Bengaluru Rains: ಬೆಂಗಳೂರು ಮಳೆ ಅಬ್ಬರ: ಬೆಳಗ್ಗೆಯೇ ಸುರಿದ ವರ್ಷಧಾರೆ, ನಗರಕ್ಕೆ 3 ದಿನ ಅಲರ್ಟ್

Bengaluru Rains: ಬೆಂಗಳೂರಿನಲ್ಲಿ ಬೆಳಗ್ಗೆಯೇ ಭಾರಿ ಮಳೆ ಸುರಿದು ಮೆಜೆಸ್ಟಿಕ್, ಕೆಆರ್ ಮಾರುಕಟ್ಟೆ, ಶಾಂತಿನಗರ ಸೇರಿ ಹಲವು ಪ್ರದೇಶಗಳಲ್ಲಿ ಜನಜೀವನ ಅಸ್ತವ್ಯಸ್ತವಾಯಿತು; ಮುಂದಿನ ಮೂರು ದಿನ ಗುಡುಗು ಸಹಿತ ಮಳೆಯ ಮುನ್ಸೂಚನೆ ಹವಾಮಾನ ಇಲಾಖೆ ನೀಡಿದೆ.

Bengaluru Rains: ಸೋಮವಾರ ಬೆಳಿಗ್ಗೆ ಬೆಂಗಳೂರು ನಗರವು ಏಕಾಏಕಿ ಮಳೆಯ ಅಬ್ಬರಕ್ಕೆ ಸಾಕ್ಷಿಯಾಯಿತು. ಮೆಜೆಸ್ಟಿಕ್, ಶಾಂತಿನಗರ, ಯಶವಂತಪುರ, ಮಲ್ಲೇಶ್ವರ ಸೇರಿದಂತೆ ಹಲವು ಪ್ರದೇಶಗಳಲ್ಲಿ ತುಸು ಹೊತ್ತಿನಲ್ಲೇ ಭಾರಿ ಮಳೆಯಾಗಿದ್ದು, ಜನರ ದೈನಂದಿನ ಚಟುವಟಿಕೆಗಳಿಗೆ ವ್ಯತ್ಯಯ ಉಂಟಾಯಿತು. ಕೆಲಸಕ್ಕೆ ತೆರಳುವವರಿಗೂ, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೂ ಅಸೌಕರ್ಯ ಎದುರಾಯಿತು.

ಕೆಆರ್ ಮಾರುಕಟ್ಟೆ ಪ್ರದೇಶದಲ್ಲಿ ಬೆಳಗಿನ ವ್ಯವಹಾರ ಜೋರಾಗಿದ್ದಾಗಲೇ ಮಳೆ ಸುರಿದಿದ್ದು, ವ್ಯಾಪಾರಿಗಳು ಮತ್ತು ಗ್ರಾಹಕರು ತೊಂದರೆ ಅನುಭವಿಸಿದರು. ಕೆಲವೆಡೆ ನೀರು ನಿಂತಿದ್ದು, ವಾಹನ ಸಂಚಾರವೂ ನಿಧಾನಗೊಂಡ ದೃಶ್ಯ ಕಂಡುಬಂತು.

ಮುಂದಿನ 72 ಗಂಟೆಗಳ ಮಳೆ ಮುನ್ಸೂಚನೆ

ನಗರದಲ್ಲಿ ಮುಂದಿನ ಮೂರು ದಿನಗಳ ಕಾಲ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ. ವಿಶೇಷವಾಗಿ ಸಂಜೆ ಅಥವಾ ರಾತ್ರಿ ವೇಳೆಯಲ್ಲಿ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ.

ಮೇ 4 ಮತ್ತು 5 ರಂದು ಭಾಗಶಃ ಮೋಡ ಕವಿದ ವಾತಾವರಣ ಮುಂದುವರಿಯಲಿದ್ದು, ಕೆಲವೊಮ್ಮೆ ಹಗುರದಿಂದ ಸಾಧಾರಣ ಮಳೆಯಾಗುವ ಸಂಭವವಿದೆ. ಮಳೆಯ ಸಮಯದಲ್ಲಿ ಗಂಟೆಗೆ 30-40 ಕಿಮೀ ವೇಗದ ಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಜನರು ಎಚ್ಚರಿಕೆಯಿಂದಿರಲು ಸೂಚಿಸಲಾಗಿದೆ.

ತಾಪಮಾನ ಮತ್ತು ಇತರ ಜಿಲ್ಲೆಗಳ ಸ್ಥಿತಿ

ನಗರದಲ್ಲಿ ಗರಿಷ್ಠ ತಾಪಮಾನವು 35-36 ಡಿಗ್ರಿ ಸೆಲ್ಶಿಯಸ್ ನಡುವೆ ಉಳಿಯಲಿದ್ದು, ಕನಿಷ್ಠ ತಾಪಮಾನ 23 ಡಿಗ್ರಿಯ ಸುತ್ತಮುತ್ತ ಇರಲಿದೆ. ದಕ್ಷಿಣ ಒಳನಾಡಿನ ರಾಮನಗರ, ಮೈಸೂರು ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲಿ ಭಾರೀ ಮಳೆಯಾಗುವ ಸೂಚನೆ ಇದೆ.

ಎಚ್ಚರಿಕೆ ಅಗತ್ಯ

ಮುಂದಿನ ದಿನಗಳಲ್ಲಿ ಮಳೆಯ ತೀವ್ರತೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇರುವುದರಿಂದ, ನಗರ ನಿವಾಸಿಗಳು ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವುದು ಸೂಕ್ತ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ. ವಿಶೇಷವಾಗಿ ಟ್ರಾಫಿಕ್ ಹಾಗೂ ನೀರು ನಿಲುವಿನ ಸಮಸ್ಯೆ ಇರುವ ಪ್ರದೇಶಗಳಲ್ಲಿ ಜಾಗ್ರತೆ ಅಗತ್ಯ.

Related Stories