ಬೆಂಗಳೂರು ಮಾಲೀಕರೆ ಎಚ್ಚರ! ಖಾಲಿ ನಿವೇಶನ ಸ್ವಚ್ಛವಿಲ್ಲದಿದ್ದರೆ ಭಾರೀ ದಂಡ

ಬೆಂಗಳೂರಿನ ಖಾಲಿ ನಿವೇಶನಗಳನ್ನು ಆಗಸ್ಟ್ 15ರೊಳಗೆ ಸ್ವಚ್ಛಗೊಳಿಸುವಂತೆ ಜಿಬಿಎ ಸೂಚನೆ ನೀಡಿದ್ದು, ನಿಯಮ ಪಾಲಿಸದ ಮಾಲೀಕರಿಗೆ ದಂಡ, ತೆರವು ವೆಚ್ಚ ವಸೂಲಿ ಹಾಗೂ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದೆ.

ಬೆಂಗಳೂರು: ರಾಜಧಾನಿಯಲ್ಲಿ ಖಾಲಿ ನಿವೇಶನಗಳನ್ನು ಕಸದ ತೊಟ್ಟಿಯಂತೆ ಬಳಸುವ ಪ್ರವೃತ್ತಿಗೆ ಕಡಿವಾಣ ಹಾಕಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಕಠಿಣ ಕ್ರಮಕ್ಕೆ ಮುಂದಾಗಿದೆ. ನಗರದ ವಿವಿಧ ಭಾಗಗಳಲ್ಲಿ ತ್ಯಾಜ್ಯ ಸಮಸ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಖಾಲಿ ಜಾಗಗಳ ಮಾಲೀಕರಿಗೆ ಆಗಸ್ಟ್ 15ರವರೆಗೆ ಅಂತಿಮ ಗಡುವು ನೀಡಲಾಗಿದೆ.

ಗಡುವಿನೊಳಗೆ ನಿವೇಶನವನ್ನು ಸ್ವಚ್ಛಗೊಳಿಸದಿದ್ದರೆ ಪಾಲಿಕೆಯೇ ಸ್ಥಳವನ್ನು ಸ್ವಚ್ಛಗೊಳಿಸಿ, ಅದಕ್ಕೆ ತಗುಲುವ ಸಂಪೂರ್ಣ ವೆಚ್ಚವನ್ನು ಸಂಬಂಧಿತ ಮಾಲೀಕರಿಂದಲೇ ವಸೂಲಿ ಮಾಡಲಿದೆ. ನಿವೇಶನದ ವಿಸ್ತೀರ್ಣ ಹಾಗೂ ತೆರವುಗೊಳಿಸಲಾದ ತ್ಯಾಜ್ಯದ ಪ್ರಮಾಣವನ್ನು ಆಧರಿಸಿ ಈ ಮೊತ್ತ ನಿಗದಿಯಾಗಲಿದೆ. ಈ ವೆಚ್ಚವನ್ನು ಆಸ್ತಿ ತೆರಿಗೆಯೊಂದಿಗೆ ವಸೂಲಿ ಮಾಡುವ ವ್ಯವಸ್ಥೆ ಜಾರಿಯಾಗಲಿದೆ.

ಜಿಬಿಎ ಮುಖ್ಯ ಆಯುಕ್ತ ಎಂ. ಮಹೇಶ್ವರರಾವ್ ಅವರ ನಿರ್ದೇಶನದಂತೆ ಆಗಸ್ಟ್ ತಿಂಗಳಿಂದ ‘ತ್ಯಾಜ್ಯದಿಂದ ಸ್ವಾತಂತ್ರ್ಯ’ ಅಭಿಯಾನ ಆರಂಭವಾಗಲಿದೆ. ಈ ಅಭಿಯಾನದಡಿ ನಗರದ ಬ್ಲಾಕ್ ಸ್ಪಾಟ್‌ಗಳು, ರಸ್ತೆ ಬದಿಯಲ್ಲಿರುವ ಕಟ್ಟಡ ತ್ಯಾಜ್ಯ, ಮರದ ಕೊಂಬೆಗಳು, ಬಳಕೆಯಾಗದ ವಿದ್ಯುತ್ ಕಂಬಗಳು ಹಾಗೂ ಇತರೆ ತ್ಯಾಜ್ಯವನ್ನು ತೆರವುಗೊಳಿಸುವ ವಿಶೇಷ ಕಾರ್ಯಾಚರಣೆ ನಡೆಯಲಿದೆ.

