ಜಿಲೆಟಿನ್ ಕಡ್ಡಿ ಮೂಲ ಪತ್ತೆಗೆ ಪೊಲೀಸರ ತೀವ್ರ ತನಿಖೆ! ಆರು ವಿಶೇಷ ತಂಡ ರಚನೆ
ಪ್ರಧಾನಿ ಮೋದಿ ಭೇಟಿ ವೇಳೆ ಬೆಂಗಳೂರು ಹೊರವಲಯದಲ್ಲಿ ಜಿಲೆಟಿನ್ ಕಡ್ಡಿಗಳಿದ್ದ ಅನುಮಾನಾಸ್ಪದ ಬಾಕ್ಸ್ ಪತ್ತೆಯಾಗಿ ಭದ್ರತಾ ವಲಯದಲ್ಲಿ ತೀವ್ರ ಆತಂಕ ಮೂಡಿತು. ಪ್ರಕರಣದ ತನಿಖೆಗೆ ಪೊಲೀಸರು ಆರು ವಿಶೇಷ ತಂಡಗಳನ್ನು ರಚಿಸಿದ್ದಾರೆ.

ಬೆಂಗಳೂರು ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತಾ ವ್ಯವಸ್ಥೆಯ ಮಧ್ಯೆ ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಮೋದಿ ಸಂಚರಿಸುವ ಮಾರ್ಗದ ಸಮೀಪವೇ ಜಿಲೆಟಿನ್ ಕಡ್ಡಿಗಳಿದ್ದ ಅನುಮಾನಾಸ್ಪದ ಬಾಕ್ಸ್ ಪತ್ತೆಯಾಗಿತ್ತು, ಕೆಲಕಾಲ ಭದ್ರತಾ ಇಲಾಖೆಯಲ್ಲಿ ತೀವ್ರ ಗೊಂದಲ ಸೃಷ್ಟಿಸಿತ್ತು. ಕಗ್ಗಲೀಪುರದ ತಾತಗುಣಿ ಭಾಗದಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ತಕ್ಷಣವೇ ಹೈ ಅಲರ್ಟ್ ಘೋಷಿಸಿದ್ದರು.
ಮೇ 10ರಂದು ಪ್ರಧಾನಿ ಮೋದಿ ‘ಆರ್ಟ್ ಆಫ್ ಲಿವಿಂಗ್’ ಆಶ್ರಮ ಕಾರ್ಯಕ್ರಮಕ್ಕೆ ತೆರಳಬೇಕಿದ್ದ ಸಂದರ್ಭದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. ಪ್ರಧಾನಿ ಆಗಮಿಸುವುದಕ್ಕೂ ಸುಮಾರು ಎರಡು ಗಂಟೆಗಳ ಮುಂಚೆ ವಡೇರಹಳ್ಳಿ ಗೇಟ್ ಸಮೀಪ ರಸ್ತೆ ಬದಿಯಲ್ಲಿ ಬಿದ್ದಿದ್ದ ಬಾಕ್ಸ್‌ನ್ನು ಭದ್ರತೆಗೆ ನಿಯೋಜನೆಗೊಂಡಿದ್ದ ಕಾನ್‌ಸ್ಟೆಬಲ್ ಗಮನಿಸಿದ್ದರು. ಅನುಮಾನಾಸ್ಪದ ವಸ್ತು ಕಂಡ ತಕ್ಷಣ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತು.
ಸ್ಥಳಕ್ಕೆ ದೌಡಾಯಿಸಿದ ಬಾಂಬ್ ನಿಷ್ಕ್ರಿಯ ದಳ ಬಾಕ್ಸ್ ಪರಿಶೀಲನೆ ನಡೆಸಿದಾಗ ಅದರೊಳಗೆ ಎರಡು ಜಿಲೆಟಿನ್ ಕಡ್ಡಿಗಳು, ಬ್ಯಾಟರಿಗಳು, ಮ್ಯಾಚ್ ಬಾಕ್ಸ್ ಹಾಗೂ ಗಂಧದ ಕಡ್ಡಿಗಳು ಪತ್ತೆಯಾಗಿದ್ದವು. ಆರೋಪಿಯು ಬಾಕ್ಸ್ ಸುತ್ತ ಟೇಪ್ ಸುತ್ತಿ ರಸ್ತೆ ಬದಿಗೆ ಎಸೆದಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ. ಸ್ಫೋಟಕ ವಸ್ತುಗಳನ್ನು ವಶಕ್ಕೆ ಪಡೆದ ಬಳಿಕ ಇಡೀ ಮಾರ್ಗವನ್ನು ಮತ್ತೊಮ್ಮೆ ತೀವ್ರ ತಪಾಸಣೆಗೆ ಒಳಪಡಿಸಲಾಯಿತು.
ಪ್ರಕರಣದ ಗಂಭೀರತೆಯನ್ನು ಮನಗಂಡ ಪೊಲೀಸರು ಆರು ವಿಶೇಷ ತಂಡಗಳನ್ನು ರಚಿಸಿ ತನಿಖೆ ಆರಂಭಿಸಿದ್ದಾರೆ. ಸಿಸಿಟಿವಿ ದೃಶ್ಯಗಳ ಪರಿಶೀಲನೆ ನಡೆಯುತ್ತಿದ್ದು, ಬೆಂಗಳೂರು ದಕ್ಷಿಣ ಹಾಗೂ ರಾಮನಗರ ಭಾಗದ ಕ್ವಾರಿಗಳಲ್ಲಿ ಬಳಸುವ ಜಿಲೆಟಿನ್ ಕಡ್ಡಿಗಳ ಮಾಹಿತಿ ಕೂಡ ಸಂಗ್ರಹಿಸಲಾಗುತ್ತಿದೆ. ಘಟನೆ ನಡೆದ ಸ್ಥಳದ ಸುತ್ತಮುತ್ತ ರಾತ್ರಿ ವೇಳೆ ಯಾರಾದರೂ ಬಾಕ್ಸ್ ಇಟ್ಟಿರಬಹುದೇ ಎಂಬ ಕೋಣೆಯಲ್ಲೂ ತನಿಖೆ ಮುಂದುವರಿದಿದೆ.
ಇದಕ್ಕೂ ಮೊದಲು ಪ್ರಧಾನಿ ಭೇಟಿ ಹಿನ್ನೆಲೆ ಬಾಂಬ್ ಸ್ಕ್ವಾಡ್ ಪರಿಶೀಲನೆ ನಡೆಸಲಾಗಿತ್ತು. ಆದರೆ ಬೆಳಗಿನ ಜಾವ ಈ ಬಾಕ್ಸ್ ಅಲ್ಲಿ ಇರಿಸಲಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಕೇಂದ್ರ ವಲಯ ಡಿಐಜಿ ಗಿರೀಶ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಮಗ್ರ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಕಾನ್‌ಸ್ಟೆಬಲ್‌ನ ಸಮಯಪ್ರಜ್ಞೆಯಿಂದ ದೊಡ್ಡ ಅನಾಹುತ ತಪ್ಪಿದಂತಾಗಿದ್ದು, ಈ ಘಟನೆ ಭದ್ರತಾ ವ್ಯವಸ್ಥೆಯ ಬಗ್ಗೆ ಹೊಸ ಚರ್ಚೆಗೆ ಕಾರಣವಾಗಿದೆ.



