ಬೆಂಗಳೂರು: ಧಾರಾಕಾರ ಮಳೆಗೆ ಥಿಯೇಟರ್ ಮೇಲ್ಛಾವಣಿ ಕುಸಿತ, ಪ್ರೇಕ್ಷಕನಿಗೆ ಗಾಯ
ಬೆಂಗಳೂರಿನಲ್ಲಿ ಸಂಜೆ ಸುರಿದ ಭಾರೀ ಮಳೆಗೆ ಹಲವು ರಸ್ತೆಗಳು ಜಲಾವೃತಗೊಂಡಿದ್ದು, ಪೀಣ್ಯ ಬಳಿಯ ಚಿತ್ರಮಂದಿರದ ಮೇಲ್ಛಾವಣಿ ಕುಸಿದು ಸಿನಿಮಾ ನೋಡುತ್ತಿದ್ದ ಪ್ರೇಕ್ಷಕರೊಬ್ಬರು ಗಾಯಗೊಂಡಿದ್ದಾರೆ.

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಸಂಜೆ ಸುರಿದ ಧಾರಾಕಾರ ಮಳೆಯಿಂದ (Heavy Rain) ನಗರದ ಹಲವು ಭಾಗಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಏರ್‌ಪೋರ್ಟ್ ರಸ್ತೆ, ಹೆಬ್ಬಾಳ, ರಾಜಾಜಿನಗರ, ಮೆಜೆಸ್ಟಿಕ್, ವಿಜಯನಗರ ಸೇರಿದಂತೆ ಹಲವೆಡೆ ರಸ್ತೆಗಳ ಮೇಲೆ ಮಳೆ ನೀರು ನಿಂತು ವಾಹನ ಸಂಚಾರಕ್ಕೆ ತೊಂದರೆಯಾಗಿದೆ.
ಮಳೆಯ ಅಬ್ಬರದ ನಡುವೆಯೇ ಪೀಣ್ಯ-ದಾಸರಹಳ್ಳಿ ಸಮೀಪದ ಭಾರತೀ ಚಿತ್ರಮಂದಿರದಲ್ಲಿ (Theatre Roof Collapses) ಅವಘಡ ಸಂಭವಿಸಿದೆ. ಸಿನಿಮಾ ವೀಕ್ಷಿಸುತ್ತಿದ್ದ ವೇಳೆ ಥಿಯೇಟರ್‌ನ ಮೇಲ್ಛಾವಣಿಯ ಒಂದು ಭಾಗ ಏಕಾಏಕಿ ಕುಸಿದು ಪ್ರೇಕ್ಷಕನ ಮೇಲೆ ಬಿದ್ದಿದೆ. ಘಟನೆಯಲ್ಲಿ ಪ್ರೇಕ್ಷಕನ ತಲೆಗೆ ಗಂಭೀರವಾಗಿ ಗಾಯವಾಗಿದೆ.
ಅವಘಡ ಸಂಭವಿಸಿದ ತಕ್ಷಣ ಚಿತ್ರಮಂದಿರದ ಸಿಬ್ಬಂದಿ ಸಿನಿಮಾ ಪ್ರದರ್ಶನವನ್ನು ಸ್ಥಗಿತಗೊಳಿಸಿದ್ದಾರೆ. ಗಾಯಗೊಂಡ ವ್ಯಕ್ತಿಯನ್ನು ಸಮೀಪದ ಆಸ್ಪತ್ರೆಗೆ (Hospital) ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.
ಇತ್ತ ಭಾರೀ ಮಳೆಯಿಂದಾಗಿ ನಗರದ ಹಲವು ಪ್ರಮುಖ ರಸ್ತೆಗಳು ಜಲಾವೃತಗೊಂಡಿವೆ. ಬಳಗೆರೆ ರಸ್ತೆಗೆ ಸಂಪರ್ಕ ಕಲ್ಪಿಸುವ ಜಂಕ್ಷನ್ ಬಳಿ ನೀರು ನಿಂತು ಮಿನಿ ಕೆರೆಯಂತಾಗಿದೆ. ವೈಟ್‌ಫೀಲ್ಡ್‌ನ ವಿಬ್‌ಗಯಾರ್ ರಸ್ತೆಯಲ್ಲೂ ಹೆಚ್ಚಿನ ಪ್ರಮಾಣದಲ್ಲಿ ನೀರು ನಿಂತಿದ್ದು, ವಾಹನ ಸವಾರರು ಪರದಾಡುವಂತಾಗಿದೆ.