ನಿಯಮ ಉಲ್ಲಂಘಿಸುವ ನಿವೇಶನದಾರರಿಗೆ ಕಠಿಣ ದಂಡವೂ ವಿಧಿಸಲಾಗುತ್ತದೆ. ಮೊದಲ ಬಾರಿ ನಿಯಮ ಉಲ್ಲಂಘಿಸಿದರೆ ₹25,000 ದಂಡ ವಿಧಿಸಲಾಗುತ್ತದೆ. ನಂತರವೂ ನಿಯಮ ಪಾಲಿಸದಿದ್ದರೆ ₹50,000ರಿಂದ ₹1 ಲಕ್ಷದವರೆಗೆ ದಂಡ ಕಟ್ಟಬೇಕಾಗುತ್ತದೆ. ತೆರಿಗೆ ಅಥವಾ ವಸೂಲಾತಿ ಬಾಕಿ ಉಳಿದರೆ ಕರ್ನಾಟಕ ಭೂಕಂದಾಯ ಕಾಯ್ದೆ-1964ರ ಪ್ರಕಾರ ಮುಂದಿನ ಕಾನೂನು ಕ್ರಮ ಜರುಗಲಿದೆ.

ಇದರ ಜೊತೆಗೆ ನಿವೇಶನ ಸ್ವಚ್ಛಗೊಳಿಸಿದ ನಂತರ ಮತ್ತೆ ಕಸ ಸುರಿಯದಂತೆ ಜಾಗದ ಸುತ್ತ ಬೇಲಿ ಅಥವಾ ಕಾಂಪೌಂಡ್ ನಿರ್ಮಿಸುವ ಜವಾಬ್ದಾರಿಯೂ ಮಾಲೀಕರ ಮೇಲಿದೆ ಎಂದು ಜಿಬಿಎ ಸ್ಪಷ್ಟಪಡಿಸಿದೆ.

ಸಾರ್ವಜನಿಕರ ಸಹಭಾಗಿತ್ವಕ್ಕೂ ಅವಕಾಶ ಕಲ್ಪಿಸಿರುವ ಪ್ರಾಧಿಕಾರ, ಆಗಸ್ಟ್ 15ರ ಬಳಿಕವೂ ಸ್ವಚ್ಛಗೊಳಿಸದ ಖಾಲಿ ನಿವೇಶನಗಳ ಬಗ್ಗೆ ಮಾಹಿತಿ ನೀಡುವಂತೆ ಮನವಿ ಮಾಡಿದೆ. ಸ್ಥಳದ ಫೋಟೋ ಹಾಗೂ GPS ಮಾಹಿತಿ ಜೊತೆಗೆ 9448197197 ಸಂಖ್ಯೆಗೆ ವಾಟ್ಸ್‌ಆಪ್ ಮೂಲಕ ದೂರು ಸಲ್ಲಿಸಬಹುದು. ದೂರುದಾರರ ಮಾಹಿತಿಯನ್ನು ಸಂಪೂರ್ಣ ಗೌಪ್ಯವಾಗಿಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.

ನಗರವನ್ನು ಸ್ವಚ್ಛವಾಗಿಡುವ ಉದ್ದೇಶದಿಂದ ಆರಂಭಿಸಿರುವ ಈ ಕ್ರಮದ ಬಳಿಕ ಖಾಲಿ ನಿವೇಶನಗಳನ್ನು ನಿರ್ಲಕ್ಷ್ಯ ಮಾಡುವ ಮಾಲೀಕರಿಗೆ ಆರ್ಥಿಕ ಹೊರೆ ತಪ್ಪುವುದು ಕಷ್ಟವಾಗಲಿದೆ.

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories