು

ಬೆಂಗಳೂರು ನಗರದಲ್ಲಿ ಹೆಚ್ಚುತ್ತಿರುವ ಕ್ರೂರ ಬೀದಿ ನಾಯಿಗಳ ಸಮಸ್ಯೆಗೆ ಪರಿಹಾರವಾಗಿ ಜಿಬಿಎ ಸುಮಾರು 2,500 ನಾಯಿಗಳನ್ನು ಗುರುತಿಸಿ ಶೆಲ್ಟರ್ ನಿರ್ಮಾಣಕ್ಕೆ ಐದು ಪಾಲಿಕೆ ವ್ಯಾಪ್ತಿಯಲ್ಲಿ ಜಾಗ ಹುಡುಕಾಟ ಆರಂಭಿಸಿದೆ.

ಬೆಂಗಳೂರು (Bengaluru): ಬೆಂಗಳೂರಿನಲ್ಲಿ ಬೀದಿ ನಾಯಿಗಳ (Stray Dogs) ದಾಳಿಯಿಂದ ಸಾರ್ವಜನಿಕರು ಆತಂಕದಲ್ಲಿರುವ ಸಂದರ್ಭ, ಸಮಸ್ಯೆಗೆ ದೀರ್ಘಕಾಲಿಕ ಪರಿಹಾರ ಹುಡುಕಲು ಜಿಬಿಎ ಕಾರ್ಯಪ್ರವೃತ್ತವಾಗಿದೆ. ನಗರದಲ್ಲಿ ಒಟ್ಟು ಸುಮಾರು 2.30 ಲಕ್ಷಕ್ಕೂ ಹೆಚ್ಚು ಬೀದಿ ನಾಯಿಗಳಿದ್ದು, ಅವುಗಳಲ್ಲಿ 2,500ಕ್ಕೂ ಹೆಚ್ಚು ನಾಯಿಗಳನ್ನು ಕ್ರೂರ ಸ್ವಭಾವದವೆಂದು ಗುರುತಿಸಲಾಗಿದೆ.

ನಾಯಿಗಳ ಕಡಿತ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ, ಆಸ್ಪತ್ರೆಗಳಿಗೆ ತೆರಳುವವರ ಸಂಖ್ಯೆ ಕೂಡ ಏರಿಕೆಯಾಗುತ್ತಿದೆ. ಈ ಪರಿಸ್ಥಿತಿಯಲ್ಲಿ ಕ್ರೂರ ನಾಯಿಗಳನ್ನು ಪ್ರತ್ಯೇಕವಾಗಿ ಹಿಡಿದು ಸಂರಕ್ಷಿಸಲು ಶೆಲ್ಟರ್ ನಿರ್ಮಾಣ ಮಾಡುವ ಯೋಜನೆ ರೂಪಿಸಲಾಗಿದೆ.

ಈಗಾಗಲೇ ಭಂಗೀಪುರ, ಬೆಟ್ಟಹಳ್ಳಿ ಮತ್ತು ಮಹದೇವಪುರ ಹೊರವಲಯದಲ್ಲಿ ಜಾಗ ಗುರುತಿಸಲಾಗಿದ್ದು, ಇನ್ನಿತರ ಪಾಲಿಕೆ ವ್ಯಾಪ್ತಿಗಳಲ್ಲೂ ಹುಡುಕಾಟ ಮುಂದುವರಿದಿದೆ.

ಸುಮಾರು 7 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುವ ಈ ಶೆಲ್ಟರ್‌ಗಳಲ್ಲಿ ಪ್ರತಿ ಕೇಂದ್ರದಲ್ಲಿ 500 ರಿಂದ 600 ನಾಯಿಗಳಿಗೆ ವ್ಯವಸ್ಥೆ ಕಲ್ಪಿಸುವ ಉದ್ದೇಶವಿದೆ. ಪ್ರಾಣಿ ಕಾಯ್ದೆ ಅನುಸಾರ ಅವುಗಳಿಗೆ ಆಹಾರ, ರೇಬೀಸ್ ಲಸಿಕೆ, ಸಂತಾನಹರಣ ಶಸ್ತ್ರಚಿಕಿತ್ಸೆ ಹಾಗೂ ಅಗತ್ಯ ಚಿಕಿತ್ಸೆ ಒದಗಿಸಲಾಗುತ್ತದೆ.

ಸುಪ್ರೀಂ ಕೋರ್ಟ್ ಮಾರ್ಗಸೂಚಿಯನ್ನೂ ಗಮನದಲ್ಲಿಟ್ಟುಕೊಂಡು, ಮಾನವೀಯ ದೃಷ್ಟಿಕೋನದಿಂದ ಸಮಸ್ಯೆ ಬಗೆಹರಿಸಲು ಜಿಬಿಎ ಮುಂದಾಗಿದೆ. ಜನರ ಸುರಕ್ಷತೆ ಹಾಗೂ ಪ್ರಾಣಿಗಳ ಕಲ್ಯಾಣ ಎರಡನ್ನೂ ಸಮತೋಲನದಲ್ಲಿ ಇಡುವ ಪ್ರಯತ್ನ ಇದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಒಟ್ಟಿನಲ್ಲಿ, ಬೀದಿ ನಾಯಿಗಳ ಉಪಟಳಕ್ಕೆ ಕಡಿವಾಣ ಹಾಕಲು ನಗರಾಡಳಿತ ಕೈಗೊಂಡಿರುವ ಈ ಹೆಜ್ಜೆ ಸಾರ್ವಜನಿಕರಲ್ಲಿ ಒಂದು ಮಟ್ಟಿನ ನೆಮ್ಮದಿ ಮೂಡಿಸಿದೆ.

Related Stories