ನೀರು ನಿಂತ ಪರಿಣಾಮ ಕೆಲವು ವಾಹನಗಳು ರಸ್ತೆಯಲ್ಲೇ ಕೆಟ್ಟು ನಿಂತಿವೆ. ಸಹಕಾರ ನಗರದಲ್ಲೂ ಮಳೆ ನೀರು ಸರಾಗವಾಗಿ ಹರಿದುಹೋಗದೆ ರಸ್ತೆಯಲ್ಲೇ ನಿಂತಿದೆ. ಮೋರಿ (Drainage) ಬ್ಲಾಕ್ ಆಗಿರುವುದರಿಂದ ಸ್ಥಳೀಯರು ಹಾಗೂ ವಾಹನ ಸವಾರರು ಸಮಸ್ಯೆ ಎದುರಿಸುತ್ತಿದ್ದಾರೆ.
ನಗರದ ಹಲವೆಡೆ ಮಳೆಯ ಕಾರಣ ಸಂಚಾರ ನಿಧಾನಗೊಂಡಿದ್ದು, ಕೆಲವು ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ (Traffic Jam) ಕೂಡ ಉಂಟಾಗಿದೆ. ಸಂಜೆ ವೇಳೆಯಲ್ಲಿ ಕಚೇರಿಯಿಂದ ಮನೆಗೆ ತೆರಳುತ್ತಿದ್ದವರು ಹೆಚ್ಚಿನ ತೊಂದರೆ ಅನುಭವಿಸಿದರು.
ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ಬೆಂಗಳೂರು ಸಂಚಾರ ಪೊಲೀಸರು (Bengaluru Traffic Police) ವಾಹನ ಸವಾರರಿಗೆ ಎಚ್ಚರಿಕೆ ನೀಡಿದ್ದಾರೆ. ಮಳೆ ನೀರು ನಿಂತಿರುವ ಪ್ರದೇಶಗಳಲ್ಲಿ ನಿಧಾನವಾಗಿ ವಾಹನ ಚಲಾಯಿಸುವಂತೆ ಹಾಗೂ ಅಗತ್ಯವಿಲ್ಲದಿದ್ದರೆ ಭಾರೀ ಮಳೆಯ ಸಂದರ್ಭದಲ್ಲಿ ಪ್ರಯಾಣ ತಪ್ಪಿಸುವಂತೆ ಸೂಚಿಸಿದ್ದಾರೆ.
ನಗರದ ಸಂಚಾರ ಪರಿಸ್ಥಿತಿ ಮತ್ತು ರಸ್ತೆಗಳಲ್ಲಿ ನೀರು ನಿಂತಿರುವ ಮಾಹಿತಿ ತಿಳಿದುಕೊಳ್ಳಲು ಬಿಟಿಪಿ ಅಸ್ತ್ರಂ ಆ್ಯಪ್ ಹಾಗೂ ಸಂಚಾರ ಪೊಲೀಸರ ಸಾಮಾಜಿಕ ಜಾಲತಾಣಗಳನ್ನು ಪರಿಶೀಲಿಸುವಂತೆ ಪೊಲೀಸರು ಸಲಹೆ ನೀಡಿದ್ದಾರೆ.
ಕರ್ನಾಟಕ ರಾಜ್ಯದ ಮೂಲೆಮೂಲೆಗಳ ಕನ್ನಡ ಸುದ್ದಿಗಳ ಜೊತೆಗೆ ದಿನದ ಪ್ರಮುಖ ಬೆಳವಣಿಗೆಗಳನ್ನು Kannada News Today ಮೂಲಕ ತಿಳಿಯಿರಿ.



